ಬುಧವಾರ, ಮಾರ್ಚ್ 29, 2023
23 °C

ಕರಾವಳಿ ರಕ್ಷಣಾ ಪಡೆ ದಿನಾಚರಣೆ; ಆಳ ಸಮುದ್ರದಲ್ಲಿ ರಕ್ಷಣೆ; ಅಣಕು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುಡು ಬಿಸಿಲು, ಕಣ್ಣುಹಾಯಿಸಿದಷ್ಟೂ  ನೀರು, ಕೂಗಿದರೂ ಯಾರಿಗೂ ಕೇಳಿಸದ ಕಡೆ ಕಡಲಿನಲ್ಲಿ ಕಳೆದು ಹೋದರೆ, ಅವರ ರಕ್ಷಣೆಗೆ ಕರಾವಳಿ ರಕ್ಷಣಾ ಪಡೆ ಏನೆಲ್ಲ ಮಾಡುತ್ತದೆ ಎಂಬುದನ್ನು ಕಣ್ತುಂಬಿಕೊಳ್ಳುವ ಅವಕಾಶ  ಆಯ್ದ ಸಾರ್ವಜನಿಕರ ಪಾಲಿಗೆ ಗುರುವಾರ ಒದಗಿಬಂತು.

ಕಡಲಿನಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆ ಎಷ್ಟು ಕ್ಲಿಷ್ಟ, ಯಶಸ್ವಿ ರಕ್ಷಣಾ ಕಾರ್ಯಾಚರಣೆಗೆ ಏನೆಲ್ಲ ಕಾಯರ್ತಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂಬುದನ್ನು  ಖುದ್ದು ವೀಕ್ಷಿಸಿದ ಜನರು ಈ ಮೈನವಿರೇಳಿಸುವ ಕಸರತ್ತುಗಳಿಗೆ ಮಾರು ಹೋದರು. ಪಣಂಬೂರಿನ ನವಮಂಗಳೂರು ಬಂದರಿನಿಂದ ಕರಾವಳಿ ರಕ್ಷಣಾ ಪಡೆಯ ಸಚೇತ್‌ ಹಾಗೂ ವರಾಹ ಹಡಗುಗಳಲ್ಲಿ ಕಡಲಿಗೆ ಧಾವಿಸಿದ ನೂರಾರು ಮಂದಿ ಸುಮಾರು ಒಂದೂವರೆ ತಾಸು ನಡೆದ ಈ ಅಣಕು ಕಾರ್ಯಾಚರಣೆಗಳನ್ನು ವೀಕ್ಷಿಸಿದರು. 

ಕರಾವಳಿ ರಕ್ಷಣಾ ಪಡೆಯ ಆರು ನೌಕೆಗಳನ್ನು ಕಡಲ ಒಡಲನ್ನು ಸೀಳಿಕೊಂಡು ಧಾವಿಸುವ ಪರಿ, ಸಮುದ್ರಕ್ಕೆ ಬಿದ್ದವರನ್ನು ರಕ್ಷಿಸಲು ಹೆಲಿಕಾಪ್ಟರ್‌ ಅನ್ನು ಒಂದೇ ಕಡೆ ನಿಲ್ಲಿಸಿ ನಡೆಸುವ ಅಣಕು ಕಾರ್ಯಾಚರಣೆ, ಬೆಂಕಿ ಹೊತ್ತಿಕೊಂಡ ನೌಕೆಯತ್ತ ಹಡಗಿನಿಂದ ಕಾರಂಜಿಯಂತೆ ನೀರು ಹಾರಿಸುತ್ತಾ ಧಾವಿಸುವ ಹಡಗು, ಆಗಸದಲ್ಲಿ ಅನತಿ ದೂರದಲ್ಲಿ ಘರ್ಜಿಸುತ್ತಾ ವೇಗವಾಗಿ ಸಾಗಿ ಬರುವ ಡಾರ್ನಿಯರ್‌ ವಿಮಾನಗಳು, ಗಂಟೆಗೆ 25 ಕಿ.ಮೀ ವೇಗದಲ್ಲಿ ಸಾಗಿಬರುವ ಇಂಟರ್‌ಸೆಪ್ಟರ್‌ ಬೋಟ್‌ಗಳು, ಹಡಗಿನಿಂದ ಹಾರುವ ತುಪಾಕಿ.... ಈ ಅಣಕು ಕಾರ್ಯಾಚರಣೆಗೆ ಸಾಕ್ಷಿಯಾದವರು ಇಂತಹ ಹತ್ತು ಹಲವು ಅವಿಸ್ಮರಣೀಯ ನೆನಪುಗಳ ಬುತ್ತಿಯೊಂದಿಗೆ ದಡಕ್ಕೆ ಮರಳಿದರು.

ಕರಾವಳಿ ರಕ್ಷಣಾ ಪಡೆಯ ವರಾಹ, ಸಚೇತ್‌, ಕಸ್ತೂರಬಾ ಗಾಂಧಿ, ರಾಜದೂತ್‌ ಹಡಗುಗಳು, ಚಾರ್ಲಿ 420, ಚಾರ್ಲಿ 448, ಚಾರ್ಲಿ 155 ನೌಕೆಗಳು, ಎರಡು ಡಾರ್ನಿಯರ್‌ ವಿಮಾನಗಳು ಹಾಗೂ ಎರಡು ಎಲ್ಎಎಚ್‌ ಹೆಲಿಕಾಪ್ಟರ್‌ಗಳು ಸಾಲಾಗಿ ಸಾಗಿಬರುವ ಮೂಲಕ ರಾಜ್ಯಪಾಲರಿಗೆ ನಮನ ಸಲ್ಲಿಸಿದವು.

ಕರಾವಳಿ ರಕ್ಷಣಾ ಪಡೆಯ 47ನೇ ದಿನಾಚರಣೆ ಅಂಗವಾಗಿ ರಾಜ್ಯಪಾಲ ಥಾವರ ಚಂದ್‌ ಗೆಹಲೋತ್‌ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಸರತ್ತುಗಳನ್ನು ವೀಕ್ಷಿಸುವುದಕ್ಕೆ ಕರಾವಳಿ ರಕ್ಷಣಾ ಪಡೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಹಾಗೂ ಅವರ ಬಂಧುಗಳಿಗೆ ಒದಗಿಸಲಾಗಿತ್ತು. 

**

‘ರಕ್ಷಣಾ ಕಾರ್ಯದ ಕ್ಲಿಷ್ಟತೆಯ ಅರಿವಾಯಿತು‘

ಅರಬ್ಬಿ ಸಮುದ್ರದಲ್ಲಿ ಕರಾವಳಿ ರಕ್ಷಣಾ ಪಡೆ ನಡೆಸಿಕೊಟ್ಟ ಕಸರತ್ತು ಮನಮೋಹಕವಾಗಿತ್ತು. ಕಡಲಿನಲ್ಲಿ ಇಷ್ಟು ದೂರ ಪ್ರಯಾಣಿಸಿದ್ದು ಇದೇ ಮೊದಲು. ಕಡಲಿನಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆ ಎಷ್ಟು ಕ್ಲಿಷ್ಟ ಎಂಬುದು ಮನದಟ್ಟಾಯಿತು

ಸೀಮಾ ಪೈ, ಮಂಗಳೂರು

**

‘ದೇಶದ ಬಗ್ಗೆ ಗರ್ವ ಮೂಡಿತು‘

ಕಡಲಿನಲ್ಲಿ ನಡೆದ ಕಸರತ್ತು ನೋಡಿದ ಬಳಿಕ ದೇಶದ ಶಕ್ತಿ ಸಾಮರ್ಥ್ಯದ ಬಗ್ಗೆ ಗರ್ವ ಮೂಡಿತು. ಇಂತಹ ಪ್ರದರ್ಶನಗಳನ್ನು ಮುಂದಿನ ಪೀಳಿಗೆಯವರು ಹೆಚ್ಚು ಹೆಚ್ಚು ನೋಡುವಂತಾಗಬೇಕು. ಅವರಲ್ಲಿ ದೇಶಭಕ್ತಿ ಮೂಡಿಸಲು ಇದು ಸಹಕಾರಿ

ಅಮಿತಾ, ಸಿಐಎಸ್‌ಎಫ್‌ ಸಿಬ್ಬಂದಿಯ ಬಂಧು

**

ಮುಖ್ಯಾಂಶ

ಆಳಸಮುದ್ರದಲ್ಲಿ ರಕ್ಷಣಾ ಕಾರ್ಯಾದ ಅಣಕು ಪ್ರದರ್ಶನ

ನೌಕೆಯ ಬೆಂಕಿ ನಂದಿಸುವ ಕಾರ್ಯಾಚರಣೆ

ರಾಜ್ಯಪಾಲರಿಗೆ ಕರಾವಳಿ ರಕ್ಷಣಾ ಪಡೆಯಿಂದ ನಮನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು