ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ರೈಲ್ವೆ ಜೊತೆ ಕೊಂಕಣ ರೈಲ್ವೆ ವಿಲೀನ

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
Published 4 ಜುಲೈ 2024, 6:12 IST
Last Updated 4 ಜುಲೈ 2024, 6:12 IST
ಅಕ್ಷರ ಗಾತ್ರ

ಮಂಗಳೂರು: ಕೊಂಕಣ ರೈಲ್ವೆ ನಿಗಮವನ್ನು (ಕೆಆರ್‌ಸಿಎಲ್) ಮತ್ತು ಭಾರತೀಯ ರೈಲ್ವೆಯ ಜೊತೆ ವಿಲೀನಗೊಳಿಸಬೇಕು  ಹಾಗೂ ಭಾರತೀಯ ರೈಲ್ವೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳೂ ಈ ನಿಗಮದ ವ್ಯಾಪ್ತಿಯಲ್ಲೂ ಸಿಗುವಂತಾಗಬೇಕು ಎಂದು ಕರಾವಳಿ ಕರ್ನಾಟಕದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾ.ಬ್ರಿಜೇಶ್ ಚೌಟ ಅವರು ‌ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬುಧವಾರ ಒತ್ತಾಯಿಸಿದರು.

ಸಚಿವ ವಿ.ಸೋಮಣ್ಣ ಅವರನ್ನು ನವದೆಹಲಿಯ ಕಚೇರಿಯಲ್ಲಿ ಭೇಟಿಯಾದ ಸಂಸದ ದ್ವಯರು, ಈ ವಿಲೀನ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುವಂತೆ ಕೋರಿದರು. ಮಂಗಳೂರು– ಹಾಸನ ಮಾರ್ಗದಲ್ಲಿ ಜೋಡಿಹಳಿ ನಿರ್ಮಾಣವಾಗುವವರೆಗೆ ಸುಬ್ರಹ್ಮಣ್ಯ ರೋಡ್‌– ಸಕಲೇಶಪುರ ಘಾಟಿಯ ರೈಲು ಹಳಿಗಳ ಸಾಮರ್ಥ್ಯ ವರ್ಧನೆಗೆ ಕ್ರಮ ವಹಿಸಬೇಕು ಎಂದೂ ಒತ್ತಾಯಿಸಿದರು. 

‘ಕೆಆರ್‌ಸಿಎಲ್‌ ಕರಾವಳಿ ಕರ್ನಾಟಕದಲ್ಲಿ ಎಲ್ಲೂ ಮೂಲಸೌಕರ್ಯದ ಸಾಮರ್ಥ್ಯ ವೃದ್ಧಿಗೆ, ಜೋಡಿ ಹಳಿ ನಿರ್ಮಾಣಕ್ಕೆ, ಟರ್ಮಿನಲ್‌ ನಿರ್ಮಾಣಕ್ಕೆ, ರೈಲು ಮಾರ್ಗವನ್ನು ಬಲಪಡಿಸುವುದಕ್ಕೆ ಕ್ರಮವಹಿಸಿಲ್ಲ. ಮೂರು ದಶಕಗಳ ಹಿಂದೆ ಕೆಆರ್‌ಸಿಎಲ್‌ ಆರಂಭವಾದಾಗ ಏನೆಲ್ಲ ಸೌಕರ್ಯಗಳಿದ್ದವೋ ಈಗಲೂ ಅಷ್ಟೇ ಸೌಕರ್ಯಗಳಿವೆ’ ಎಂದು  ಎಂದು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ದೂರಿದ್ದಾರೆ. 

‘ಭಾರತೀಯ ರೈಲ್ವೆಯು ಆಧುನೀಕರಣದತ್ತ ಮುಖಮಾಡಿರುವಾಗ ಕರಾವಳಿ ಕರ್ನಾಟಕದ ಜನರೂ ಇಂತಹ ಸೌಕರ್ಯ ಪಡೆಯಲು ಮುಖ್ಯವಾಹಿನಿ ಸೇರಲು ಬಯಸುತ್ತಾರೆ. ನಿರೀಕ್ಷಿತ ಪ್ರಮಾಣದಲ್ಲಿ ಸೌಕರ್ಯಗಳನ್ನು ಒದಗಿಸದೇ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಲು ಕೆಆರ್‌ಸಿಎಲ್‌ ಸಂಪೂರ್ಣ ವಿಫಲವಾಗಿದೆ. ಭಾರತೀಯ ರೈಲ್ವೆಗೆ ಹೋಲಿಸಿದರೆ, ಕೆಆರ್‌ಸಿಎಲ್‌ ಎಷ್ಟರ ಮಟ್ಟಿಗೆ ವಿಫಲವಾಗಿದೆ ಎಂಬುದು ಸಾರ್ವಜನಿಕರಿಂದ ನನಗೆ ಬಂದಿರುವ ಮನವಿಗಳಿಂದ ಗೊತ್ತಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ರೈಲ್ವೆಯು ಜೋಡಿ ಹಳಿ ನಿರ್ಮಾಣ, ನಾಲ್ಕು ಹಳಿಗಳ ನಿರ್ಮಾಣ, ಸಾಮರ್ಥ್ಯ ಮೇಲ್ದರ್ಜೆಗೇರಿಸುವ  ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಅನುದಾನ ಕೊರತೆಯಿಂದಾಗಿ ಕೆಆರ್‌ಸಿಎಲ್‌ಗೆ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಈ ಭಾಗದ ಜನರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. 30 ವರ್ಷಗಳ ಹಿಂದೆ ಸ್ಥಾಪಿಸಿರುವ ಒಂಟಿ ಹಳಿಯಲ್ಲೇ ಹೆಚ್ಚುವರಿ ರೈಲು ಸೇವೆಗಳ ಒತ್ತಡವನ್ನೂ ನಿಭಾಯಿಸಬೇಕಾಗಿದೆ. ಇದರಿಂದ ರೈಲುಗಳ ಸಮಯಕ್ಕೆ ಸರಿಯಾಗಿ ತಲುಪುವುದಕ್ಕೆ, ಹೊಸ ಸೇವೆಗಳನ್ನು ಆರಂಭಿಸುವುದಕ್ಕೆ ಸಮಸ್ಯೆ ಅಗುತ್ತಿದೆ ಎಂದು ಅವರು ವಿವರಿಸಿದ್ದಾರೆ. 

‘ಕೆಆರ್‌ಸಿಎಲ್‌ ಈಗಲೂ ಪ್ರಯಾಣಿಕರಿಂದ ಹಾಗೂ ಸರಕು ಸಾಗಣೆ ಮಾಡುವವರಿಂದ ಶೇ 40ರಷ್ಟು ಹೆಚ್ಚು ಶುಲ್ಕವನ್ನು ಪಡೆಯುತ್ತಿದೆ. ಈ ಭಾಗದ ಜನರಿಗೆ ಈ ತಾರತಮ್ಯ ನೀತಿ ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರು– ಮಡಗಾಂವ್‌ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮುಂಬೈವರೆಗೆ ವಿಸ್ತರಿಸಬೇಕು. ಈ ಮಾರ್ಗದಲ್ಲಿ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಕೋಟ ಹಾಗೂ ಕ್ಯಾ.ಚೌಟ ಆಗ್ರಹಿಸಿದ್ದಾರೆ.

ಸುಬ್ರಹ್ಮಣ್ಯ ರೋಡ್‌ ಮತ್ತು ಸಕಲೇಶಪುರ ನಡುವೆ ಜೋಡಿ ಹಳಿ ನಿರ್ಮಾಣದ ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳುವಂತೆ ಕ್ಯಾ.ಚೌಟ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT