ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್‌ ರಕ್ಷಣೆ: ದೇವೇಂದ್ರ ಫಡಣವಿಸ್‌

ಬೂತ್‌ ಕಾರ್ಯಕರ್ತರ ಸಮಾವೇಶ
Published 13 ಮಾರ್ಚ್ 2024, 5:54 IST
Last Updated 13 ಮಾರ್ಚ್ 2024, 5:54 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಒಂದೇ ಒಂದು ಭರವಸೆಯನ್ನೂ ಇಡೇರಿಲ್ಲ. ಆದರೂ ಅವರನ್ನು ಕ್ಷಮಿಸಬಹುದಿತ್ತು. ಆದರೆ, ದೇಶ ವಿರೋಧಿ ಶಕ್ತಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಲಪಡಿಸುತ್ತಿದೆ. ಅವರಿಗೆ ರಕ್ಷಣೆ ನೀಡುತ್ತಿದೆ. ಇದು ಯಾವ ನೀತಿ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಪ್ರಶ್ನಿಸಿದರು.

ಬಿಜೆಪಿ ವತಿಯಿಂದ ಇಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಬೂತ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಂಗಳವಾರ ಮಾತನಾಡಿದರು.

‘ಪಿಎಫ್‌ಐ ಸಂಘಟನೆಯನ್ನು ನಾವು ನಿಷೇಧ ಮಾಡಿದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಸಂಘಟನೆಯ ಸದಸ್ಯರನ್ನು ಬಿಡುಗಡೆ ಮಾಡುತ್ತದೆ. ಕರ್ನಾಟಕದಲ್ಲಿ ಸರ್ಕಾರ ಬದಲಾದ ಬಳಿಕ ಬಾಂಬ್‌ ಸ್ಫೋಟ ಸಂಭವಿಸಿದರೂ, ಪ್ರೆಷರ್‌ ಕುಕ್ಕರ್‌ ಸಿಡಿದಿರಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ‘ಇಂಡಿಯಾ’ ಒಕ್ಕೂಟವು ಮತ ಗಳಿಸುವುದಕ್ಕಾಗಿ ಎಷ್ಟು ಹೀನಾಯ ಸ್ಥಿತಿಗೆ ಇಳಿದಿದೆ ಎಂದರೆ, ಅವರು ಈಗ ದೇಶದ ಬಗ್ಗೆಯೂ ಯೋಚಿಸುತ್ತಿಲ್ಲ’ ಎಂದರು.

‘2024ರದು ಇತಿಹಾಸ ಸೃಷ್ಟಿಸುವ ಚುನಾವಣೆ. ಈ ಚುನಾವಣೆಯಲ್ಲಿ ನಾವು ಬಿಜೆಪಿಗೆ ಮತ ಹಾಕುತ್ತಿಲ್ಲ.  ಸದೃಢ, ಸುರಕ್ಷಿತ, ಪ್ರಗತಿಶೀಲ ಭಾರತಕ್ಕಾಗಿ ಮತ ಹಾಕುತ್ತಿದ್ದೇವೆ. ನಾವು ಬೂತ್‌ ಮಟ್ಟದಲ್ಲಿ ಸಂಘರ್ಷ ನಡೆಸಬೇಕಿದೆ’ ಎಂದರು.

‘ಇಲ್ಲಿನ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೊಜನೆಗಳು ವಿಫಲವಾಗಿವೆ. ಅಭಿವೃದ್ಧಿಗಾಗಿ ಶಾಸಕರಿಗೆ ನೀಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲ. ಯಾವುದೇ ಸರ್ಕಾರ 50 ವರ್ಷಗಳಲ್ಲೂ ಮಾಡದಷ್ಟು ಸಾಧನೆಯನ್ನು ಮೋದಿ ನೇತೃತ್ವದ ಸರ್ಕಾರ ಹತ್ತೇ ವರ್ಷಗಳಲ್ಲಿ ಮಾಡಿ ತೋರಿಸಿದೆ. ಜಗತ್ತಿನಲ್ಲಿ 11ನೇ ಸ್ಥಾನದಲ್ಲಿದ್ದ ಅರ್ಥವ್ಯವಸ್ಥೆಯನ್ನು ಐದನೇ ಸ್ಥಾನಕ್ಕೆ ಏರಿಸಿದ್ದಾರೆ. ಇದು ಮೋದಿಯವರ ಗ್ಯಾರಂಟಿ. ಜನ ನಂಬುವುದೇನಿದ್ದರೂ ಮೋದಿ ಅವರ ಗ್ಯಾರಂಟಿಯನ್ನು ಮಾತ್ರ. ಅವರದ್ದು ಗ್ಯಾರಂಟಿಗೇ ಗ್ಯಾರಂಟಿ. ಮತ್ತೊಂದು ಅವಕಾಶ ನೀಡಿದ್ದೇ ಆದರೆ, ಅವರು ದೇಶದ ಅರ್ಥವ್ಯವಸ್ಥೆಯನ್ನು ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೇರಿಸಲಿದ್ದಾರೆ’ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಜ. 22ರಂದು ರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠೆ ಮಾತ್ರ ಆಗಿದ್ದಲ್ಲ, ಅಲ್ಲಿ ನಮ್ಮ ಸ್ವಾಭಿಮಾನದ ಪ್ರತಿಷ್ಠಾಪನೆಯೂ ಆಗಿದೆ. 500 ವರ್ಷಗಳಿಂದ ಅನುಭವಿಸಿದ ಅಪಮಾನ ಕೊನೆಗೊಂಡಿದೆ. ಮೋದಿಯವರ ನೇತೃತ್ವದಲ್ಲಿ ನವಭಾರತದ ನಿರ್ಮಾಣವಾಗುವಾಗ ಜೊತೆಗಿದ್ದವರೂ ಇತಿಹಾಸದ ಪುಟದಲ್ಲಿ ದಾಖಲಾಗಲಿದ್ದಾರೆ. ಉತ್ತರ–ದಕ್ಷಿಣದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಲಾಗುತ್ತಿದೆ. ಮೋದಿ ಅವರಿಗೆ ಹೆಚ್ಚಿನ ಸಮರ್ಥನೆ ಸಿಗುತ್ತಿರುವುದು ದಕ್ಷಿಣದ ರಾಜ್ಯಗಳಲ್ಲೇ’ ಎಂದರು.

ಸಂಸದ ನಳಿನ್ ಕುಮಾರ್‌ ಕಟೀಲ್, ‘ಪಂಚಾಯಿತಿ ಸದಸ್ಯನೂ ಆಗಿಲ್ಲದ ನನ್ನನ್ನು ಪಕ್ಷವು ಲೋಕಸಭಾ ಸದಸ್ಯನನ್ನಾಗಿ ಮಾಡಿತು. ನಾನು ಯಾವತ್ತೂ ಗೂಂಡಾಗಿರಿಯ ರಾಜಕಾರಣ‌ ಮಾಡಿಲ್ಲ. ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದೇನೆ. ಯಾರಿಗೂ ಕೈ ಒಡ್ಡಿಲ್ಲ. 2024 ರಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡೋಣ’ ಎಂದರು.

ಕೋಟ ಶ್ರೀನಿವಾಸ ಪೂಜಾರಿ, 'ಸಿದ್ದರಾಮಯ್ಯ ಭಯೋತ್ಪಾದಕರ ಪೂಜೆ ಮಾಡುವ ಮಟ್ಟಕ್ಕೆ ಇಳಿದರಲ್ಲ ಎಂದು ಬೇಸರವಾಗುತ್ತಿದೆ. ಇದಕ್ಕೆ  ಮುಂಬರುವ ಚುನಾವಣೆಯಲ್ಲಿ ಉತ್ತರ ನೀಡಬೇಕು‘ ಎಂದರು.

ಶಾಸಕರಾದ ಹರೀಶ್ ಪೂಂಜ, ರಾಜೇಶ್ ನಾಯ್ಕ್ ಉಳಿಪಾಡಿ, ಡಿ.ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಬೃಜೇಶ್ ಚೌಟ, ನಿತಿನ್ ಕುಮಾರ್, ಲೋಕಸಭಾ ಚುನಾವಣಾ ಉಸ್ತುವಾರಿ ನಿತಿನ್ ಕುಮಾರ್, ಜಿಲ್ಲೆಯ ಸಹ ಪ್ರಭಾರಿ ರಾಜೇಶ್ ಕಾವೇರಿ, ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ತಿಲಕ ರಾಜ್‌ ಕೃಷ್ಣಾಪುರ‌ ಕಾರ್ಯಕ್ರಮ‌ ನಿರೂಪಿಸಿದರು. ಯತೀಶ್ ಅರುವ ಧನ್ಯವಾದ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT