ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮನಿಂದನೆ ಆರೋಪ: ಸತ್ಯಶೋಧನಾ ಸಮಿತಿಯಿಂದ ತನಿಖೆಗೆ ರಮಾನಾಥ ರೈ ಆಗ್ರಹ

ಜೆರೋಸಾ ಕಾನ್ವೆಂಟ್‌ಗೆ ಭೇಟಿ ನೀಡಿದ ಕಾಂಗ್ರೆಸ್‌ ಮುಖಂಡರ ನಿಯೋಗ
Published 14 ಫೆಬ್ರುವರಿ 2024, 3:08 IST
Last Updated 14 ಫೆಬ್ರುವರಿ 2024, 3:08 IST
ಅಕ್ಷರ ಗಾತ್ರ

ಮಂಗಳೂರು: ನಗರದ ಜೆಪ್ಪುವಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.

ಮಂಗಳವಾರ ಕಾಂಗ್ರೆಸ್‌ ಮುಖಂಡರೊಂದಿಗೆ ಶಾಲೆಗೆ ಭೇಟಿ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಪ್ರಕರಣದ ಸತ್ಯಾಸತ್ಯತೆಯ ವಿಮರ್ಶೆ ಆಗಬೇಕಾಗಿದೆ. ಘರ್ಷಣೆ, ಅಹಿತಕರ ಘಟನೆ ನಡೆಯಬಾರದು. ಸಮಾಜದಲ್ಲಿ ಸಾಮರಸ್ಯ ಉಳಿಯಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಪ್ರಕರಣ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಶಿಕ್ಷಣ ಇಲಾಖೆ ಮೂಲಕ ಸರ್ಕಾರ ಸ್ವತಂತ್ರ ತನಿಖೆ ಮಾಡಿಸಬೇಕು. ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡಲಿದ್ದೇವೆ’ ಎಂದರು.

‘ಪ್ರಕರಣ ತೀವ್ರಗೊಂಡ ಮೇಲೆ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ಸಂಭವಿಸಿದಾಗ ಅದನ್ನು ಬಗೆಹರಿಸುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಈ ಘಟನೆಯನ್ನು ನಿಭಾಯಿಸುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಂದೆ ಉಳಿದಿದ್ದಾರೆ. ಈ ಬಗ್ಗೆಯೂ ವಿಮರ್ಶೆಯಾಗಬೇಕಾಗಿದೆ’ ಎಂದ ಅವರು, ‘ಪ್ರತಿಭಟನೆ ನಡೆಸಿ, ಮಕ್ಕಳನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಕೂಡ ತನಿಖೆ ನಡೆಯಲಿ’ ಎಂದರು.

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಮಾತನಾಡಿ, ‘ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾವು ಶಾಲೆಗೆ ಭೇಟಿ ನೀಡಿದ್ದೇವೆ. ಶಾಲೆಯ ಆಡಳಿತ ಮಂಡಳಿಯು ಈ ಬಗ್ಗೆ ತನಿಖೆ ನಡೆಸಲು ಶಿಕ್ಷಣ ಇಲಾಖೆಗೆ ಅವಕಾಶ ನೀಡಿದೆ. ಈ ನಡುವೆ ಏನೇನೋ ಘಟನೆಗಳು ನಡೆದಿವೆ’ ಎಂದರು.

‘ಘಟನೆ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ. ಶಿಕ್ಷಕಿ ಯಾವುದೇ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ಅದು ಖಂಡನೀಯ. ಆದರೆ, ಆ ಘಟನೆಯ ನಂತರದ ಬೆಳವಣಿಗೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಸೋಮವಾರ ನಡೆದ ಪ್ರತಿಭಟನೆಯ ವೇಳೆ ಶಾಲೆಯಿಂದ ಹೊರಬಂದ ಮಕ್ಕಳಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿಸಲು ಪ್ರಚೋದನೆ ನೀಡಲಾಗಿದೆ. ಇದು ಸರಿಯಲ್ಲ’ ಎಂದು ಕೆಪಿಸಿಸಿ ವಕ್ತಾರೆ ಫರ್ಜಾನ್ ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಜೆ.ಆರ್. ಲೋಬೊ, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಶಾಲೆಟ್ ಪಿಂಟೊ, ಶಾಹುಲ್ ಹಮೀದ್, ಭಾಸ್ಕರ ಮೊಯಿಲಿ, ವಿಶ್ವಾಸ್ ದಾಸ್ ಇದ್ದರು.

ನಗರದ ಜೆರೋಸಾ ಕಾನ್ವೆಂಟ್‌ನ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶಾಲೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಹಿಂದೂ ಧರ್ಮದ ದೇವರನ್ನು ನಿಂದನೆ ಮಾಡಿದ್ದಾರೆ ಎಂಬ ಬಗ್ಗೆ ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಸೋಮವಾರ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕೂಡ ಕೆಲಹೊತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ಜೆರೋಸಾ ಕಾನ್ವೆಂಟ್‌ನ ಆಡಳಿತ ಮಂಡಳಿಯು ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಕರ್ತವ್ಯದಿಂದ ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT