ಶನಿವಾರ, ಫೆಬ್ರವರಿ 4, 2023
18 °C
ಪರವ, ಪಂಬದ, ನಲಿಕೆಯವರ ಒತ್ತಾಯ

50 ವರ್ಷ ಮೇಲಿನ ದೈವನರ್ತಕರಿಗೂ ಮಾಸಾಶನ ಸಿಗಲಿ: ದಯಾನಂದ ಕತ್ತಲಸಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ದೈವ ನರ್ತಕರರಲ್ಲಿ 60 ವರ್ಷ ಮೇಲ್ಪಟ್ಟವರ ಸಂ‌ಖ್ಯೆ ತುಂಬಾ ಕಡಿಮೆ. ಹಾಗಾಗಿ 50 ವರ್ಷ ದಾಟಿದ ದೈವನರ್ತಕರಿಗೂ ಸರ್ಕಾರ ಮಾಸಾಶನ ನೀಡಬೇಕು. ಈ ಮಾಸಾಶನ ಪಡೆಯಲು ಈಗ ನಿಗದಿಪಡಿಸಿ ವಯೋಮಿತಿಯನ್ನು ಕನಿಷ್ಠ 55 ವರ್ಷಕ್ಕಾದರೂ ಇಳಿಸಬೇಕು’ ಎಂದು ಪಂಬದರ ಯಾನೆ ದೈವಾರಾಧಕರ ಸೇವಾ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ ಸಾರ್‌ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವನರ್ತಕರಿಗೆ ಮಾಸಾಶನ ಪ್ರಕಟಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

‘ದೈವ ನರ್ತಕರು ಹಗಲು ರಾತ್ರಿಯೆನ್ನದೇ ದಿನದಲ್ಲಿ ಸತತ 16 ಗಂಟೆವರೆಗೂ ಸತತ ದೈವಾರಾಧನೆಯಲ್ಲಿ ತೊಡಗುವುದುಂಟು. 60 ವರ್ಷ ಮೀರಿದ ಬಳಿಕ ಮಾಸಾಶನ ಸಿಕ್ಕಿದರೆ, ಅದನ್ನು ಅನುಭವಿಸುವುದಕ್ಕೆ ಅವರಿಗೆ ಪ್ರಾಯ ಇರುವುದಿಲ್ಲ’ ಎಂದರು.

‘ದೈವದ ಕೋಲ ಕಟ್ಟುವವರು ಮಾತ್ರ ದೈವಗಳ ಸೇವೆ ಮಾಡುವುದಲ್ಲ. ದರ್ಶನ ಪಾತ್ರಿಗಳು, ದೀವಟಿಕೆಯವರು, ವಾಲಗದವರು ಸೇರಿದಂತೆ ಇತರ 16 ಚಾಕರಿ ವರ್ಗಗಳಲ್ಲೂ ಶೋಷಿತರು ಇದ್ದಾರೆ. ಅವರಿಗೂ ಈ ಮಾಸಾಶನ ಸೌಲಭ್ಯ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದರು.

’ದೈವ ನರ್ತಕರು ಮಾಸಾಶನಕ್ಕೆ ಅರ್ಜಿ ಹಾಕುವಾಗ ತಾಂತ್ರಿಕ ದೋಷ ಎದುರಾಗಲಿದೆ. 58 ವರ್ಷ ದಾಟಿದ ದೈವ ನರ್ತಕರಿಗೆ  ವೃದ್ಧಾಪ್ಯ ವೇತನ ಸಿಗುತ್ತಿದ್ದರೆ, ಅವರು ₹ 2ಸಾವಿರ ಮಾಸಾಶನಕ್ಕೆ ಅರ್ಹತೆ ಕಳೆದುಕೊಳ್ಳುತ್ತಾರೆ. ವೃದ್ಧಾಪ್ಯ ವೇತನ ತ್ಯಜಿಸಿದರೂ ದೈವನರ್ತಕರ ಮಾಸಾಶನಕ್ಕೆ ಎರಡು ಮೂರು ವರ್ಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ದೈವನರ್ತಕರಿಗೆ ಮಾಸಾಶನ ಹಾಗೂ ವೃದ್ಧಾಪ್ಯ ವೇತನಗಳೆರಡನ್ನೂ ನೀಡಿದರೆ ಇನ್ನೂ ಉತ್ತಮ. ನಿರಕ್ಷರ ಕುಕ್ಷಿಗಳು ಪಂಚಾಯಿತಿ ಮಟ್ಟದಲ್ಲೇ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಕ್ರಮಕೈಗೊಳ್ಳಬೇಕು’ ಎಂದರು.

ನಟ ಚೇತನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದೈವಾರಾಧನೆ ಮಾಡುವ 16 ವರ್ಗದವರೂ ಹಿಂದೂಗಳೇ. ಸಂವಿಧಾನದಲ್ಲಿ ನಮ್ಮನ್ನು ಪರಿಶಿಷ್ಟ ಜಾತಿ ಎಂದೇ ಪ್ರಮಾಣಪತ್ರ ನೀಡಲಾಗಿದೆ. ನಮ್ಮನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಷಡ್ಯಂತ್ರವನ್ನು ವಿರೋಧಿಸುತ್ತೇವೆ. ಈ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಹಿಂಜರಿಯುವುದಿಲ್ಲ. ಪರವ, ಪಂಬದ, ನಲಿಕೆಸಮುದಾಯದವರು ಸಭೆ ನಡೆಸಿ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇವೆ’ ಎಂದರು. 

ದಕ್ಷಿಣ ಕನ್ನಡ ಪರವ ಸಂಘದ ಸಂಚಾಲಕ ಡಾ.ರವೀಶ್ ಪರವ ಪಡುಮಲೆ, ‘ನಮ್ಮನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವಂತಹ ಹೇಳಿಕೆ ಕೊಟ್ಟವರಿಗೆ ದೈವಾರಾಧನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ನಮ್ಮ ಸೇವೆ ದೈವದ ನರ್ತನ ಮಾತ್ರ. ಉಳಿದ 15 ವರ್ಗದವರು ಸೇರಿದರೆ ಮಾತ್ರ ದೈವಾರಾಧನೆ ಸಾಧ್ಯ. ಈ  ಹೇಳಿಕೆ ನೀಡಿದವರು, ಅದನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ’ ಎಂದರು. 

ಉಡುಪಿ ಜಿಲ್ಲಾ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪಾಂಡುರಂಗ ನಲಿಕೆ, ‘ದೈವನರ್ತನದಲ್ಲಿ ತೊಡಗಿಸಿಕೊಂಡ ಅನೇಕ ಕುಟುಂಬಗಳಿಗೆ ಊಟಕ್ಕೂ ಗತಿ ಇಲ್ಲ. ಈ ಮಾಸಾಶನದಿಂದ ಅವರಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು.

‘ತುಳುನಾಡಿನಲ್ಲಿ ದೈವಾರಾಧನೆಯೇ ಪ್ರಾಚೀನ’

‘ದೈವಾರಾಧನೆ ಮತ್ತು ವೈದಿಕ ಆಚರಣೆಗಳಲ್ಲಿ ಯಾವುದು ಪ್ರಾಚೀನ ಎಂದು ತರ್ಕಿಸುವುದು ಕಷ್ಟ. ತುಳುನಾಡಿನಲ್ಲಿ ದೈವಾರಾಧನೆಯೇ ಪ್ರಾಚೀನ. ಇಲ್ಲಿ ವೈದಿಕ ಪರಂಪರೆ ನಂತರ ಬಂದಿರಬಹುದು. ಅದು ಕೂಡಾ ಪ್ರಾಚೀನವೇ. ತುಳುನಾಡಿನ ದೈವಾರಾಧನೆಯನ್ನು ಎಲ್ಲರೂ  ಸ್ವೀಕರಿಸಿದ್ದಾರೆ. ಜೈನರು, ನಾಥ ಪಂಥದವರು, ಬ್ರಾಹ್ಮಣರು, ಕ್ರೈಸ್ತರು, ಮುಸ್ಲಿಮರು ಎಲ್ಲರೂ ದೈವಾರಾಧನೆ ನಡೆಸುತ್ತಾರೆ. ವೇದಗಳಿಗೆ ಸಾಮ್ಯತೆ ಇರುವ ಅನೇಕ ವಿಚಾರಗಳು ಸಂಧಿ ಪಾರ್ಡ್ದನಗಳಲ್ಲಿ ಸಿಗುತ್ತವೆ‘ ಎಂದು ಪ್ರಶ್ನೆಯೊಂದಕ್ಕೆ ದಯಾನಂದ ಕತ್ತಲಸಾರ್‌ ಉತ್ತರಿಸಿದರು. 

‘ದೈವಾರಾಧನೆಯಲ್ಲೂ ಬದಲಾವಣೆಗಲಾಗುತ್ತಿವೆ. ಹಿಂದೆ ಕಾಂಕ್ರೀಟ್‌ ನೆಲ, ಕಾಂಕ್ರೀಟ್‌ ಚಪ್ಪರ ಇರಲಿಲ್ಲ. ಈಗ ಎಲ್ಲವೂ ಆಗಿದೆ.  ದೈವಗಳ ಪೂಜೆ ಮಾಡಲೆಂದೇ ನಿರ್ದಿಷ್ಟ ವರ್ಗದವರಿದ್ದರು. ಅವರು ಬೇರೆ ವೃತ್ತಿಗೆ ಹೋಗಿದ್ದಾರೆ. ವೈದಿಕರು ತುಳುನಾಡಿಗೆ ಬಂದು ಸಹಸ್ರಾರು ವರ್ಷಗಳಾಗಿವೆ. ಅವರನ್ನು ನಮ್ಮವರಲ್ಲ ಎನ್ನಲಾಗದು. ಅವರು ದೈವಾರಾಧನೆ ಮಾಡುವಂತೆ ನಾವು ದೇವತಾರಾಧನೆಯನ್ನೂ ಮಾಡುತ್ತೇವೆ’ ಎಂದರು.

‘ಮೂಲನಿವಾಸಿಗಳು ಬದಲಾಗಬಾರದೇ?‘

‘ನೆಲದ ಮೂಲನಿವಾಸಿಗಳು ಬದಲಾಗಬಾರದೇ. ನಾವು ಸೊಪ್ಪು ಕಟ್ಟಿಕೊಂಡೇ ಇರಬೇಕಾ. ನಾವು ಶಿಕ್ಷಣ ಪಡೆಯಬಾರದಾ’ ಎಂದು ದಯಾನಂದ ಕತ್ತಲಸಾರ್‌ ಪ್ರಶ್ನಿಸಿದರು.

‘ನಮ್ಮವರಿಗೂ ಈ ಹಿಂದೆ ಭೂಮಿ ಉಂಬಳಿ ಬಿಡುತ್ತಿದ್ದರು. ಈಗ ದೈವನರ್ತಕರಲ್ಲಿ ಐದು ಸೆಂಟ್ಸ್‌ – ಹತ್ತು ಸೆಂಟ್ಸ್‌ ಜಾಗ ಮಾತ್ರ ಉಳಿದಿದೆ. ದೈವನರ್ತಕರು ಶಿಸ್ತಿನಿಂ‌ದ ಬದುಕಬೇಕು ಎಂದು ಕಟ್ಟುಪಾಡು ವಿಧಿಸುವ ಸಮಾಜವು ಅವರಿಗೆ ಬೇಕಾದ ಅವಶ್ಯಕತೆ ಪೂರೈಸುವ ಬಗ್ಗೆಯೂ ಗಮನಹರಿಸಬೇಕು. ನಾವು ಸಂಪ್ರದಾಯದ ಕೂಪದಲ್ಲಿದ್ದವೇ. ನಮ್ಮ ಸಮಾಜದವರಲ್ಲೂ ನೋವುಗಳಿವೆ. ನಮಗೂ ಸಾಮಾಜಿಕ ಭದ್ರತೆ ಬೇಕು. ವಿಮೆ ಸೌಲಭ್ಯ ಬೇಕು’ ಎಂದರು.

‘ಮೇಲು– ಕೀಲು ವ್ಯವಸ್ಥೆಗೆ ನಾವೇ ಹೊಣೆ.  ಅವಹೇಳನ, ನಿಂದನೆ ಆದಾಗ ಅಂತಹ ಘಟನೆಗಳನ್ನು ತಕ್ಷಣವೇ ಖಂಡಿಸಬೇಕು. ನಮ್ಮ ಪರಂಪರೆ ಯಥಾವತ್ತಾಗಿ ಮುಂದುವರಿಸಬೇಕು. ನಮ್ಮ ಮೇಲೆ ಸವಾರಿ ಮಾಡಿದರೆ ಪ್ರತಿಭಟಿಸಬೇಕು. ನಾವು ಶರಾಣುತ್ತೇವೆ. ಶರಣಾದವರನ್ನು ತುಳಿದರೆ ನಾವು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

***

ದೈವಾರಾಧನೆಗೆ ಪ್ರತ್ಯೇಕ ಅಕಾಡೆಮಿ ಬೇಕು. ದೈವಾರಾಧನೆಯ ಸಂಧಿ ಪಾರ್ಡ್ದನಗಳೆಲ್ಲವೂ ಮಹತ್ತರ ಸಾಹಿತ್ಯ. ಇವುಗಳ ಅಧ್ಯಯನಕ್ಕೆ ಪ್ರತ್ಯೇಕ ಅಧ್ಯಯನ ಪೀಠ ಬೇಕು
- ದಯಾನಂದ ಕತ್ತಲಸಾರ್‌, ದೈವನರ್ತಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು