ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಕೊರತೆ; ಗೋಡಂಬಿ ಬೆಲೆ ಕುಸಿತ

ಕಳ್ಳಸಾಗಾಣಿಕೆ, ಬೇರೆ ರೂಪದಲ್ಲಿ ದೇಶದ ಮಾರುಕಟ್ಟೆಗೆ ಲಗ್ಗೆ: ಉದ್ಯಮಕ್ಕೆ ಹೊಡೆತ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಅಕ್ಷರ ಗಾತ್ರ

ರಂಜಿತ್‌ ಪುಣ್ಚಪ್ಪಾಡಿ

ಮಂಗಳೂರು: ಸಂಸ್ಕರಿಸಿದ ಗೇರುಬೀಜ (ಗೋಡಂಬಿ) ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೂ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಬೆಳೆಗಾರರಿಂದ ಖರೀದಿಸುವ ಗೇರುಬೀಜದ ಬೆಲೆ ಇಳಿಮುಖವಾಗಿದೆ.

ಈ ವರ್ಷ ಆರಂಭದಲ್ಲಿ 1 ಕೆ.ಜಿ. ಗೇರುಬೀಜಕ್ಕೆ ₹115 ಅಧಿಕ ಬೆಲೆ ದೊರಕಿದ್ದರೂ, ನಂತರ ಮಳೆಬಿದ್ದ ಕಾರಣ ಬೆಲೆ ಕುಸಿದಿದೆ. ಪ್ರಸ್ತುತ ಕೆ.ಜಿ.ಯೊಂದರ ಬೆಲೆ ₹80ರಿಂದ ₹85 ಇದೆ.

‘ಕೃಷಿಕರು ಅಡಿಕೆಯನ್ನು ಹೆಚ್ಚು ನೆಚ್ಚಿಕೊಂಡಿದ್ದು, ಗೇರು ಬೆಳೆಯುವವರು ಕಡಿಮೆ. ಜತೆಗೆ ಈ ಬಾರಿ ಗೇರು ಇಳುವರಿಯೂ ಕಡಿಮೆ ಇದೆ. ವಾತಾವರಣದ ಏರುಪೇರಿನಿಂದ ಗೇರುಬೀಜದ ಗುಣಮಟ್ಟ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ’ ಎನ್ನುತ್ತಾರೆ ವ್ಯಾಪಾರಿ ರಫೀಕ್‌ ಸವಣೂರು.

ಹುಳಬಾಧೆ ತಗುಲಿ ಕೆಲವು ಮರಗಳು ಒಣಗಿವೆ. ಗೇರು ಮರದಿಂದ ಉತ್ತಮ ಇಳುವರಿ ಪಡೆಯಬಹುದು. ಇತರ ಬೆಳೆಗಳಿಗೆ ಹೋಲಿಸಿದರೆ ನಿರ್ವಹಣೆಯೂ ಸುಲಭ. ಸಂಸ್ಕರಿಸಿದ ಗೇರುಬೀಜಕ್ಕೆ ದುಬಾರಿ ಬೆಲೆಯಿದ್ದರೂ, ಬೆಳೆಸುವವರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೆಳೆಗಾರರೊಬ್ಬರು ತಿಳಿಸಿದರು.

ಕರ್ನಾಟಕದಲ್ಲಿ 40 ಸಾವಿರ ಟನ್‌ ಗೇರುಬೀಜ ಉತ್ಪಾದಿಸಲಾಗುತ್ತಿದ್ದು, 3 ಲಕ್ಷ ಟನ್‌ ಬೇಡಿಕೆಯಿದೆ. ಉಳಿದ 2.60 ಲಕ್ಷ ಟನ್‌ ಗೇರುಬೀಜ ಆಮದಾಗುತ್ತಿದೆ. ಸುಮಾರು 10 ಲಕ್ಷ ಕಾರ್ಮಿಕರಿಗೆ ಗೇರು ಉದ್ಯಮದ ಮೂಲಕ ಉದ್ಯೋಗ ದೊರೆತಿದೆ. ವಿಯೆಟ್ನಾಂ, ಆಫ್ರಿಕಾದ ದೇಶಗಳಿಂದ ಗೇರುಬೀಜ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದೆ. ಕೋವಿಡ್‌–19 ನಂತರ ಜನರಲ್ಲಿ ಹೆಚ್ಚಿದ ಆರೋಗ್ಯ ಕಾಳಜಿ, ಮಕ್ಕಳ ಟಿಫನ್‌ ಬಾಕ್ಸ್‌ಗೆ ಡ್ರೈ ಫ್ರೂಟ್ಸ್ ಬಳಕೆ ಟ್ರೆಂಡ್‌ಗಳಿಂದಾಗಿ ದೇಶದಲ್ಲಿ ಗೋಡಂಬಿ ಬಳಕೆ ಹೆಚ್ಚಾಗುತ್ತಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಸೆಕೆ, ಅಧಿಕ ಉಷ್ಣತೆ ಗೇರು ಬೆಳೆಗೆ ಅನುಕೂಲವಾಗಿದ್ದು, ಉತ್ತಮ ಗುಣಮಟ್ಟದ ಗೋಡಂಬಿ ಉತ್ಪಾದನೆಯಾಗಿದೆ ಎಂದು ಉಳ್ಳಾಲದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರೊ. ರವಿರಾಜ್‌ ಶೆಟ್ಟಿ ಮಾಹಿತಿ ನೀಡಿದರು.

ಗೇರುಬೀಜ ಬೆಳೆ ಸುಲಭ ಹಾಗೂ ಲಾಭದಾಯಕ. ಸರ್ಕಾರ ಗೇರು ಬೆಳೆಯಲು ಉತ್ತೇಜನ ನೀಡುತ್ತಿದೆ. ತೋಟಗಾರಿಕಾ ಇಲಾಖೆ ಗೇರುಬೀಜ ಪ್ರದೇಶ ವಿಸ್ತರಣೆ ಯೋಜನೆ, ಹಳೆ ಗಿಡಗಳ ಪುನಶ್ಚೇತನ, ಸಹಾಯಧನ ನೀಡುತ್ತಿದೆ. ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ರಾಸಾಯನಿಕ ಔಷಧ ವಿತರಿಸಲಾಗುತ್ತದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ರಾಣಿ ಜಯದುರ್ಗಾ ನಾಯಕ್‌ ತಿಳಿಸಿದರು.

ಗೇರುಬೀಜ ಉದ್ಯಮಕ್ಕೆ ಹೊಡೆತ ವಿದೇಶಗಳಿಂದ ಕಳ್ಳಸಾಗಾಣಿಕೆ ಬೇರೆ ರೂಪಗಳಲ್ಲಿ ಗೇರುಬೀಜ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಕಾರಣ ಗೇರುಬೀಜ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಸರ್ಕಾರ ಕಸ್ಟಮ್ಸ್‌ ಇಲಾಖೆ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮವಾಗಿಲ್ಲ. ಈ ಬಗ್ಗೆ ಗಮನಹರಿಸದೆ ಇದ್ದಲ್ಲಿ ಉದ್ಯಮಕ್ಕೆ ಹೊಡೆತ ಬೀಳುವ ಸಂಭವವಿದೆ ಎಂದು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಪಿ. ಸುಬ್ರಾಯ ಪೈ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT