ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿ ಜನಸ್ಪಂದನ ಕಾರ್ಯಕ್ರಮ: ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚನೆ

ಕೆಎಸ್ಸಾರ್ಟಿಸಿ ಜನಸ್ಪಂದನಾ ಕಾರ್ಯಕ್ರಮ
Published 2 ಜುಲೈ 2024, 4:50 IST
Last Updated 2 ಜುಲೈ 2024, 4:50 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕೆಎಸ್‌ಆರ್‌ಟಿಸಿ ಜನಸ್ಪಂದನ, ಸಾರ್ವಜನಿಕ ಅಹವಾಲು ಸ್ವೀಕಾರ, ಮಾಹಿತಿ ಕಾರ್ಯಗಾರ ಬೆಳ್ತಂಗಡಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸೋಮವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಿ ಬೆಳಿಗ್ಗೆ 8ರಿಂದ 9.30 ರವರೆಗೆ ಅಗತ್ಯ ಸ್ಥಳಗಳಲ್ಲಿ ಬಸ್‌ ಸಂಚಾರ ಹೆಚ್ಚಿಸಬೇಕು. ಬಂದಿರುವ ಅಹವಾಲುಗಳ ಕುರಿತು ಒಂದು ವಾರದೊಳಗೆ ವರದಿ ನೀಡಿ, ಉಜಿರೆಯ ಟಿ.ಸಿ.ಪಾಯಿಂಟ್‌ನ ಸಮಯ ವಿಸ್ತರಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ‘ಜನಸ್ಪಂದನೆ ಕಾರ್ಯಕ್ರಮದ ಮೂಲಕ ತಾಲ್ಲೂಕಿನ ಸಮಸ್ಯೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು- ಧರ್ಮಸ್ಥಳ ರೂಟ್‌ನಲ್ಲಿ ಎಲೆಕ್ಟ್ರಿಕ್ ಮತ್ತು ರಾಜಹಂಸ ಬಸ್ ಓಡಾಟ ನಡೆಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು.

ಪುತ್ತೂರು ವಿಭಾಗಾಧಿಕಾರಿ ಅಮಲಿಂಗಯ್ಯ ಪಿ.ಹಾಸು ಪೂಜಾರಿ ಮಾತನಾಡಿ, ‘ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು’ ಎಂದರು.

ಶಿಶಿಲ, ಪಟ್ರಮೆ, ದೇವಗಿರಿ, ವೇಣೂರು, ಕಲ್ಮಂಜ ಕಡೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ವ್ಯಕ್ತವಾಯಿತು. ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸಬೇಕು. ಅರಸಿನಮಕ್ಕಿಗೆ ಬೆಳಿಗ್ಗೆ 10 ಗಂಟೆ ಬಳಿಕ ಬಸ್ ಬೇಕು. ಬಂದಾರು- ಉಪ್ಪಿನಂಗಡಿ ರೂಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಬೇಕು. ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಶುಚಿತ್ವ ಅಗತ್ಯವಾಗಿದೆ. ಬಸ್ ನಿಲ್ದಾಣಗಳ ಶೌಚಾಲಯ ನಿರ್ವಹಣೆ ಅಗತ್ಯ, ಹೊಗೆಯುಗುಳುವ ಬಸ್‌ಗಳನ್ನು ಸ್ಥಗಿತಗೊಳಿಸಬೇಕು. ಸೌತಡ್ಕಕ್ಕೆ ಗಂಟೆಗೊಂದರಂತೆ ಬಸ್ ಓಡಾಟ ನಡೆಸಬೇಕು. ಚಾಲನೆ ವೇಳೆ ಚಾಲಕರು ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು ಎಂದು ಯದುಪತಿ ಗೌಡ, ಸುಧೀರ್ ಕುಮಾರ್, ಶ್ರೀನಿವಾಸರಾವ್, ಮೀನಾಕ್ಷಿ, ಭಾರತೀ ಶೆಟ್ಟಿ, ರತ್ನಾಕರ ಬುಣ್ಣನ್, ಆಶಾ ಸಲ್ದಾನ, ಧರಿತ್ರಿ ಭಿಡೆ, ವಸಂತಿ, ಸಂತೋಷ್ ಮನವಿ ಮಾಡಿದರು.

ಮಲವಂತಿಗೆ ಗ್ರಾಮದ ದಿಡುಪೆಯ ಕಜಕ್ಕೆಯಲ್ಲಿ ಶಾಲೆಯಿದ್ದು, ಸುಮಾರು 150ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅಲ್ಲಿಯವರೆಗೆ ದಿಡುಪೆ ಬಸ್‌ ಸಂಚಾರವನ್ನು ವಿಸ್ತರಿಸಬೇಕು. ಇಲ್ಲಿಗೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಒಂದೂವರೆ ಕಿ.ಮೀ. ನಡೆಯಬೇಕಾಗಿದೆ ಎಂದು ದಿಡುಪೆಯ ತೀಕ್ಷಿತ್ ಮನವಿ ನೀಡಿದರು.

ಸೋಮಂತಡ್ಕದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ನಿಲುಗಡೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ರಾಘವೇಂದ್ರ ಪಟವರ್ಧನ್ ಸಭೆಯ ಗಮನಕ್ಕೆ ತಂದರು.

ಪುತ್ತೂರು ಡಿಟಿಒ ಮುರಳೀಧರ ಆಚಾರ್ಯ, ಮಂಗಳೂರು ಡಿಟಿಒ ಕಮಲ್ ಕುಮಾರ್ ಭಾಗವಹಿಸಿದ್ದರು.

ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT