ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸಾವಿರದ ಗಡಿ ದಾಟಿದ ಕೋವಿಡ್–19

ಜಿಲ್ಲೆಯಲ್ಲಿ ಮತ್ತೆ 173 ಜನರಿಗೆ ಸೋಂಕು: ನಾಲ್ಕು ಮಂದಿ ಸಾವು
Last Updated 28 ಜುಲೈ 2020, 16:42 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 173 ಮಂದಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 5,103ಕ್ಕೆ ಏರಿಕೆಯಾಗಿದೆ.

ಮಂಗಳವಾರವೂ ಜಿಲ್ಲೆಯಲ್ಲಿ ಐಎಲ್‌ಐ ಪ್ರಕರಣಗಳ ಸಂಖ್ಯೆಯೇ ಅಧಿಕವಾಗಿದೆ. 91 ಐಎಲ್‌ಐ ಪ್ರಕರಣ ಹಾಗೂ 33 ಎಸ್‌ಎಆರ್‌ಐ ಪ್ರಕರಣಗಳು ವರದಿಯಾಗಿವೆ. ಇನ್ನು ಪ್ರಾಥಮಿಕ ಸಂಪರ್ಕದಿಂದ 21 ಮಂದಿಗೆ ಸೋಂಕು ತಗಲಿದ್ದು, 38 ಮಂದಿ ಸೋಂಕಿತರ ಸಂಪರ್ಕದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಒಬ್ಬರಲ್ಲಿ ಕೋವಿಡ್–19 ದೃಢವಾಗಿದೆ.

ನಾಲ್ವರು ಸಾವು: ಇದೇ 26 ರಿಂದ 28 ರವರೆಗೆ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢವಾಗಿದೆ.

ಮೃತಪಟ್ಟವರಲ್ಲಿ ಬಂಟ್ವಾಳದ ಇಬ್ಬರು, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಲಾ ಒಬ್ಬರು ಇದ್ದಾರೆ. ಮೃತರಲ್ಲಿ ಮೂವರು ಹಿರಿಯ ನಾಗರಿಕರು ಹಾಗೂ ಮತ್ತೊಬ್ಬರು ಯುವತಿ. ಖಾಸಗಿ ಆಸ್ಪತ್ರೆಯಲ್ಲಿ ಮೂವರು ಹಾಗೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ 84 ವರ್ಷದ ವೃದ್ಧ ಹೃದ್ರೋಗ, ಇತರ ಕಾಯಿಲೆಗಳಿಂದ ಬಳಲುತ್ತಿದ್ದು, ಇದೇ 22 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಇದೇ 26 ರಂದು ಮೃತಪಟ್ಟಿದ್ದಾರೆ. ಟೈಪ್‌–2 ಮಧುಮೇಹ, ಸೆಪ್ಟಿಕ್‌ ಶಾಕ್‌, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಭಟ್ಕಳದ 72 ವರ್ಷದ ವೃದ್ಧ ಇದೇ 23 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇವರು ಇದೇ 27 ರಂದು ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲ್ಲೂಕಿನ 62 ವರ್ಷದ ವೃದ್ಧ ಇದೇ 26 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಬಂಟ್ವಾಳದ 25 ವರ್ಷದ ಮಹಿಳೆ ಇದೇ 25 ರಂದು ನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ.

ಕಾಸರಗೋಡು: 38 ಹೊಸ ಪ್ರಕರಣ

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 38 ಮಂದಿಗೆ ಕೋವಿಡ್–19 ದೃಢವಾಗಿದೆ. ಈ ಪೈಕಿ 36 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮಂಗಳವಾರ 36 ಮಂದಿ ಗುಣಮುಖರಾಗಿದ್ದಾರೆ. 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಟಾಟಾ ಕೋವಿಡ್-19 ಆಸ್ಪತ್ರೆಯ ಕಾಮಗಾರಿಯಲ್ಲಿ ನಿರತರಾದ ನಾಲ್ವರು ಕಾರ್ಮಿಕರಿಗೆ ಕೋವಿಡ್–19 ದೃಢಪಟ್ಟಿದೆ. ಸುಮಾರು 60ರಷ್ಟು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಸೋಂಕಿತರಲ್ಲಿ ಮೂವರು ಒಡಿಶಾ ಹಾಗೂ ಒಬ್ಬರು ಆಂಧ್ರ ಪ್ರದೇಶ ನಿವಾಸಿಗಳಾಗಿದ್ದಾರೆ. ಇವರಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT