ಮಂಗಳವಾರ, ಜನವರಿ 21, 2020
28 °C
ಬಂದರಿಗೆ ಬಂದಿದ್ದ 300 ಟನ್‌ ಮೀನಿಗೆ ಸಿಕ್ಕ ಖರೀದಿದಾರರು

ಮಂಗಳೂರು ಮೀನುಗಾರರನ್ನು ರಕ್ಷಿಸಿದ ಕರ್ಫ್ಯೂ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರ್ಫ್ಯೂ ವಿಧಿಸಿರುವುದರ ಪರಿವೇ ಇಲ್ಲದೇ ಶುಕ್ರವಾರ ಸುಮಾರು 300 ಟನ್‌ನಷ್ಟು ಮೀನು ಹೊತ್ತು ಬಂದಿದ್ದ ಮೀನುಗಾರಿಕೆ ಬೋಟ್‌ಗಳ ಮಾಲೀಕರ ಆತಂಕ ಶನಿವಾರ ನಿವಾರಣೆ ಆಯಿತು. ಶನಿವಾರ ಮಧ್ಯಾಹ್ನ 3 ಗಂಟೆ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಖರೀದಿಯೂ ನಡೆಯಿತು. ಜತೆಗೆ ಬೇರೆ ಕಡೆಗಳಿಗೆ ಮೀನಿನ ಸಾಗಣೆಯೂ ಆಯಿತು.

ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಮೀನು ಮಾರಾಟವು ಅಬ್ಬರದಿಂದ ಕೂಡಿತ್ತು. ಎರಡು ದಿನಗಳಿಂದ ಮಾರಾಟವಾಗದೇ ಐಸ್‌ನಲ್ಲಿ ಇಟ್ಟಿದ್ದ ಮೀನುಗಳನ್ನು ಮಾರಾಟ ಮಾಡಲಾಯಿತು. ಅದಾಗ್ಯೂ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಈ ಮಧ್ಯೆ ಗ್ರಾಹಕರೂ ಬೆಲೆಗೆ ಗಮನ ಕೊಡದೇ, ಸಿಕ್ಕಷ್ಟು ಮೀನನ್ನು ಖರೀದಿಸಿ ಮನೆಯತ್ತ ತೆರಳಿದರು.

ಶನಿವಾರ ಸಂಜೆಯ ವೇಳೆಗೆ ಕರ್ಫ್ಯೂ ತೆಗೆದು ಹಾಕದಿದ್ದರೆ ಹಿಡಿದಿರುವ ಸುಮಾರು 300 ಟನ್‌ನಷ್ಟು ಮೀನು ಕೊಳೆಯಲು ಪ್ರಾರಂಭವಾಗುತ್ತಿತ್ತು ಎಂದು ಪರ್ಸೀನ್‌ ಬೋಟ್ ಮಾಲೀಕರ ಸಂಘದ ಗೌರವಾಧ್ಯಕ್ಷ ಉಮೇಶ್ ಕರ್ಕೇರ ತಿಳಿಸಿದರು.

ಬಂದ್ ಹಾಗೂ ಕರ್ಫ್ಯೂ ಕಾರಣದಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾದರೆ, ಅತಿ ಹೆಚ್ಚು ಸಮಸ್ಯೆಗೆ ಸಿಲುಕುವವರು ಮೀನುಗಾರರೇ. ಐದರಿಂದ ಆರು ಪರ್ಸೀನ್‌ ಬೋಟ್‌ಗಳು ಮತ್ತು ಸುಮಾರು 50 ಟ್ರಾಲರ್‌ ಬೋಟ್‌ಗಳು ಆಳ ಸಮುದ್ರ ಮೀನುಗಾರಿಕೆಯಿಂದ ಶುಕ್ರವಾರ ಬಂದರಿಗೆ ಮರಳಿದ್ದವು. ಈ ದೋಣಿಗಳನ್ನು ವಾಪಸ್ ಕಳುಹಿಸಿ, ಶನಿವಾರ ಮತ್ತೆ ಹಿಂತಿರುಗಲು ಹೇಳಲಾಗಿತ್ತು ಎಂದು ಕರ್ಕೇರ ತಿಳಿಸಿದರು.

ವಿಧಿಸಿದ್ದರಿಂದ ಮೀನಿನ ಶೇಖರಣೆಗೆ ಬೇಕಾಗುವಷ್ಟು ಮಂಜುಗಡ್ಡೆಯೂ ಬಂದರಿಗೆ ಸರಬರಾಜು ಆಗಿರಲಿಲ್ಲ. ಆದರೆ ಶನಿವಾರದವರೆಗೆ ಮೀನುಗಳು ಹಾಳಾಗದಂತೆ ತಡೆಯಲು ದೋಣಿಗಳಲ್ಲಿ ಮಂಜುಗಡ್ಡೆಯ ಸಂಗ್ರಹವಿತ್ತು. ಹೀಗಾಗಿ ಬೋಟ್‌ಗಳನ್ನು ಶನಿವಾರ ಮರಳುವಂತೆ ಹೇಳಿ ಕಳುಹಿಸಲಾಗಿತ್ತು.

ಕರ್ಫ್ಯೂನಿಂದ ಮೀನುಗಾರಿಕಾ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಅನುಭವಿಸುವಂತಾಗಿದೆ. ಬಂದರನ್ನು ಅವಲಂಬಿಸಿ ನೇರವಾಗಿ ಅಥವಾ ಪರೋಕ್ಷವಾಗಿ ಸುಮಾರು 5 ಸಾವಿರ ಜನರು ಜೀವನ ನಡೆಸುತ್ತಿದ್ದು, ಅವರೆಲ್ಲ ಕೆಲಸವಿಲ್ಲದೇ ಮನೆಯೊಳಗೆ ಇರುವಂತಾಗಿತ್ತು ಎಂದು ಅವರು ವಿವರಿಸಿದರು.

ಮೀನುಗಾರರು ನಿರಾಳ

ಶನಿವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮೀನುಗಾರರ ನಿಯೋಗ, ವಸ್ತು ಸ್ಥಿತಿಯನ್ನು ವಿವರಿಸಿ, ಕರ್ಫ್ಯೂ ಸಡಿಲಿಸುವಂತೆ ಮನವಿ ಮಾಡಿತು.

ಶಾಸಕ ಡಿ.ವೇದವ್ಯಾಸ ಕಾಮತ್‌ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಿತಿನ್‌ಕುಮಾರ್ ನೇತೃತ್ವದ ನಿಯೋಗ, ಈಗಾಗಲೇ ಬೋಟ್‌ಗಳು ಮೀನು ಹೊತ್ತು ಬಂದರಿಗೆ ಬಂದಿದ್ದು, ಕರ್ಫ್ಯೂ ಹಿಂದಕ್ಕೆ ಪಡೆಯಲಿದ್ದರೆ, ಕೋಟ್ಯಂತರ ನಷ್ಟ ಅನುಭವಿಸುವಂತಾಗಲಿದೆ ಎಂದು ತಿಳಿಸಿತು.

ಶನಿವಾರ ಮಧ್ಯಾಹ್ನ ಕರ್ಫ್ಯೂ ಸಡಿಲಿಸಿದ್ದರೂ, 3 ಗಂಟೆಯಲ್ಲಿ ಬಂದರಿನಿಂದ ಮೀನನ್ನು ಎತ್ತಿ, ಹೊರಗೆ ಸಾಗಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾನುವಾರವೂ ಕರ್ಫ್ಯೂ ಸಡಿಲಿಸುವಂತೆ ವಿನಂತಿಸಿತ್ತು. ಇದೀಗ ಭಾನುವಾರ ಕರ್ಫ್ಯೂ ಸಡಿಲಿಸಿರುವುದರಿಂದ ಮೀನುಗಾರರು ನಿರಾಳ ಆಗುವಂತಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು