ಶುಕ್ರವಾರ, ಫೆಬ್ರವರಿ 3, 2023
25 °C
ಟೆಂಡರ್‌ ಅಕ್ರಮದ ತನಿಖೆಗೆ ಕಾಂಗ್ರೆಸ್‌ ಪಟ್ಟು * ಟೆಂಡರ್‌ ಸಿಗದವರ ಪಿತೂರಿ– ಆಡಳಿತ ಪಕ್ಷ

ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾ ಅಳವಡಿಕೆ– ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಮಾಂಡ್ ಕಂಟ್ರೋಲ್ ಸೆಂಟರ್‌ನ ಎರಡನೇ ಹಂತದ ₹ 32 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

 ಪಾಲಿಕೆ ಸಮಾನ್ಯ ಸಭೆಯಲ್ಲಿ ಬುಧವಾರ ಈ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್‌ನ ಎ.ಸಿ.ವಿನಯರಾಜ್‌, ‘ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ಷರತ್ತುಗಳನ್ನು ಸಡಿಲಗೊಳಿಸಲಾಗಿದೆ. ಮಧ್ಯಪ್ರದೇಶ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ್ದ ಟೆಕ್ನೊಸಿಸ್‌ ಸೆಕ್ಯುರಿಟೀಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಈ ಕಾಮಗಾರಿಯ ಸಲಹೆಗಾರ ಸಂಸ್ಥೆಯಾದ ಸ್ಟೆಪ್ ಇನ್ ಸ್ಟೋನ್ ಕಂಪನಿಯೂ ಸ್ವತ ರಾಡಾರ್ ಹಾರ್ಡ್‍ವೇರ್ ವಿತರಣೆಯಲ್ಲಿ ತೊಡಗಿದ್ದು, ಇದು ಹಿತಾಸಕ್ತಿ ಸಂಘರ್ಷಕ್ಕೂ ಕಾರಣವಾಗಿದೆ. ಕಪ್ಪು ಪಟ್ಟಿಗೆ ಸೇರ್ಪಡೆಗೆ ಅನುಸರಿಸಲಾದ ಕ್ರಮ ಸರಿಯಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್‌ ಟೆಕ್ನೋಸಿಸ್‌ ಕಂಪನಿಯನ್ನು ಕಪ್ಪುಪಟ್ಟಿಯಿಂದ ಕೈಬಿಡುವಂತೆ  ಆದೇಶ ಮಾಡಿತ್ತು. ಅದನ್ನೇ ನೆಪವನ್ನಾಗಿಸಿ ಆ ಕಂಪನಿಗೇ ಟೆಂಡರ್‌ ನೀಡಲಾಗಿದೆ. ಆದರೆ, ಆ ಸಂಸ್ಥೆಯು ಈ ಕಾಮಗಾರಿಯ ಟೆಂಡರ್ ಪಡೆಯುವ ಅರ್ಹತೆಯನ್ನೇ ಹೊಂದಿಲ್ಲ’  ಎಂದು ವಿವರಿಸಿದರು.

‘ಈ ಕಂಪನಿಯು ಟೆಂಡರ್‌ ಷರತ್ತಿನಲ್ಲಿ ಉಲ್ಲೇಖಿಸಿದ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಬದಲು ಚೀನಾ ನಿರ್ಮಿತ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದೆ. ಇದನ್ನೂ ಅಧಿಕಾರಿಗಳು ಪರಿಶೀಲಿಸಿಲ್ಲ. ಅಮೆರಿಕ ಹಾಗೂ ಇಂಗ್ಲೆಂಡ್‍ ದೇಶಗಳು ಭದ್ರತೆಯ ಕಾರಣಕ್ಕಾಗಿ ಈ ಕ್ಯಾಮೆರಾಗಳನ್ನು ತಮ್ಮ ದೇಶದಲ್ಲಿ ನಿಷೇಧಿಸಿವೆ. ಅಂತಹ ಸಂಸ್ಥೆಗೆ ನಗರದಲ್ಲಿ ರತ್ನಗಂಬಳಿ ಹಾಸಲಾಗಿದೆ’ ಎಂದು ಟೀಕಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು. 

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ ಹಾಗೂ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ‘ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಸದಸ್ಯರಿಗೆ ಬೇರಾವುದೊ ಹಿತಾಸಕ್ತಿ ಇದ್ದಂತಿದೆ’ ಎಂದು ಟೀಕಿಸಿದರು. ಈ ಬಗ್ಗೆ ಕೆಲಹೊತ್ತು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು. ಆಯುಕ್ತ ಅಕ್ಷಯ್ ಶ್ರೀಧರ್, ‘ಟೆಕ್ನೋಸಿಸ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದನ್ನು ಹೈಕೋರ್ಟ್‌ ರದ್ದುಪಡಿಸಿದೆ. ಹಾಗಾಗಿ ಆ ಕಂಪನಿಗೆ ಟೆಂಡರ್‌ ನೀಡಿರುವುದರಲ್ಲಿ ತಪ್ಪಿಲ್ಲ’ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.

ಇದರಿಂದ ಆಕ್ರೋಶಗೊಂಡ ವಿನಯರಾಜ್‌, ‘ವಕೀಲನಾದ ನನಗೇ ಕಾನೂನು ಕಲಿಸಲು ಬರಬೇಡಿ. ಕಾನೂನು ಏನೆಂದು ನನಗೆ ಗೊತ್ತು’ ಎಂದರು. ಇದಕ್ಕೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಆಯುಕ್ತರು, ‘ಗೊತ್ತಿದ್ದರೆ ಕುಳಿತುಕೊಳ್ಳಿ’ ಎಂದರು. ಆಯುಕ್ತರ ವರ್ತನೆ ಖಂಡಿಸಿದ ವಿರೊಧ ಪಕ್ಷದ ಸದಸ್ಯರು, ‘ಪಾಲಿಕೆಯಲ್ಲಿ ಮೇಯರ್‌ಗೆ ಪರಮಾಧಿಕಾರ. ಸದಸ್ಯರಿಗೆ ಈ ರೀತಿ ಸೂಚಿಸುವ ಅಧಿಕಾರ ಆಯುಕ್ತರಿಗೆ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೇಯರ್‌ ಪೀಠದ ಎದುರು ಧಾವಿಸಿ ಪ್ರತಿಭಟಿಸಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಮೇಯರ್ ಭರವಸೆ ನೀಡಿದ ಬಳಿಕ ಆಸನಗಳಿಗೆ ಮರಳಿದರು.

‘ಟೆಂಡರ್‌ ಅಕ್ರಮದ ತನಿಖೆ ಮಾಡದಿದ್ದರೆ ಎಲ್ಲಿಗೆ ಪ್ರಶ್ನಿಸಬೇಕೋ ಅಲ್ಲೇ ಪ್ರಶ್ನಿಸುತ್ತೇವೆ’ ಎಂದು ವಿನಯರಾಜ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು