ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ತಿಂಗಳಾಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ; ಸಲೀಂ ಅಹಮ್ಮದ್

Published 12 ಫೆಬ್ರುವರಿ 2024, 5:35 IST
Last Updated 12 ಫೆಬ್ರುವರಿ 2024, 5:35 IST
ಅಕ್ಷರ ಗಾತ್ರ

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ತಿಳಿಸಿದರು.

ಪಕ್ಷದ ವೀಕ್ಷಕರು ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಅದನ್ನು ಎಐಸಿಸಿಗೆ ಕಳುಹಿಸಲಾಗಿದ್ದು ಪರಿಶೀಲನೆಯ ನಂತರ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಾಲಿ ಶಾಸಕರ ಪೈಕಿ ಕೆಲವರು ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ತಪ್ಪು. ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ನಿರ್ಧಾರ ಅಂತಿಮವಾಗಿದೆ ಎಂದ ಅವರು ಕಾಂಗ್ರೆಸ್‌ಗೆ ಎಲ್ಲೂ ಅಭ್ಯರ್ಥಿಗಳ ಕೊರತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 5 ಮಂದಿ ಆಕಾಂಕ್ಷಿಗಳು ಇದ್ದಾರೆ ಎಂದರು.  

‍ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸೀಟುಗಳನ್ನು ಪಕ್ಷ ಗೆಲ್ಲಲಿದೆ. ಬಿಜೆಪಿಗೆ ಸೋಲಿನ ಆತಂಕ ಕಾಡುತ್ತಿದೆ. ಆದ್ದರಿಂದಲೇ ಅಮಿತ್ ಷಾ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶವೂ ಅದೇ ಆಗಿದೆ. ವೈಯಕ್ತಿಕ ಹಿತಾಸಕ್ತಿಯಿಂದ ದೇವೇಗೌಡರು ಬಿಜೆಪಿ ಜೊತೆಗೂಡಿದ್ದಾರೆ. ಈ ವರೆಗೆ ಕೋಮುವಾದಿಗಳನ್ನು ಬೈಯುತ್ತಿದ್ದ ಅವರು ಈಗ ಕುಟುಂಬಕ್ಕಾಗಿ ಬಿಜೆಪಿಯ ಗುಣಗಾನ ಮಾಡುತ್ತಿದ್ದಾರೆ ಎಂದು ಸಲೀಂ ದೂರಿದರು.

ಸಬ್‌ಕಾ ಸಾಥ್‌, ಸಬ್ ಕಾ ವಿಕಾಸ್ ಎಂದು ಹೇಳುತ್ತಿರುವ ಬಿಜೆಪಿ ಈಗ ಎಲ್ಲರ ವಿನಾಶ ಮಾಡಲು ಹೊರಟಿದೆ. ಸಂಪನ್ಮೂಲ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಸಮಾಜವನ್ನು ಒಡೆಯುವುದಕ್ಕಾಗಿ ಈಗ ಸಿಎಎ ಜಾರಿಯ ದಾಳ ಎಸೆದಿದೆ ಎಂದು ಅವರು ದೂರಿದರು.

ಶಾಸಕರಾದ ಮಂಜುನಾಥ್ ಭಂಡಾರಿ, ‌ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉಪಾಧ್ಯಕ್ಷ ರಮಾನಾಥ ರೈ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ಮುಖಂಡರಾದ ವಿನಯ ಕುಮಾರ್ ಸೊರಕೆ, ಐವನ್ ಡಿ ಸೋಜ, ಮಮತಾ ಗಟ್ಟಿ, ಕೃಪಾ ಅಳ್ವ ಇದ್ದರು.

ಮಂಗಳೂರಿನಲ್ಲಿ ಮುಖಂಡರ ಸಮಾವೇಶ

ರಾಜ್ಯದ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಮಾವೇಶ ಇದೇ 17ರಂದು ಮಧ್ಯಾಹ್ನ 2 ಗಂಟೆಯಿಂದ ಮಂಗಳೂರು ಹೊರವಲಯದ ಪಡೀಲ್‌ನಲ್ಲಿರುವ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಲೀಂ ಅಹಮ್ಮದ್ ತಿಳಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಮತ್ತಿತರರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸಮಾವೇಶದ ಯಶಸ್ಸಿಗಾಗಿ ಏಳು ಸಮಿತಿಗಳನ್ನು ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT