ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸಮಾವೇಶ | ಬೆಳ್ತಂಗಡಿಯಿಂದ 10 ಸಾವಿರ ಕಾರ್ಯಕರ್ತರು: ರಕ್ಷಿತ್ ಶಿವರಾಂ

Published 13 ಫೆಬ್ರುವರಿ 2024, 15:18 IST
Last Updated 13 ಫೆಬ್ರುವರಿ 2024, 15:18 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ವಠಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ಫೆ.17ರಂದು ನಡೆಯಲಿದ್ದು, ಸಮಾವೇಶಕ್ಕೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಬೆಳ್ತಂಗಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಈಗಾಗಲೇ ಜಿ.ಪಂ, ತಾ.ಪಂ ವ್ಯಾಪ್ತಿಗೆ ಸಂಚಾಲಕರನ್ನು ನೇಮಕ ಮಾಡಿದ್ದು, ಗ್ರಾಮ ಮಟ್ಟದಲ್ಲಿ ಸಭೆ ನಡೆಯುತ್ತಿದೆ ಎಂದರು.

ವೇಣೂರಿನಲ್ಲಿ ನಡೆಯಲಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪೂರಕವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಅನುದಾನ ಮಂಜೂರು ಮಾಡಿದೆ. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಯಿಂದ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಿದೆ ಎಂದರು.

ಸಣ್ಣ ನೀರಾವರಿ ಯೋಜನೆಯಡಿ ನಡ ಗ್ರಾಮದ ಕೊಲ್ಲೊಟ್ಟು ಬಳಿ ವೆಂಟೆಂಡ್ ಡ್ಯಾಮ್, ಇಂದಬೆಟ್ಟು ಗ್ರಾಮದ ದೇವನಾರಿ ಅರ್ಧನಾರೀಶ್ವರ ದೇವಸ್ತಾನದವರೆಗೆ ತಡೆಗೋಡೆ ನಿರ್ಮಾಣಕ್ಕೆ ₹ 75 ಲಕ್ಷ, ಆರಂಬೋಡಿ ಪಾಣಿಮೇರು ಕುಂಜಾಡಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ, ಕರಾಯ ಮುಗ್ಗ ಕೂಡು ರಸ್ತೆ ಅಭಿವೃದ್ಧಿಗೆ ₹ 50 ಲಕ್ಷ, ಗೇರುಕಟ್ಟೆ ಹೇರೋಡಿ ಬಿಳಿಬೈಲು ರಸ್ತೆಗೆ ₹ 50 ಲಕ್ಷ, ಓಡಿಲ್ನಾಳ ಗ್ರಾಮದ ಮುಗುಳಿ ಬ್ರಹ್ಮಯಕ್ಷ ಬಸದಿ ರಸ್ತೆಗೆ ₹ 15 ಲಕ್ಷ, ಗುರಿಪಳ್ಳ ತಾರಂಗಡಿ ಸೇತುವೆ ನಿರ್ಮಾಣ, ಮಚ್ಚಿನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ, ಸಂತ ಜೋಸೆಫ್ ಚರ್ಚ್ ನಾರಾವಿ, ಕುತ್ತೂರು ಚರ್ಚ್ ಆವರಣ ಗೋಡೆಗೆ ₹ 5 ಲಕ್ಷ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್‌ಗೆ ₹ 10 ಲಕ್ಷ, ಸಿಯೋನ್ ಆಶ್ರಮ ಚರ್ಚ್ ನೆರಿಯದ ಅಗತ್ಯ ಕಾಮಗಾರಿಗೆ ಅನುದಾನ, ತಣ್ಣೀರುಪಂತ ಬದ್ರಿಯಾ ಜಮಾ ಮಸೀದಿ ಸಮುದಾಯ ಭವನ ನಿರ್ಮಾಣಕ್ಕೆ ₹ 15 ಲಕ್ಷ, ಚಿಬಿದ್ರೆ ಜುಮಾ ಮಸೀದಿ ನಿರ್ಮಾಣಕ್ಕೆ ₹ 15 ಲಕ್ಷ, ಕೊಲ್ಲಿ ಪಣಿಕಲ್-ದಿಡುಪೆ ರಸ್ತೆಯ 5.50 ಕಿ.ಮೀ ಅಭಿವೃದ್ಧಿ, ಶಿಶಿಲ ಬ್ರಹ್ಮ-ಬೈದರ್ಕಳ-ಗರೋಡಿ-ಓಟ್ಲ-ಪೆರ್ಲ ರಸ್ತೆ ಅಭಿವೃದ್ಧಿ ಕಾಮಗಾರಿ, ಅರಸಿನಮಕ್ಕಿಯಿಂದ ಬರ್ಕುಲದಲ್ಲಿ ರಸ್ತೆ ಅಭಿವೃದ್ಧಿಗೆ ₹ 3 ಕೋಟಿ, ಮದ್ದಡ್ಕದಿಂದ ಲಾಡಿ ರಸ್ತೆ, ಕಿನ್ನಿಗೋಳಿಯಿಂದ ಪಾದೆ, ಏರಂಗಲ್ಲು ಜಾಲ್ಯಾರಡ್ಡ ರಸ್ತೆ, ಕೊತ್ತಮಜಲು, ರಾಟೆಗುಡ್ಡೆ ರಸ್ತೆ, ಬಾವುಟ ಗುಡ್ಡೆಯಿಂದ ಮದ್ದಡ್ಕ ಬದ್ಯಾರು ರಸ್ತೆ, ಕೊಂಕೋಡಿ ರಸ್ತೆ ಕಾಂಕ್ರೀಟೀಕರಣ ಆಗಲಿದೆ ಎಂದರು.

ಆನೆಗಳ ಉಪಟಳದಿಂದ ಕೃಷಿಗೆ ಹಾನಿಯಾಗುತ್ತಿದ್ದು, ಗುಂಡ್ಯದಲ್ಲಿ ಎಲಿಫೆಂಟ್ ಕ್ಯಾಂಪ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬೆಳ್ತಂಗಡಿಗೆ ಬಂದಿದ್ದ ಸಚಿವ ಈಶ್ವರ ಖಂಡ್ರೆ ಅವರೊಂದಿಗೂ ಚರ್ಚಿಸಲಾಗಿದೆ. ಎಲಿಫೆಂಟ್ ಕ್ಯಾಂಪ್ ನಿರ್ಮಾಣದಿಂದ ಸುಮಾರು‌ 16 ಆನೆಗಳನ್ನು ಇರಿಸಲಾಗುತ್ತದೆ. ಬೆಳ್ತಂಗಡಿ ಪ್ರದೇಶಗಳಲ್ಲಿರುವ ನಾಗರ ಬೆತ್ತ ಸಂರಕ್ಷಣೆ ಮತ್ತು ಅದರ ವ್ಯಾಪ್ತಿ ವಿಸ್ತರಣೆಗೆ ಅವಕಾಶ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ರಕ್ಷಿತ್ ಶಿವರಾಂ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಕುಮಾರ್ ಗೌಡ, ಪ್ರಮುಖರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ನಮಿತಾ, ಲೋಕೇಶ್ವರಿ ವಿನಯಚಂದ್ರ, ಬೊಮ್ಮಣ್ಣ ಗೌಡ, ಪದ್ಮನಾಭ ಸಾಲಿಯಾನ್ ಮಾಲಾಡಿ, ಇಸ್ಮಾಯಿಲ್ ಪೆರಿಂಜೆ, ಸುಭಾಶ್ಚಂದ್ರ ರೈ ಅಳದಂಗಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT