ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಜಿಲ್ಲೆಯಲ್ಲಿ ಗುಣಮುಖರೇ ಹೆಚ್ಚು

132 ಮಂದಿಗೆ ಕೋವಿಡ್‌–19 ದೃಢ: 195 ಜನ ಚೇತರಿಕೆ
Last Updated 10 ಆಗಸ್ಟ್ 2020, 4:17 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಒಟ್ಟು 132 ಮಂದಿಗೆ ಕೋವಿಡ್–19 ದೃಢಪಟ್ಟಿದ್ದರೆ, 195 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆರು ಮಂದಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲ್ಲೂಕಿನ ತಲಾ ಇಬ್ಬರು, ಸುಳ್ಯ ತಾಲ್ಲೂಕಿನ ಒಬ್ಬರು, ಹೊರ ಜಿಲ್ಲೆಯ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಮೃತರ ಸಂಖ್ಯೆ 220 ಕ್ಕೆ ಏರಿಕೆಯಾಗಿದೆ.

132 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಮತ್ತೆ 132 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 68 ಸಾಮಾನ್ಯ ಶೀತ ಜ್ವರ (ಐಎಲ್‌ಐ) ಪ್ರಕರಣ, ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ)ಯ 11 ಪ್ರಕರಣ ಮತ್ತು 21 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 32 ಮಂದಿಯ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ.

132 ಮಂದಿಯ ಪೈಕಿ 81 ಮಂದಿ ಮಂಗಳೂರು ತಾಲ್ಲೂಕಿನವರಾಗಿದ್ದಾರೆ. ಬಂಟ್ವಾಳ ತಾಲ್ಲೂಕಿನ 22, ಪುತ್ತೂರು ತಾಲ್ಲೂಕಿನ 6, ಬೆಳ್ತಂಗಡಿಯ 4, ಸುಳ್ಯದ 3, ಹೊರಜಿಲ್ಲೆಯ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7,207 ಪ್ರಕರಣಗಳು ದೃಢವಾಗಿದ್ದು, ಈ ಪೈಕಿ ಮಂಗಳೂರು ತಾಲ್ಲೂಕಿನಲ್ಲಿ 5,023 ಮಂದಿ, ಬಂಟ್ವಾಳ ತಾಲ್ಲೂಕಿನಲ್ಲಿ 689, ಬೆಳ್ತಂಗಡಿ ತಾಲ್ಲೂಕಿನಲ್ಲಿ 370, ಪುತ್ತೂರು ತಾಲ್ಲೂಕಿನಲ್ಲಿ 351, ಮೂಡುಬಿದಿರೆ ತಾಲ್ಲೂಕಿನಲ್ಲಿ 98, ಸುಳ್ಯ ತಾಲ್ಲೂಕಿನಲ್ಲಿ 93, ಮೂಲ್ಕಿ ತಾಲ್ಲೂಕಿನಲ್ಲಿ 91, ಕಡಬ ತಾಲ್ಲೂಕಿನಲ್ಲಿ 55, ಹೊರಜಿಲ್ಲೆಯ 437 ಮಂದಿಗೆ ಕೋವಿಡ್–19 ದೃಢವಾಗಿದೆ.

195 ಮಂದಿ ಗುಣಮುಖ: ಜಿಲ್ಲೆಯಲ್ಲಿನ ಸೋಂಕಿತರ ಪೈಕಿ ಒಂದೇ ದಿನ ಅತಿಹೆಚ್ಚು 195 ಜನರು ಗುಣಮುಖರಾಗಿದ್ದಾರೆ. ಈ ಮೊದಲು ಇದೇ 7 ರಂದು 188 ಮಂದಿ ಗುಣಮುಖರಾಗಿದ್ದರು. ಜಿಲ್ಲೆಯಲ್ಲಿ ಇದುವರೆಗೆ 3,682 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 3,305 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಸದ ರಾಜ್‌ಮೋಹನ್‌ ಕ್ವಾರಂಟೈನ್‌

ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ ಅವರ ಕಾರು ಚಾಲಕನಿಗೆ ಕೋವಿಡ್‌–19 ದೃಢಪಟ್ಟಿದ್ದು , ಸಂಸದರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನಲಾಗಿದೆ. ಸಂಸದರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಸಂಸದರ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಶನಿವಾರ ಇಬ್ಬರೂ ಪರೀಕ್ಷೆಗೆ ಒಳಗಾಗಿದ್ದು, ಸಂಸದ ರಾಜ್‌ಮೋಹನ್‌ ಅವರ ವರದಿ ನೆಗೆಟಿವ್ ಬಂದಿತ್ತು.
ಚಾಲಕನಿಗೆ ಪಾಸಿಟಿವ್ ಕಂಡು ಬಂದಿದ್ದು, ಕಾಞ೦ಗಾಡ್‌ನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಆರೋಗ್ಯ ಇಲಾಖೆ ಸೂಚಿಸಿದಲ್ಲಿ ಮತ್ತೆ ತಪಾಸಣೆ ನಡೆಸುವುದಾಗಿ ಸಂಸದರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 56 ಮಂದಿಗೆ ಕೋವಿಡ್‌–19 ದೃಢವಾಗಿದ್ದು, 49 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 115 ಮಂದಿ ಗುಣಮುಖರಾಗಿದ್ದು, 67 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಇದುವರೆಗೆ 2,587 ಮಂದಿಗೆ ಕೋವಿಡ್‌–19 ದೃಢವಾಗಿದ್ದು, ಸದ್ಯಕ್ಕೆ 997 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT