ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ತೆರವಿಗೆ ಮೀನುಗಾರರಿಗೆ ಆದೇಶ: ಕಾಂಗ್ರೆಸ್ ಜಿಲ್ಲಾ ಘಟಕದ ವಿರೋಧ

Last Updated 17 ಜೂನ್ 2021, 4:20 IST
ಅಕ್ಷರ ಗಾತ್ರ

ಉಳ್ಳಾಲ: ‘ಸೋಮೇಶ್ವರ ಉಚ್ಚಿಲ ಭಾಗದ ಸಮುದ್ರ ಕೊರೆತದಿಂದ ಹಾನಿಗೊಳಗಾದ ಬಡ ಮೀನುಗಾರ ಕುಟುಂಬಗಳನ್ನು ಏಕಾಏಕಿ ಖಾಲಿ ಮಾಡುವಂತೆ ಆದೇಶಿಸಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. 100 ವರ್ಷಗಳ ಹಿಂದಿನಿಂದ ಈ ಸ್ಥಳದಲ್ಲಿ ವಾಸಿಸುತ್ತಿರುವ ಕುರಿತು ದಾಖಲೆ ಇದ್ದರೂ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜಾಗ ಖಾಲಿ ಮಾಡುವಂತೆ ಹೇಳುತ್ತಿರುವ ಕ್ರಮ ಸರಿಯಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸಮುದ್ರ ಕೊರೆತಕ್ಕೆ ಕಪ್ಪುಕಲ್ಲು ಹಾಕುವ ವ್ಯವಸ್ಥೆ ಇನ್ನೂ ಆಗಿಲ್ಲ. ಬ್ರೇಕ್ ವಾಟರ್ ಒಂದೇ ಕಡೆಯಲ್ಲಿ ಆಗಿದೆ. ತಾತ್ಕಾಲಿಕ ಕಾಮಗಾರಿ ಎರಡು ವರ್ಷಗಳಿಂದ ಕಾಣುತ್ತಿಲ್ಲ. ಮೊದಲಿನ ಹಾಗೆ ಇಟ್ಟ ಕಲ್ಲುಗಳ ಮೇಲೆ ಮತ್ತೆ ಕಲ್ಲು ಹಾಕುತ್ತಿದ್ದಲ್ಲಿ ಕಡಲ್ಕೊರೆತ ಆಗುತ್ತಿರಲಿಲ್ಲ. ಕೋಟ್ಯಂತರ ವ್ಯಯಿಸಿ ಮರಳು ದಿಬ್ಬ ರಚಿಸಿ ಪರಿಹಾರ ಕಂಡುಕೊಳ್ಳುತ್ತಿರುವುದು ಅವೈಜ್ಞಾನಿಕ’ ಎಂದರು.

‘ತೌತೆ ಚಂಡಮಾರುತದಿಂದ ಆದ ಹಾನಿ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಎಲ್ಲ ಸರಿಪಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ,
ಸಮಸ್ಯೆ ಪರಿಹಾರವಾಗಿಲ್ಲ. ಈಗ ಏಕಾಏಕಿ ಮೀನುಗಾರರು ಸ್ಥಳ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಸ್ಥಳೀಯವಾಗಿ ಪರ್ಯಾಯ ವ್ಯವಸ್ಥೆ
ಕಲ್ಪಿಸಬೇಕು ಅಥವಾ ರೆಸಾರ್ಟ್‌ಗಳನ್ನು ಖಾಲಿ ಮಾಡಿ ಅದನ್ನು ಮೀನುಗಾರರಿಗೆ ನೀಡಬೇಕು. ಮೀನುಗಾರಿಕೆ ಕಸಬು ಮಾಡಿಕೊಂಡಿರುವಾಗ ದೂರದ ಗುಡ್ಡ ಪ್ರದೇಶದಲ್ಲಿ ಜಾಗ ಕೊಟ್ಟರೆ ಸರಿಯಲ್ಲ. ಈಗಾಗಲೇ ಮೀನುಗಾರರ 70 ಸೆಂಟ್ಸ್‌ನಷ್ಟು ಜಾಗ ಸಮುದ್ರದ ಪಾಲಾಗಿದೆ. ಇರುವ 5 ಸೆಂಟ್ಸ್ ಸ್ಥಳವನ್ನು ಬಿಟ್ಟು ಕೊಡಲು ನೋಟಿಸ್ ನೀಡಿರುವ ಕ್ರಮ ಸರಿಯಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ದಿನೇಶ್ ಕುಂಪಲ, ಕಿಶೋರ್ ಗಟ್ಟಿ ಮುಂಡೋಳಿ, ದೀಪಕ್ ಪಿಲಾರ್ ಮತ್ತು ಬಶೀರ್ ಕೊಳಂಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT