ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ವಾರಾಂತ್ಯ ಕರ್ಫ್ಯೂ

ತಲಪಾಡಿಯಲ್ಲಿ ತೀವ್ರಗೊಂಡ ತಪಾಸಣೆ, ಸ್ಥಳದಲ್ಲೇ ಕೋವಿಡ್‌ ಪರೀಕ್ಷೆ
Last Updated 3 ಜುಲೈ 2021, 2:13 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಿಂದ ಶನಿವಾರ ದಿಂದ ಎರಡು ದಿನ ವಾರಂತ್ಯದ ಕರ್ಫ್ಯೂ ಜಾರಿಯಾಗಲಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮೀನು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಧ್ಯಾಹ್ನದ ನಂತರ ಲಾಕ್‌ಡೌನ್ ಮುಂದುವರಿಯುತ್ತದೆ. ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಉಳಿದ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ.

ಲಾಕ್‌ಡೌನ್‌ ಸಡಿಲಿಕೆ ಮಾಡಿ, ಶುಕ್ರವಾರ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಅಂಗಡಿ ಮುಂಗಟ್ಟು ಹಾಗೂ ಇತರ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರಿಂದ ಪೇಟೆಯಲ್ಲಿ ಜನಸಂಚಾರ ಜೋರಾಗಿತ್ತು. ಬಹುತೇಕ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣಿ ಇತ್ತು.

ಕೇರಳದಿಂದ ಬರುವ ವಾಹನ ತಪಾಸಣೆ

ಉಳ್ಳಾಲ ವರದಿ: ಡೆಲ್ಟಾ ಪ್ಲಸ್ ಆತಂಕದ ಕಾರಣ ಕರ್ನಾಟಕ- ಕೇರಳಯ ತಲಪಾಡಿ ಗಡಿಯಲ್ಲಿ ಪೊಲೀಸರು ತಪಾಸಣೆಯನ್ನು ಶುಕ್ರವಾರದಿಂದ ತೀವ್ರಗೊಳಿಸಿದ್ದಾರೆ. ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಿದರು.

ಈ ಕಾರಣದಿಂದಾಗಿ ಶುಕ್ರವಾರ ತಲಪಾಡಿ ಗಡಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತ್ತು. 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಗಡಿಯಲ್ಲೇ ರ‍್ಯಾಂಡಂ ಪರೀಕ್ಷೆ ನಡೆಸಲಾಯಿತು.

ನಿತ್ಯ ಉದ್ಯೋಗ, ವ್ಯವಹಾರಕ್ಕೆ ಬರುವವರಿಗೆ ಶುಕ್ರವಾರದಿಂದ 15 ದಿನಗಳಿಗೊಮ್ಮೆ ವರದಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಬೆಳಿಗ್ಗೆ ಬೈಕ್ ಮತ್ತು ಕಾರುಗಳನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದರು. ಟೆಸ್ಟ್ ಮಾಡಿಸಿದ ಬಳಿಕವೇ ಎಲ್ಲರನ್ನು ಮಂಗಳೂರಿನತ್ತ ಹೋಗಲು ಅವಕಾಶ ಕಲ್ಪಿಸಲಾಯಿತು.

ಬಸ್‌ಗಳಿಗೆ ಮುಕ್ತ ಪ್ರವೇಶ: ಗಡಿಯಲ್ಲಿ ನಿಯಮ ಕಟ್ಟುನಿಟ್ಟಾಗಿದ್ದರೂ ಬಸ್ಸುಗಳಿಗೆ ತಪಾಸಣೆ ನಡೆಸಲಾಗಿಲ್ಲ. ಕೇರಳದಿಂದ ಬರುವ ಬಸ್ಸುಗಳು ಗಡಿಯಲ್ಲಿ ಕೇರಳದ ಪ್ರಯಾಣಿಕರನ್ನು ಇಳಿಸಿ ವಾಪಸಾಗುತ್ತಿದೆ. ಕೇರಳದಿಂದ ಬಸ್‌ ಇಳಿದ ಪ್ರಯಾಣಿಕರನ್ನು ಮಂಗಳೂರಿನ ಖಾಸಗಿ ಬಸ್‌ಗಳು ಮತ್ತು ಕರ್ನಾಟಕ ಸಾರಿಗೆ ಬಸ್‌ಗಳು ಹತ್ತಿಸಿಕೊಂಡು ಮಂಗಳೂರಿಗೆ ಬರುತ್ತಿದೆ. ಬಸ್‌ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದರೂ ತಪಾಸಣೆ ನಡೆಸಲಾಗುತ್ತಿಲ್ಲ. ನಿರ್ವಾಹಕರು ಕೂಡ ಪ್ರಯಾಣಿಕರಲ್ಲಿ ಯಾವುದೇ ವರದಿಯನ್ನು ಕೇಳುತ್ತಿಲ್ಲ ಅನ್ನುವ ಆರೋಪಗಳು ಜನರಿಂದ ಕೇಳಿಬಂದಿವೆ.

ಮತ್ತೆ 4 ಕಪ್ಪು ಶಿಲೀಂಧ್ರ ಪ್ರಕರಣ ದಾಖಲು

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ನಾಲ್ಕು ಕಪ್ಪು ಶಿಲೀಂಧ್ರ ಪ್ರಕರಣಗಳು ದಾಖಲಾಗಿವೆ. ಇಬ್ಬರು ಉತ್ತರ ಕನ್ನಡ, ತಲಾ ಒಬ್ಬರು ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 29 ಸಕ್ರಿಯ ಪ್ರಕರಣಗಳು ಇವೆ. ಅವುಗಳಲ್ಲಿ ಏಳು ದಕ್ಷಿಣ ಕನ್ನಡ ಜಿಲ್ಲೆಯವಾಗಿದ್ದರೆ, ಉಳಿದ 22 ಹೊರ ಜಿಲ್ಲೆಯ ಪ್ರಕರಣಗಳಾಗಿವೆ.

ಕೋವಿಡ್‌: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 302 ಜನರಿಗೆ ಕೋವಿಡ್ ದೃಢಪಟ್ಟಿದೆ. 721 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟಿರುವ 13 ಜನರಲ್ಲಿ ಕೋವಿಡ್ ಇರುವುದು ಖಚಿತವಾಗಿದೆ.

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 91 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 121 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 1,031 ಸಕ್ರಿಯ ಪ್ರಕರಣಗಳು ಇವೆ.

ಕಾಸರಗೋಡು: ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 708 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 376 ಜನರು ಗುಣಮುಖರಾಗಿದ್ದಾರೆ. 5,901 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT