ಸೋಮವಾರ, ಜುಲೈ 26, 2021
21 °C
ಸುರತ್ಕಲ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದ ವೃದ್ಧೆ

ವರದಿಗಾಗಿ ಶವದೊಂದಿಗೆ 25 ಗಂಟೆ ಕಾದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸುರತ್ಕಲ್‌ನ ಕೃಷ್ಣಾಪುರದ ವೃದ್ಧೆಯೊಬ್ಬರು ಕೋವಿಡ್‌ ಪರೀಕ್ಷೆಗಾಗಿ ಗಂಟಲಿನ ದ್ರವದ ಮಾದರಿ ನೀಡಿ ಬಂದ ಮರುದಿನ ಮೃತಪಟ್ಟಿದ್ದು, ವರದಿ ಲಭಿಸುವುದು ವಿಳಂಬವಾದ ಕಾರಣದಿಂದ ಕುಟುಂಬದವರು 25 ಗಂಟೆಗಳ ಕಾಲ ಶವದೊಂದಿಗೆ ಕಾದಿದ್ದಾರೆ.

ಬುಧವಾರ ಗಂಟಲಿನ ದ್ರವ ನೀಡಿದ್ದ ವೃದ್ಧೆ, ಗುರುವಾರ ಸಂಜೆ 5 ಗಂಟೆಗೆ ಮೃತಪಟ್ಟಿದ್ದರು. ಶುಕ್ರವಾರ ಸಂಜೆ 6 ಗಂಟೆಗೆ ಲಭಿಸಿದ ವರದಿಯಲ್ಲಿ ಅವರಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. 25 ಗಂಟೆಗಳ ಕಾಲ ಮನೆಯಲ್ಲೇ ಶವ ಇರಿಸಿಕೊಂಡಿದ್ದ ಕುಟುಂಬದವರು, ವರದಿ ಪಡೆಯಲು ಹೆಣಗಾಡಿದ್ದಾರೆ.

ಕೃಷ್ಣಾಪುರ ನಿವಾಸಿಯಾಗಿದ್ದ 75 ವರ್ಷ ವಯಸ್ಸಿನ ವೃದ್ಧೆ ಅನಾರೋಗ್ಯದ ಸಮಸ್ಯೆಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆಗಾಗಿ ಹೋದಾಗ ಕೋವಿಡ್‌ ಪರೀಕ್ಷಾ ವರದಿ ತರುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಬಳಿಕ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದರು.

ಗುರುವಾರ ಸಂಜೆ 5 ಗಂಟೆಗೆ ವೃದ್ಧೆ ಮನೆಯಲ್ಲೇ ಕೊನೆಯುಸಿರೆಳೆದಿದ್ದರು. ಕೋವಿಡ್‌ ಪರೀಕ್ಷಾ ವರದಿ ಬಾರದೇ ಅಂತ್ಯಸಂಸ್ಕಾರ ನಡೆಸುವಂತಿರಲಿಲ್ಲ. ಮೃತ ಮಹಿಳೆಯ ಕುಟುಂಬದವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವರದಿ ನೀಡುವಂತೆ ಮನವಿ ಮಾಡಿದ್ದರು. ಆದರೆ, 24 ಗಂಟೆ ಕಳೆದರೂ ವರದಿ ದೊರಕಲಿಲ್ಲ. ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಸೇರಿದಂತೆ ಕೆಲವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಶ್ನಿಸಿದ ಬಳಿಕ ಶುಕ್ರವಾರ ಸಂಜೆ 6 ಗಂಟೆಗೆ ವರದಿ ಲಭಿಸಿತು.

‘ಮೃತರ ಮನೆಯವರ ಪರಿಸ್ಥಿತಿ ಹೇಳತೀರದಾಗಿತ್ತು. ಅಧಿಕಾರಿಗಳನ್ನು ಸಂಪರ್ಕಿಸಿದರೆ ಪ್ರತಿ ಬಾರಿಯೂ, ‘ಎರಡು ಗಂಟೆ ಬಳಿಕ ವರದಿ ನೀಡುತ್ತೇವೆ’ ಎನ್ನುತ್ತಿದ್ದರು. 25 ಗಂಟೆಗಳ ಕಾಲ ಕುಟುಂಬದವರು ಶವವನ್ನು ಇರಿಸಿಕೊಂಡು ಕಾಯಬೇಕಾಯಿತು. ಕೋವಿಡ್‌ ದೃಢಪಟ್ಟ ಬಳಿಕ ಆರೋಗ್ಯ ಇಲಾಖೆ ನಿಯೋಜಿಸಿದ್ದ ತಂಡ ಬಂದು ಅಂತ್ಯಸಂಸ್ಕಾರ ನಡೆಸಿದಾಗ ತಡರಾತ್ರಿ ಆಗಿತ್ತು’ ಎಂದು ಮುನೀರ್‌ ಕಾಟಿಪಳ್ಳ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.