ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ₹ 5 ಲಕ್ಷ ಪರಿಹಾರ ಪಾವತಿಸಿ: ತನಿಖಾಧಿಕಾರಿಗೆ ಪೋಕ್ಸೊ ನ್ಯಾಯಾಲಯ ಸೂಚನೆ

ತಪ್ಪೆಸಗದವರು ಜೈಲು ಸೇರುವಂತೆ ಮಾಡಿದ್ದಕ್ಕೆ ಪೋಕ್ಸೊ ನ್ಯಾಯಾಲಯ ಆಕ್ಷೇಪ
Published 22 ಜೂನ್ 2023, 7:03 IST
Last Updated 22 ಜೂನ್ 2023, 7:03 IST
ಅಕ್ಷರ ಗಾತ್ರ

ಮಂಗಳೂರು: ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ಕಾರಣಕ್ಕೆ ಮಹಿಳಾ ಠಾಣೆಯ ತನಿಖಾಧಿಕಾರಿಯು ₹ 5 ಲಕ್ಷ ಪರಿಹಾರವನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಪರಿಗಣಿಸಲಾಗಿದ್ದ ಸಂತ್ರಸ್ತ ದಿನಗೂಲಿ ಕಾರ್ಮಿಕರಿಬ್ಬರಿಗೆ ಪಾವತಿಸಬೇಕು ಎಂದು ಪೋಕ್ಸೊ ನ್ಯಾಯಾಲಯ ಆದೇಶ ಮಾಡಿದೆ.

ಬಾಲಕಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ ಎ.ಸಿ.ಲೋಕೇಶ್‌ ಮತ್ತು ಅವರ ತಂಡವು ಎಸಗಿದ ಲೋಪದಿಂದಾಗಿ ಇಬ್ಬರು ವ್ಯಕ್ತಿಗಳು ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ತಪ್ಪಿಗಾಗಿ ತನಿಖಾಧಿಕಾರಿ ಎ.ಸಿ.ಲೋಕೇಶ್‌ ಮತ್ತು ಅವರ ತಂಡವು ₹ 5 ಲಕ್ಷ ದಂಡವನ್ನು ಪಾವತಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮತ್ತು ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಆದೇಶ ಮಾಡಿದ್ದಾರೆ. 

ಬಲವಂತವಾಗಿ ಭ್ರೂಣವನ್ನು ಹತ್ಯೆ ಮಾಡಿದ್ದ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಬಾಲಕಿ ನೀಡಿದ್ದ ಹೇಳಿಕೆ ಆಧಾರದಲ್ಲಿ  ಮಹಿಳಾ ಠಾಣೆಯಲ್ಲಿ 2021ರ ಫೆಬ್ರುವರಿಯಲ್ಲಿ ಕಾರ್ಮಿಕನೊಬ್ಬನ ಎಂಬಾತನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನ್ನ ಹಿಂದಿನ ಹೇಳಿಕೆಯನ್ನು ಹಿಂಪಡೆದಿದ್ದ ಸಂತ್ರಸ್ತ ಬಾಲಕಿ  ತನಗೆ ಇನ್ನೊಬ್ಬ ವ್ಯಕ್ತಿ  ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು. 2022ರ ಡಿಸೆಂಬರ್‌ನಲ್ಲಿ ಮಹಿಳಾ ಠಾಣೆಯ ಎಸ್‌ಐ ಶ್ರೀಕಲಾ ಅವರ ಬಳಿ ಹೇಳಿಕೆ ನೀಡಿದ್ದ ಸಂತ್ರಸ್ತೆ ಬಾಲಕಿ, ‘ಸ್ವತಃ ತಂದೆ ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ‌ಆರೋಪ ಮಾಡಿದ್ದಳು. ವಂಶವಾಹಿಗಳ ತಪಾಸಣಾ ವರದಿ ಕೈಸೇರುವ ಮುನ್ನವೇ ತನಿಖಾಧಿಕಾರಿ  ಲೋಕೇಶ್‌ ಅವರು ಆರೋಪ ಪಟ್ಟಿಯಲ್ಲಿ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಿರುವುದು ತನಿಖೆಯ ಗಂಭೀರ ಲೋಪ ಎಂದು ನ್ಯಾಯಾಧೀಶರು ಪರಿಗಣಿಸಿದ್ದಾರೆ. 

ಸಂತ್ರಸ್ತೆ ಮೊದಲು ಉಲ್ಲೇಖಿಸಿದ್ದ ಆರೋಪಿಯ ಹೆಸರನ್ನು ತನಿಖಾಧಿಕಾರಿ ಲೋಕೇಶ್ ಅವರು ಜಾಣ್ಮೆಯಿಂದ ಕಡೆಗಣಿಸಿದ್ದಾರೆ. ಆರೋಪಿಯ ರಕ್ತದ ಮಾದರಿಯನ್ನೂ ಸಂಗ್ರಹಿಸಿಲ್ಲ. ತನಿಖಾಧಿಕಾರಿಯು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರುವುದು ಇದರಿಂದ ಗೊತ್ತಾಗುತ್ತದೆ. ಪ್ರಕರಣದ ವಿಚಾರಣೆ ಮುಗಿಯುವ ಕೊನೇಯ ಹಂತದಲ್ಲಿ ಆರೊಪಿಗಳ ವಂಶವಾಹಿಯ ತಪಾಸಣಾ ವರದಿ ನ್ಯಾಯಾಲವನ್ನು ತಲುಪಿದೆ.

ವಂಶವಾಹಿ ತಜ್ಞರ ಪ್ರಕಾರ ಈ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರು ಆರೋಪಿಗಳೂ (ಸಂತ್ರಸ್ತೆಯ ತಂದೆಯೂ ಸೇರಿ) ಭ್ರೂಣದ ಜೈವಿಕ ತಂದೆ ಅಲ್ಲ. 

‘ಸಂತ್ರಸ್ತೆಯ ತಿರುಚಿದ ಹೇಳಿಕೆ ಆಧಾರದಲ್ಲಿ ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನೈಜ ಹಾಗೂ ಸಂಭಾವ್ಯ  ತಪ್ಪಿತಸ್ಥರನ್ನು ರಕ್ಷಿಸುವ ಸಲುವಾಗಿ ಅಮಾಯಕ ವ್ಯಕ್ತಿಗಳ ಮೇಲೆ ವೃಥಾ ಉಂಟಾಗುವ ದುಷ್ಪರಿಣಾಮಕ್ಕೆ ತನಿಖಾಧಿಕಾರಿ ಮತ್ತು ಅವರ ತಂಡವನ್ನೇ ಹೊಣೆ ಮಾಡಬೇಕಾಗುತ್ತದೆ’ ಎಂದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

‘ತನಿಖಾಧಿಕಾರಿ ಮತ್ತು ಅವರ ತಂಡವು ಸಂತ್ರಸ್ತೆಯ ತಂದೆಗೆ ₹ 4 ಲಕ್ಷ ಹಾಗೂ ಆರೋಪಿ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಗೆ ₹ 1 ಲಕ್ಷವನ್ನು 40 ದಿನಗಳ ಒಳಗೆ ಪಾವತಿಸಬೇಕು’ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ‘ತನಿಖೆಯ ಲೋಪಗಳಿಗೆ, ದಾಖಲೆಗಳನ್ನು ತಿರುಚಿರುವುದಕ್ಕೆ, ಹುದ್ದೆ ಮತ್ತು ಅಧಿಕಾರ ದುರ್ಬಳಕೆಗೆ ತನಿಖಾಧಿಕಾರಿ ಮತ್ತು ಅವರ ತಂಡವೇ ಹೊಣೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಧೀಶರು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಆದೇಶದ ಪ್ರತಿಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಮಂಗಳೂರು ಪೊಲೀಸ್‌ ಕಮಿನಷರ್‌ ಅವರಿಗೆ ಕಳುಹಿಸುವಂತೆ ನಿರ್ದೇಶನ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT