ಭಾನುವಾರ, ಮಾರ್ಚ್ 7, 2021
32 °C
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ

ಸ್ವಯಂ ಉದ್ಯೋಗ, ಉದ್ಯಮಗಳಿಗೆ ಪ್ರೋತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಹಿಂದುಳಿದ ವರ್ಗಗಳ ಸ್ವಾವಲಂಬನೆಯ ನಿಟ್ಟಿನಲ್ಲಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳ ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡಲಾಗುವುದು’ ಎಂದು ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರ ‘ಕೌಶಲ’ ಹಾಗೂ ಮುಖ್ಯಮಂತ್ರಿಗಳ ‘ಕಾಯಕ’ ಪರಿಕಲ್ಪನೆ ಅಡಿಯಲ್ಲಿ ಯೋಜನೆ ರೂಪಿಸುತ್ತಿದ್ದು, ಪಾರದರ್ಶಕತೆ ತರಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಇ–ವಾಣಿಜ್ಯ ಸಂಸ್ಥೆಗಳಲ್ಲಿ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುತ್ತಿರುವ ಹಿಂದುಳಿದ ವರ್ಗಗಳ ಯುವಕರಿಗೆ ಬೈಕ್ ಖರೀದಿಗೆ ಸಾಲ ನೀಡಲಾಗುವುದು ಎಂದರು.

‘ನಿಗಮದ ಎಲ್ಲ ಕಚೇರಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಎಲ್ಲ 206 ಜಾತಿಗಳಿಗೂ ಜನಸಂಖ್ಯಾ ಆಧಾರದಲ್ಲಿ ಪ್ರಾತಿನಿಧ್ಯ, ವಿವಿಧ ಇಲಾಖೆ ಹಾಗೂ ನಿಗಮಗಳ ಜೊತೆ ಸಮನ್ವಯ, ಆಯ್ಕೆ ಸಮಿತಿಗೆ ಅಧಿಕಾರೇತರ ಸದಸ್ಯರ ನೇಮಕ ಮತ್ತಿತರ ಹೆಜ್ಜೆಗಳ ಮೂಲಕ ಪಾರದರ್ಶಕತೆ ತರಲಾಗುವುದು’ ಎಂದು ಅವರು ವಿವರಿಸಿದರು. 

‘ನಿಗಮದಿಂದ ನೀಡಲಾಗುತ್ತಿರುವ ಅರಿವು ಶೈಕ್ಷಣಿಕ ಯೋಜನೆಯಲ್ಲಿ 699 ವಿದ್ಯಾರ್ಥಿಗಳಿಗೆ ₹8.36 ಕೋಟಿ ಸಾಲ ನೀಡಲಾಗಿದೆ. ಸ್ವಯಂ ಉದ್ಯೋಗ ಹಾಗೂ ಸಾಂಪ್ರದಾಯಿಕ ಕಸುಬುದಾರರಿಗೆ ₹1 ಲಕ್ಷ ಸಾಲ ಸೌಲಭ್ಯವನ್ನು ಶೇ 4 ಬಡ್ಡಿ ದರದಲ್ಲಿ ಶೇ 20 ಸಹಾಯಧನದೊಂದಿಗೆ ನೀಡಲಾಗುವುದು’ ಎಂದರು.

‘ಸೇವಾ, ಸಾರಿಗೆ ಮತ್ತು ಕೈಗಾರಿಕಾ ವಲಯಗಳಲ್ಲಿ ವಿದೇಶಿ ಉತ್ಪನ್ನಗಳ ಬದಲು ಸ್ವಾವಲಂಬಿ ಉತ್ಪಾದನೆಗೆ ಒತ್ತು ನೀಡಲಾಗುವುದು’ ಎಂದರು.

‘ಪ್ರತಿ ತಾಲ್ಲೂಕಿಗೆ ಕನಿಷ್ಠ 50 ಮಂದಿಯಂತೆ ಆಯ್ಕೆ ಮಾಡಿ ಕೌಶಲ ತರಬೇತಿ ನೀಡಲಾಗುವುದು. ವಾರ್ಷಿಕ ಒಂದು ಲಕ್ಷ ಮಂದಿಗೆ ತರಬೇತಿ ನೀಡುವುದು ನಮ್ಮ ಗುರಿ. ತರಬೇತು ಪಡೆದವರಿಗೆ ಸ್ವ–ಉದ್ಯೋಗಕ್ಕಾಗಿ ಸಾಲ ಸೌಲಭ್ಯ ನೀಡಲಾಗುವುದು. ನಿಗಮದ ವ್ಯಾಪ್ತಿಗೆ 206 ಜಾತಿಗಳು ಬರುತ್ತಿದ್ದು, ಇವರ ವೃತ್ತಿಗಳ ಪುನಶ್ಚೇತನಕ್ಕೆ ಯೋಜಿಸಲಾಗುತ್ತಿದೆ. ಮಹಿಳೆಯರಿಗೆ ಗುಂಪು ಕೈಗಾರಿಕೆಗಳಿಗೂ ನೆರವು ನೀಡಲಾಗುವುದು’ ಎಂದರು.

‘ಗಂಗಾಕಲ್ಯಾಣ ಯೋಜನೆ ಸೇರಿದಂತೆ ನಿಗಮದ ಎಲ್ಲ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಯ್ಕೆ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನೇಮಕಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು’ ಎಂದರು.

‘ಕೃಷಿ, ಅರಣ್ಯ, ಸಮುದ್ರ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲಾಗುವುದು. ಆ ಮೂಲಕ ಹಿಂದುಳಿದ ವರ್ಗಗಳ ಸಶಕ್ತೀಕರಣಕ್ಕೆ ಶ್ರಮಿಸಲಾಗುವುದು’ ಎಂದರು.

ಮಂಗಳೂರು ಪಾಲಿಕೆ ಸದಸ್ಯರಾದ ರೂಪ ಬಂಗೇರ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಸುರೇಂದ್ರ, ಮಹೇಶ್‌ಕುಮಾರ್, ಕಿರಣ್‌ಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು