ಗುರುವಾರ , ಅಕ್ಟೋಬರ್ 21, 2021
28 °C
ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸಚಿವ ಎಸ್. ಅಂಗಾರ

ದಸರಾ: ಕೋವಿಡ್ ನಿಯಮ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ಕಾರಣಕ್ಕೆ ಮುಂಬರುವ ನವರಾತ್ರಿ ಉತ್ಸವವನ್ನು ಕಳೆದ ವರ್ಷದ ಮಾರ್ಗಸೂಚಿಗಳಂತೆಯೇ ಈ ಬಾರಿಯೂ ಆಚರಿಸುವುದು ಸೂಕ್ತ ಎಂದು ಮೀನುಗಾರಿಕೆ ಸಚಿವ ಅಂಗಾರ ಎಸ್. ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನವರಾತ್ರಿ ಉತ್ಸವ ಆಚರಣೆ ಸಂಬಂಧ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಮಂಗಳಾದೇವಿ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ದಸರಾ ಆಚರಣೆ ಕುರಿತಂತೆ ಜಿಲ್ಲಾಡಳಿತ ಕಳೆದ ವರ್ಷ ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ದೇವಸ್ಥಾನಗಳ ಆಡಳಿತ ಮಂಡಳಿಗಳು, ಭಕ್ತರು ಸಹಕರಿಸಿದ್ದರು. ಈ ಬಾರಿ ಕೋವಿಡ್ ಮೂರನೇ ಅಲೆ ಎದುರಾದಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಬೇಕಾದ ಸಂದರ್ಭವನ್ನು ತಳ್ಳಿಹಾಕುವಂತಿಲ್ಲ. ಸಮಸ್ಯೆ ಬಿಗಡಾಯಿಸದಂತೆ ನಮಗೆ ನಾವೇ ತಡೆ ಹಾಕಿಕೊಳ್ಳಬೇಕಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ‘ದಸರಾ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲಿಸಿ, ದೇವಸ್ಥಾನದಲ್ಲಿ ದರ್ಶನ ಹಾಗೂ ಸೇವೆಯನ್ನು ನಿರ್ವಹಿಸಬೇಕು. ಮಾಸ್ಕ್ ಧಾರಣೆ ಕಡ್ಡಾಯ ಹಾಗೂ ವೈಯಕ್ತಿಕ ಅಂತರ ಪಾಲನೆ ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.

ಜಿಲ್ಲೆಯಾದ್ಯಂತ ಅ.2ರಿಂದ ಸ್ವಚ್ಛ್ ಭಾರತ್ ಅಭಿಯಾನ ಹಮ್ಮಿಕೊಳ್ಳುತ್ತಿರುವ ಕಾರಣ ಸ್ವಯಂ ಸೇವಕರು ಹಾಗೂ ಭಕ್ತರ ಸಹಕಾರದಲ್ಲಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅದರ ವಿಲೇವಾರಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ಗಿರಿಪ್ರಸಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.