ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಗುರು ಪಾಠ ಬಿಡುವ ಪ್ರಶ್ನೆ ಇಲ್ಲ

ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕಾರಣ: ಸುದರ್ಶನ್ ಮೂಡುಬಿದಿರೆ
Last Updated 20 ಮೇ 2022, 16:14 IST
ಅಕ್ಷರ ಗಾತ್ರ

ಮಂಗಳೂರು: ಎಸ್ಸೆಸ್ಸೆಲ್ಸಿ ಪಠ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ನಾರಾಯಣ ಗುರುಗಳ ಹೆಸರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ. ಈ ರೀತಿಯ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್‌ ಮೂಡಬಿದಿರೆ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾರಾಯಣ ಗುರುಗಳ ಹೆಸರನ್ನು ಎಳೆದು ತಂದು ಗೊಂದಲ ಸೃಷ್ಟಿಸಿದ್ದರು. ಇದೀಗ ಪಠ್ಯ ಪುಸ್ತಕದ ನೆಪದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದರು.

ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಹೀಗಾಗಿ, ಕಾಂಗ್ರೆಸ್‌ಗೆ ಯಾವುದೇ ವಿಷಯ ಸಿಗದೆ ಇರುವುದರಿಂದ ಗುರುಗಳ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದೆ. ಈ ಹಿಂದೆ ಕೇರಳದಲ್ಲಿ ಶಿವಗಿರಿ ಮಠವನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಎಂಬುದು ಜಗತ್ತಿಗೇ ಗೊತ್ತಿದೆ. ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದರು.

ಪಠ್ಯ ವಿಷಯವನ್ನು ಮುಂದಿಟ್ಟು ಪ್ರತಿಭಟನೆ ಮಾಡುವುದಾಗಿ ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ಈ ಹಿಂದೆ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡುವುದಕ್ಕೆ ಲೋಬೊ ಹಾಗೂ ಕಾಂಗ್ರೆಸ್‌ನವರು ವಿರೋಧ ವ್ಯಕ್ತಪಡಿಸಿದ್ದರು. ಈಗ ಯಾವ ನೈತಿಕತೆಯಿಂದ ನಾರಾಯಣ ಗುರುಗಳ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

‘ಮಾಜಿ ಶಾಸಕ ರಮಾನಾಥ ರೈ ಕೂಡ ಪಠ್ಯ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಪಠ್ಯ ಮುದ್ರಣ ಆಗದಿರುವಾಗ ಇವರು ವಿನಾಕಾರಣ ಗೊಂದಲ ಸೃಷ್ಟಿಸುವುದೇಕೆ? 7ನೇ ತರಗತಿ ಪಠ್ಯದಲ್ಲೂ ನಾರಾಯಣಗ ಗುರುಗಳ ಪಾಠವಿದೆ. ಅದರಂತೆ ಹತ್ತನೆಯ ತರಗತಿ ಪಠ್ಯದಲ್ಲೂ ಅವರ ಬಗ್ಗೆ ಪಾಠ ಇರಲಿದೆ. ಪಠ್ಯ ಬಿಡುಗಡೆಯಾದಾಗ ರಮಾನಾಥ ರೈಯವರು ಪುಸ್ತಕ ತೆರೆದು ಓದಲಿ’ ಎಂದು ತಿರುಗೇಟು ನೀಡಿದರು.

ಪಂಜೆ ಮಂಗೇಶರಾಯರ ವಿಚಾರ, ಶಿವಾನಂದ ಕಳವೆ ಸೇರಿದಂತೆ ಹಲವು ಪ್ರಮುಖರ ವಿಷಯಗಳು ಹತ್ತನೆಯ ತರಗತಿ ಪಠ್ಯದಲ್ಲಿ ಬರಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರವೇ ಪಠ್ಯಕ್ರಮ ಸಿದ್ಧವಾಗಲಿದೆ. ನಿಜವಾದ ಇತಿಹಾಸವನ್ನು ಪಠ್ಯದಲ್ಲಿ ಅಳವಡಿಸುವ ಪ್ರಯತ್ನವನ್ನು ಪಠ್ಯ ರಚನಾ ಸಮಿತಿ ಮಾಡಿದೆ ಎಂದು ಸುದರ್ಶನ್‌ ಹೇಳಿದರು. ‍ಪ್ರಮುಖರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ ಮಿಜಾರು, ಜಗದೀಶ ಶೇಣವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT