ಮಂಗಳವಾರ, ಸೆಪ್ಟೆಂಬರ್ 28, 2021
22 °C
ಮಕ್ಕಳ ಐಸಿಯು ಸಜ್ಜು, ಹಾಸಿಗೆ ಮೀಸಲು: ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಮುಖ್ಯಮಂತ್ರಿ

ಮಕ್ಕಳ ರಕ್ಷಣೆ ದೇಶಕ್ಕೇ ಮಾದರಿ ಆಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ತಡೆಗೆ ಅಧಿಕಾರಿಗಳು ಇನ್ನೊಂದೆರಡು ತಿಂಗಳು ಗರಿಷ್ಠ ಶ್ರಮವಹಿಸಬೇಕು. ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು. ದೇಶಕ್ಕೇ ಮಾದರಿಯಾಗುವಂಥ ಯೋಜನೆ ರೂಪಿಸಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮೂರು ಹಂತಗಳಲ್ಲಿ ಈ ಕ್ರಮ ಅನುಷ್ಠಾನಗೊಳ್ಳಬೇಕು. ಮೊದಲನೆಯದಾಗಿ, ಆರೋಗ್ಯ ಮೂಲಸೌಕರ್ಯಗಳ ಸದ್ಬಳಕೆ. ಇದರಂತೆ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಕೋವಿಡ್ ಬಾಧಿತ ಮಕ್ಕಳ ಚಿಕಿತ್ಸೆಗೆ ತೀವ್ರ ನಿಗಾ ವಿಭಾಗ (ಐಸಿಯು), ಆಮ್ಲಜನಕದ ನಿರಂತರ ಲಭ್ಯತೆ, ತಾಲ್ಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಹಾಸಿಗೆ ಮೀಸಲು ಇತ್ಯಾದಿ ಇನ್ನು 15 ದಿನಗಳಲ್ಲಿ ಆಗಬೇಕು.

ಎರಡನೇ ಹಂತದಲ್ಲಿ, ಆಶಾ ಕಾರ್ಯಕರ್ತೆಯರಿಂದ ತೊಡಗಿ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಎಸ್ಪಿ, ಇತರ ಇಲಾಖಾಧಿಕಾರಿಗಳು ಒಗ್ಗೂಡಿ ಕಾರ್ಯಾಚರಿಸಬೇಕು. ಇದು ಕಾಗದಕ್ಕೆ ಸೀಮಿತವಾಗದೆ, ಕಾರ್ಯರೂಪದಲ್ಲಿ ಇರಬೇಕು. ಈ ಹಂತದಲ್ಲಿ ಜನಪ್ರತಿನಿಧಿಗಳೂ ಸಕ್ರಿಯ ನೆರವು ನೀಡಬೇಕು ಎಂದು ಮನವಿ ಮಾಡಿದರು. ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆ ಸಕ್ರಿಯ ಆಗಬೇಕು ಎಂದರು.

ಮೂರ‌ನೇ ಹಂತವು ವಿಸ್ತೃತವಾಗಿದ್ದು, ಮಕ್ಕಳು, ತಾಯಂದಿರು, ಇತರ ಮಹಿಳೆಯರ ಆರೈಕೆ ಯುದ್ಧೋಪಾದಿಯಲ್ಲಿ ಆಗಬೇಕು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ತ್ವರಿತಗೊಳಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ, ಚಾಮರಾಜನಗರ, ಮೈಸೂರು, ಬೆಂಗಳೂರು, ಕೊಡಗು ಮುಂತಾದ ಜಿಲ್ಲೆಗಳನ್ನು ಆದ್ಯತಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಲಸಿಕೆ ಕೊರತೆ ಆಗದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕಪ್ಪು ಶಿಲೀಂಧ್ರ ಸರ್ಕಾರಿ ಚಿಕಿತ್ಸೆ: ಕಪ್ಪು ಶಿಲೀಂಧ್ರ ಸೋಂಕು ಬಾಧಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಸೇರಿದರೂ ಅವರಿಗೆ ಸರ್ಕಾರವೇ ಮುಂದುವರಿದ ಚೇತರಿಕೆ ಔಷಧ ನೀಡಲಿದೆ. ಖಾಸಗಿ‌ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಔಷಧಕ್ಕಾಗಿ ಸಾವಿರಾರು ರುಪಾಯಿ ವ್ಯಯಿಸುವವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನೂತನ ಐಸಿಯು ಘಟಕ: ನಗರದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಔಷಧಿ ವಿಭಾಗದಲ್ಲಿ ಐಸಿಯು ಘಟಕವನ್ನು ಮುಖ್ಯಮಂತ್ರಿ ಗುರುವಾರ ಉದ್ಘಾಟಿಸಿದರು.

ಪ್ರವಾಹ– ಶೀಘ್ರ ಸಭೆ: ಪ್ರವಾಹ ಹಾನಿ ಸಮೀಕ್ಷೆ ಹಾಗೂ ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನೆಗೆ ಶೀಘ್ರವೇ ಇನ್ನೊಂದು ಸಭೆ ನಡೆಸುತ್ತೇನೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭರವಸೆ ನೀಡಿದರು.

‘ನಿರಂತರ ನೀರು’ ಯೋಜನೆಗೆ ಚಾಲನೆ: ನಗರ ನೀರು ಸರಬರಾಜು ಯೋಜನೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನ ₹792.42 ಕೋಟಿ ವೆಚ್ಚದ ‘ಕ್ವಿಮಿಪ್ ಜಲಸಿರಿ’ ಯೋಜನೆಯ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗುರುವಾರ ಚಾಲನೆ ನೀಡಿದರು.

6 ಲಕ್ಷ ಜನಸಂಖ್ಯೆಯ ಮಂಗಳೂರು ಮಾಹಾನಗರದ ನಿವಾಸಿಗಳ ಅಗತ್ಯಕ್ಕೆ ಅನುಗುಣವಾಗಿ ಯೋಜನೆ ಸಿದ್ಧವಾಗುತ್ತಿದೆ. 8 ವರ್ಷಗಳ ಅವಧಿಯ ನಿರ್ವಹಣೆಗೆ ₹ 204.75 ಕೋಟಿ ವೆಚ್ಚವಾಗಲಿದ್ದು,  ಮೆ. ಸುಯೇಜ್ ಪ್ರಾಜೆಕ್ಟ್ ಪ್ರೈ. ಲಿ ಹಾಗೂ ಡಿಆರ್‌ಎಸ್ ಇನ್ಫಾಟೆಕ್ ಪ್ರೈ.ಲಿ. ಕಂಪೆನಿಗಳು ₹587.67 ಕೋಟಿ ವೆಚ್ಚದಲ್ಲಿ ಯೋಜನೆಯ ಕಾಮಗಾರಿ ನಿರ್ವಹಿಸಲಿವೆ.

ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ 81.7 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಉನ್ನತೀಕರಣ, ಮೇಲ್ಮಟ್ಟದ 23 ಜಲಸಂಗ್ರಾಹಕ, 8 ಪಂಪಿಂಗ್ ಘಟಕಗಳು, ನೆಲ ಹಂತದ 5 ಸಂಗ್ರಹಾಗಾರ, 55 ಕಿ.ಮೀ. ಪಂಪಿಂಗ್ ಮುಖ್ಯ ಕೊಳವೆ ಅಳವಡಿಕೆ ಕಾಮಗಾರಿ, 1,500 ಕಿ.ಮೀ. ವಿತರಣಾ ಕೊಳವೆ, ಮನೆಗಳಿಗೆ 96,300 ಗ್ರಾಹಕರ ಮಾಪಕ ಅಳವಡಿಸಲಾಗುತ್ತಿದೆ.

ನಗರ ವ್ಯಾಪ್ತಿಯನ್ನು 54 ವಲಯಗಳಾಗಿ ವಿಂಗಡಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬೇಡ್ಕರ್ ಭವನ ಲೋಕಾರ್ಪಣೆ: ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು.

ಸಚಿವರಾದ  ಸುಧಾಕರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್,, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ವೈ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಪೊಲೀಸ್ ಆಯುಕ್ತ ಶಶಿಕುಮಾರ್, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಧಿಕಾರಿಗಳು,  ಜನಪ್ರತಿನಿಧಿಗಳು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು