ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಕಿಟ್‌ನಲ್ಲಿ ಅವ್ಯವಹಾರ: ಕಾಂಗ್ರೆಸ್‌ ಆರೋಪ

Last Updated 5 ಮೇ 2020, 9:40 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ತಡೆಗೆ ಲಾಕ್‌ ಡೌನ್‌ ಜಾರಿಗೊಳಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ವಿತರಿಸಲು ಪಡಿತರ ಕಿಟ್‌ ಸಿದ್ಧಪಡಿಸುವ ಕೆಲಸವನ್ನು ಖಾಸಗಿ ಏಜೆನ್ಸಿಗೆ ನೀಡಿದ್ದು, ಅವ್ಯವಹಾರ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆರೋಪಿಸಿದೆ.

‘ಪಡಿತರ ಕಿಟ್‌ ಸಿದ್ಧಪಡಿಸುವ ಗುತ್ತಿಗೆಯನ್ನು ಮಂಗಳೂರಿನ ಏಜೆನ್ಸಿಯೊಂದಕ್ಕೆ ನೀಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಉಲ್ಲಂಘಿಸಿ ಈ ಗುತ್ತಿಗೆ ನೀಡಲಾಗಿದೆ. ಪಡಿತರ ಕಿಟ್‌ ತಯಾರಿಯಲ್ಲಿ ಬೃಹತ್‌ ಪ್ರಮಾಣದ ಅವ್ಯವಹಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ಡಿ.ವೇದವ್ಯಾಸ ಕಾಮತ್‌ ಮತ್ತು ಡಾ.ವೈ.ಭರತ್‌ ಶೆಟ್ಟಿ ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವಕ್ತಾರರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್‌ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

‘ಪಾಲಿಕೆ ಕೇಂದ್ರ ಕಚೇರಿ ಎದುರಿನ ಕಟ್ಟಡದಲ್ಲಿ ಎಲ್ಲ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾಡಳಿತಕ್ಕೆ ಕಿಟ್‌ ಒದಗಿಸಿದ ಏಜೆನ್ಸಿಯೇ ಸಂಸದರು, ಶಾಸಕರಿಗೂ ಕಿಟ್‌ ಒದಗಿಸಿದೆ. ಜಿಲ್ಲಾಡಳಿತದ ಹಣದಲ್ಲಿ ಸಿದ್ಧಪಡಿಸಿದ ಕಿಟ್‌ಗಳನ್ನು ಸಂಸದರು, ಶಾಸಕರು ಮತ್ತು ಬಿಜೆಪಿ ಪಾಲಿಕೆ ಸದಸ್ಯರ ಭಾವಚಿತ್ರ ಅಂಟಿಸಿ ವಿತರಿಸಲಾಗಿದೆ. ಕೋಟ್ಯಂತರ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಡೆಯೂ ಸಂಶಯಕ್ಕೆ ಎಡೆಮಾಡಿದೆ. ಈ ಕುರಿತು ಲೋಕಾಯುಕ್ತರಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಪೂರ್ಣ ಸಡಿಲಿಕೆಗೆ ವಿರೋಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಕೋವಿಡ್‌–19 ಸೋಂಕಿನ ಪ್ರಕರಣಗಳಿವೆ. ಆದರೂ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಲಾಕ್‌ ಡೌನ್‌ ಸಡಿಲಿಸಿರುವುದು ಸರಿಯಲ್ಲ. ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಲಾಕ್‌ ಡೌನ್‌ ಸಡಿಲಿಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಕೋವಿಡ್‌–19 ಸೋಂಕು ನಿಯಂತ್ರಣದಲ್ಲಿ ಜಿಲ್ಲಾಧಿಕಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸಂಸದರು ಮತ್ತು ಶಾಸಕರು ಅವಕಾಶ ನೀಡುತ್ತಿಲ್ಲ. ಜಿಲ್ಲಾಡಳಿತದ ನಿರ್ಧಾರಗಳಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದಾಗಿ ಸೋಂಕಿನ ಮೂಲ ಪತ್ತೆಗೂ ಅಡ್ಡಿಯಾಗಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT