ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಸಂಸದ ಯಾರೆಂಬ ಕುತೂಹಲಕ್ಕೆ ಇಂದು ಉತ್ತರ

Published 4 ಜೂನ್ 2024, 2:36 IST
Last Updated 4 ಜೂನ್ 2024, 2:36 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮುಂದಿನ ಸಂಸದ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಮಂಗಳವಾರ ಉತ್ತರ ಸಿಗಲಿದೆ.

ಈ ಕ್ಷೇತ್ರದ ಮತದಾನ ಏ. 26ರಂದು ನಡೆದಿತ್ತು. ಮತದಾರ ಪ್ರಭುಗಳ ತೀರ್ಪುಗಳನ್ನು ಹೊತ್ತ ಮತಯಂತ್ರಗಳು ಸುರತ್ಕಲ್‌ನ ಎನ್‌ಐಟಿಕೆ ಪ್ರಾಂಗಣದಲ್ಲಿ ಭದ್ರವಾಗಿದ್ದವು. ಅಂಚೆ ಮತ ಎಣಿಕೆ ಬೆಳಿಗ್ಗೆ 8 ರಿಂದ ಹಾಗೂ ವಿದ್ಯುನ್ಮಾನ ಮತ ಯಂತ್ರಗಳಲ್ಲಿನ (ಇವಿಎಂ) ಮತಗಳ ಎಣಿಕೆ ಬೆಳಿಗ್ಗೆ 8.30ರಿಂದ ಆರಂಭವಾಗಲಿದ್ದು, ಮಧ್ಯಾಹ್ನದ ಒಳಗೆ ಕ್ಷೇತ್ರದ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ  ಸಿಗುವ ನಿರೀಕ್ಷೆ ಇದೆ.

ಮೇ 29ರವರೆಗೆ 8,537 ಅಂಚೆ ಮತಗಳು ಬಂದಿದ್ದವು. ಸೇವಾ ಮತದಾರರಿಂದ  231 ಮತಪತ್ರಗಳು ಸ್ವೀಕೃತವಾಗಿವೆ. ಬೆಳಿಗ್ಗೆ 7ರವರೆಗೂ ಸೇವಾ ಮತದಾರರ ಮತಪತ್ರ ಸ್ವೀಕರಿಸಲಾಗುತ್ತದೆ.

ಪ್ರತ್ಯೇಕ ಕೊಠಡಿಯಲ್ಲಿ 20 ಮೇಜುಗಳಲ್ಲಿ ಅಂಚೆ ಮತ ಎಣಿಕೆ ನಡೆಯುತ್ತದೆ. ಇವಿಎಂಗಳ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೊಠಡಿ ನಿಗದಿಪಡಿಸಿದ್ದು, ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಇದಕ್ಕಾಗಿ 554 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಪಕ್ಷೇತರರು ಸೇರಿದಂತೆ 9 ಅಭ್ಯರ್ಥಿಗಳು ಕಣದಲ್ಲಿದ್ದರೂ ನೇರ ಪೈಪೋಟಿ ಇರುವುದು ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕಾಂಗ್ರೆಸ್‌ನ ಪದ್ಮರಾಜ್‌ ಆರ್‌.  ನಡುವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಹೊಸಬರನ್ನು ಕಣಕ್ಕಿಳಿಸಿದ್ದರಿಂದ ಕ್ಷೇತ್ರದ ರಾಜಕೀಯ ವಾತಾವರಣ ರಂಗೇರಿತ್ತು. 2019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಳಿನ್ ಕುಮಾರ್‌ ಕಟೀಲ್‌ 2.75 ಲಕ್ಷ ಮತಗಲಿಂದ ಗೆದ್ದಿದ್ದರೂ ಈ ಸಲ ಇಬ್ಬರೂ ಯುವ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಮದೇ ಹೇಳಲಾಗುತ್ತಿದೆ.  ಈ ಸಲ 18,17,603 ಮತದಾರರಲ್ಲಿ 14,18,190 ಮಂದಿ (ಶೇ 78.02) ಹಕ್ಕು ಚಲಾಯಿಸಿದ್ದಾರೆ.

ಬಿಜೆಪಿಗೆ ಹಿಂದುತ್ವದ ಮತಬ್ಯಾಂಕ್‌ ಕೈ ಹಿಡಿಯುತ್ತದೆಯೋ, ಬಿಲ್ಲವರ ಕಡೆಗಣನೆಯ ಅಂಶ ಕೈ ಕೊಡುತ್ತದೆಯೋ, ರಾಜ್ಯ ಸರ್ಕಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿಯಂತಹ ಗ್ಯಾರಂಟಿ  ಯೋಜನೆಗಳಿಗೆ ಕ್ಷೇತ್ರದ ಮತದಾರರು ಮಾರು ಹೋಗಿದ್ದಾರೆಯೇ, ಬಿಲ್ಲವರ ಮತಗಳ ಧ್ರುವೀಕರಣ ಆಗಿದೆಯೇ ಎಂಬೆಲ್ಲ ತರ್ಕಗಳಿಗೆ ಮತದಾರರು ಉತ್ತರ ಏನಾಗಿತ್ತು ಎಂಬುದು ಮತ ಎಣಿಕೆ ಬಳಿಕವಷ್ಟೇ ತಿಳಿಯಲಿದೆ.

ಸ್ವಾತಂತ್ರ್ಯ ಬಂದ ಬಳಿಕ ನಡೆದಿರುವ 17 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಒಂಬತ್ತು ಸಲ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದರು. ಎಂಟು ಸಲ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. 1991ರ ಬಳಿಕ ಇಲ್ಲಿ ಬಿಜೆಪಿ ಒಮ್ಮೆಯೂ ಸೋತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT