ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿಗೆ ನ್ಯಾಕ್ ‘ಎ+’ ಮಾನ್ಯತೆ

Last Updated 19 ಜನವರಿ 2023, 13:44 IST
ಅಕ್ಷರ ಗಾತ್ರ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ ಮೊದಲ ಸುತ್ತಿನಲ್ಲೇ ಸಿಜಿಪಿಎ 3.32ನೊಂದಿಗೆ ‘ಎ+’ ಮಾನ್ಯತೆ ನೀಡಿದೆ. ಮುಂದಿನ ಐದು ವರ್ಷಗಳ ಅವಧಿಗೆ ಈ ಮಾನ್ಯತೆ ಊರ್ಜಿತದಲ್ಲಿರುತ್ತದೆ ಎಂದು ‌ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಆದಿಕವಿ ನನ್ನಯಾ ವಿವಿಯ ಸಿಎಸ್ಇ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕುಲಪತಿ ಡಾ.ಸುರೇಶ್ ವರ್ಮಾ ನೇತೃತ್ವದಲ್ಲಿ ಪಾಂಡಿಚೇರಿ ವಿವಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕಿ ಡಾ.ಮಾಲಬಿಕ ಡಿಯೊ ಹಾಗೂ ಅಮರಾವತಿಯ ಶಿವಾಜಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ವಿಜಯ್ ಠಾಕ್ರೆ ಅವರನ್ನೊಳಗೊಂಡ ನ್ಯಾಕ್ ತಂಡ ಜ.13 ಮತ್ತು 14ರಂದು ಸಂಸ್ಥೆಗೆ ಭೇಟಿ ನೀಡಿ, ಶೈಕ್ಷಣಿಕ ಸಿದ್ಧತೆ ಹಾಗೂ ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ನಡೆಸಿತ್ತು’ ಎಂದು ವಿವರಿಸಿದರು.

‘ನ್ಯಾಕ್‌ನ ಗುಣಾತ್ಮಕ ಮಾಪನದ ಪ್ರಮುಖ ಏಳು ಆಯಾಮಗಳ ಆಧಾರದಲ್ಲಿ ತಂಡವು ಸಂಸ್ಥೆಯಲ್ಲಿ ಸೂಕ್ಷ್ಮ ಪರಿಶೀಲನೆ ಹಾಗೂ ಮಾಪನ ನಡೆಸಿತು. ಈ ಆಯಾಮಗಳಾದ ಸಂಸ್ಥೆಯಲ್ಲಿನ ಪಠ್ಯಕ್ರಮದ ಅಂಶಗಳು, ಬೋಧನೆ- ಕಲಿಕೆ ಹಾಗೂ ಮೌಲ್ಯಮಾಪನೆ, ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಣಾ ಕಾರ್ಯಕ್ರಮಗಳು, ಮೂಲಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಪ್ರೋತ್ಸಾಹ ಹಾಗೂ ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಮತ್ತು ಸಾಂಸ್ಥಿಕ ಮೌಲ್ಯಗಳು ಹಾಗೂ ಉನ್ನತ ಅಭ್ಯಾಸಗಳ ಆಧಾರದಲ್ಲಿ ತಂಡವು ಜ.14ರಂದು ನಡೆದ ನಿರ್ಗಮನ ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿತ್ತು’ ಎಂದು ಮೋಹನ ಆಳ್ವ ತಿಳಿಸಿದರು.

ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ನಿಕಾಯವು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ 2019 ಮತ್ತು 2022ರಲ್ಲಿ ಮೂರು ವರ್ಷಗಳ ಅವಧಿಗೆ ಮಾನ್ಯತೆ ಹಾಗೂ ಮರು ಮಾನ್ಯತೆಯನ್ನು ಪಡೆದಿದೆ.

ನ್ಯಾಕ್ ನೀಡಿದ ‘ಎ+’ ಮಾನ್ಯತೆಯು ಸಂಸ್ಥೆಯ ಉನ್ನತ ಮಟ್ಟದ ಗುಣಾತ್ಮಕ ಶಿಕ್ಷಣವನ್ನು ದೇಶದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದ್ದು ಹಾಗೂ ಮುಂದಿನ ದಿನಗಳಲ್ಲಿ ‘ಸ್ವಾಯತ್ತ’ ದತ್ತ ದೃಢ ಹೆಜ್ಜೆ ಇಡಲು ಪೂರಕ ಅವಕಾಶವನ್ನು ಕಲ್ಪಿಸಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಐಕ್ಯೂಎಸಿ ಹಾಗೂ ನ್ಯಾಕ್ ಸಂಚಾಲಕ ಡಾ.ದತ್ತಾತ್ರೇಯ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT