ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ಯಡ್ಕಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ದಕ್ಷಿಣ ಕನ್ನಡ ಡಿ.ಸಿ

ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಗ್ರಾಮಸ್ಥರು
Published 19 ಏಪ್ರಿಲ್ 2024, 7:47 IST
Last Updated 19 ಏಪ್ರಿಲ್ 2024, 7:47 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ಯಡ್ಕ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಹಾಗೂ ಪ್ರಸಿದ್ಧ ಚಾರಣ ತಾಣವಾದ ನೇತ್ರಾವತಿ ಬಿಂದುವಿನ ನಡುವೆ ಸಂಪರ್ಕ ಕಲ್ಪಿಸುವ ಎಳನೀರು– ಗುತ್ಯಡ್ಕ–ಕುರ್ಚಾರು ರಸ್ತೆಯು ಸುಮಾರು 11 ಕಿ.ಮೀ.ಗಳಷ್ಟಿದೆ. ಈ ಗ್ರಾಮಗಳ ಸುಮಾರು  80 ಕುಟುಂಬಗಳು ಸಂಪರ್ಕಕ್ಕೆ ಈ ರಸ್ತೆಯನ್ನೇ ಅವಲಂಬಿಸಿವೆ. ಹದಗೆಟ್ಟಿರುವ ಈ ರಸ್ತೆಯ ದುರಸ್ತಿಗೆ ಆಗ್ರಹಿಸಿ ಹಾಗೂ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಗುತ್ಯಡ್ಕ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯು ಗುರುವಾರದ ಸಂಚಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

‘ಮುಲ್ಲೈ ಮುಗಿಲನ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಯಲ್ಲಿರುವ ಗುತ್ಯಡ್ಕಕ್ಕೆ ಭೇಟಿ ನೀಡಿದ ಮೊದಲ ಜಿಲ್ಲಾಧಿಕಾರಿ’ ಎಂದು ಕುರೆಕಲ್ಲು ಗ್ರಾಮದ ಮಹೇಶ್‌ ತಿಳಿಸಿದರು.

‘ಎಳನೀರು– ಗುತ್ಯಡ್ಕ–ಕುರ್ಚಾರು ರಸ್ತೆಯ ಕಾಂಕ್ರೀಟ್‌ನ ಅಡಿಯ ಮಣ್ಣು ಕೊಚ್ಚಿಹೋಗಿದೆ. ಮುಂಬರುವ ಮಳೆಗಾಲದಲ್ಲಿ ಇಲ್ಲಿ ಭೂಕುಸಿತ ಉಂಟಾಗುವ ಅಪಾಯವಿದೆ’ ಎಂದು ಸತೀಶ್‌ ಅವರು ಜಿಲ್ಲಾಧಿಕಾರಿಗೆ ತಿಳಿಸಿದರು.

‘ಈ ರಸ್ತೆಯಲ್ಲಿ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಸ್ಥಿತಿ ಇದೆ’ ಎಂದು ಮಹೇಶ್‌ ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. 

ರಸ್ತೆಯ ತಳಭಾಗದ ಮಣ್ಣು ಕೊಚ್ಚಿ ಹೋದ ಪ್ರದೇಶಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. 

‘ದಯವಿಟ್ಟು ಮತದಾನ ಬಹಿಷ್ಕರಿಸಬೇಡಿ. ಅಧಿಕಾರಿಗಳು ಪರಿಶೀಲನೆ ನಡೆಸಿ   ಗ್ರಾಮಸ್ಥರ ಬೇಡಿಕೆ ಈಡೇರಿಸಲು ಅಗತ್ಯ ಕ್ರಮವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು’ ಎಂದು ಮಹೇಶ್‌ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಯವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಬೆಳ್ತಂಗಡಿಯ ತಹಸೀಲ್ದಾರ್‌ ಪೃಥ್ವಿ ಸಾನಿಕಂ ಮತ್ತಿತರ ಅಧಿಕಾರಿಗಳ ಜೊತೆ ನಾರಾವಿ ತಪಾಸಣಾ ಠಾಣೆ, ಕಜಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ತಯಾರಿಗಳ ಪರಿಶೀಲನೆ ನಡೆಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT