ಬುಧವಾರ, ನವೆಂಬರ್ 13, 2019
22 °C
ದೈವ ಪಾತ್ರಧಾರಿ, ಪಾಡ್ದನಗಳ ಪ್ರವೀಣರಾದ ದಯಾನಂದ ಕತ್ತಲ್‌ಸಾರ್

ಅರ್ಜಿ ಹಾಕದೇ ಬಂದ ಅವಕಾಶ:ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮನದ ಮಾತು

Published:
Updated:
Prajavani

ಮಂಗಳೂರು: ನಂಬಿ ದೈವ, ಇಂಬು ಕೊರಿ ಜನೊ, ತುಳುತ್ತ ಗುರ್ಕಾಮೆ. ಯಾನ್ ನೆಪ ಮಾತ್ರೋ.... (ನಂಬಿದ ದೈವ, ಆಶೀರ್ವಾದ ನೀಡಿದ ಜನತೆ, ತುಳು ನೆಲದ ಸಾರಥ್ಯ. ನಾನು ನೆಪ ಮಾತ್ರ...) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡ ಸಂಭ್ರಮವನ್ನು ದಯಾನಂದ ಕತ್ತಲ್‌ಸಾರ್ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ಹೀಗೆ. 

ಬಜ್ಪೆಯ ಕತ್ತಲ್‌ಸಾರ್‌ನ ಗುರುವಪ್ಪ ಬಂಗೇರ ಹಾಗೂ ಭವಾನಿ ಪುತ್ರರಾಗಿ 1975ರ ಏಪ್ರಿಲ್ 20ರಂದು ಜನನ. ಪತ್ನಿ ಶೈಲಜಾ ಹಾಗೂ ಪುತ್ರ ತೀರ್ಥ ಅವರ ಕುಟುಂಬ.

‘ಪಿಯುಸಿ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಕೋರ್ಸ್ ಮಾಡಿ, ಸದ್ಯ ಕಂಕನಾಡಿ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಕಾಡೆಮಿ ಅಧ್ಯಕ್ಷತೆಯು ಅರ್ಜಿ ಹಾಕದೇ ಬಂದ ಅವಕಾಶ. ಇದನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂಬುದು ನನ್ನ ಉದ್ದೇಶ’ 

‘ನನಗೆ ಸಂಭ್ರಮ ಹಾಗೂ ಭಯ ಎರಡೂ ಆಗುತ್ತಿದೆ. ಅಕಾಡೆಮಿ ಅಧ್ಯಕ್ಷತೆಯು ಒಲಿದು ಬಂದ ಸಂಭ್ರಮ ಒಂದೆಡೆಯಾದರೆ,   ಸಾಕಷ್ಟು ಕೊಡುಗೆ ನೀಡಿದ ಘಟಾನುಘಟಿ ತುಳು ಸಾಹಿತಿಗಳ ಮಧ್ಯೆ ನನ್ನಂತಹ ಸಾಮಾನ್ಯ ವ್ಯಕ್ತಿಯು ಅಧ್ಯಕ್ಷತೆಯನ್ನು ನಿಭಾಯಿಸಿಕೊಂಡು ಹೋಗಬೇಕಾಗಿದೆ. ಆದರೆ, ಎಲ್ಲರೂ ನನಗೆ ಸಹಕಾರ ನೀಡುತ್ತಾರೆ. ಅವರೆಲ್ಲರ ಸಹಕಾರದಿಂದ ನನ್ನ ಕಾರ್ಯವು ಯಶಸ್ವಿಯಾಗುತ್ತದೆ ಎಂಬ ಅಚಲ ನಂಬಿಕೆ ಇದೆ. ಏಕೆಂದರೆ, ಇದು ತುಳುವಿನ ಕೆಲಸ’  

‘ನಾನು ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯಲ್ಲೂ ತಳವರ್ಗದಿಂದ ಬಂದವನು. ನನ್ನನ್ನು ಗುರುತಿಸಿ ಬೆಳೆಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ತುಳುವಿನ ಕೆಲಸದಲ್ಲಿ ಧರ್ಮ, ಜಾತಿ, ಬಡವ–ಶ್ರೀಮಂತ, ಪಕ್ಷಗಳ ಭೇದವಿಲ್ಲ. ನಾವೆಲ್ಲರೂ ಒಂದೇ. ಒಂದೇ ಮಣ್ಣಿನ ಕೆಲಸವನ್ನು ಮಾಡುತ್ತೇವೆ. ನೆಲದ ಕೆಲಸವೆಂದರೆ, ಅದು ಭಾರತ ಮಾತೆಯ ಕೆಲಸವನ್ನು ಮಾಡಿದಂತೆ’ 

‘ನಿರಂಜನ ಸ್ವಾಮೀಜಿ, ಸುಧೀರ್ ಪ್ರಸಾದ್‌ ಶೆಟ್ಟಿ, ಡಾ.ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಲವರು ನನ್ನನ್ನು ಬೆಳೆಸಿದರು. ಸಂಸ್ಕಾರ ಭಾರತಿಯ ರಾಜ್ಯ ಪ್ರಭಾರಿಯಾಗಿ ಕೆಲಸ ಮಾಡಿದ್ದೇನೆ. ಲೋಕ ಕಲಾ ವಿಭಾಗದ ಪ್ರಮುಖ, ತುಳು ಅಕಾಡೆಮಿ ಸದಸ್ಯ ಸೇರಿದಂತೆ ಹಲವಾರು ಕಡೆಗಳಲ್ಲಿ ಕೆಲಸ ಮಾಡಿದ್ದೇನೆ’ ಅಂತಾರೆ ಇವರು.

ಕನಸು: ‘ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಸೇರ್ಪಡೆ ಮಾಡುವುದು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳುವಿನ ಸೇರ್ಪಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಟ್ಟಡವನ್ನು ಪೂರ್ಣಗೊಳಿಸುವುದು ಹಾಗೂ ನಿರಂತರ ಕಾರ್ಯಕ್ರಮ ನಡೆಯುವಂತೆ ಪ್ರಯತ್ನಿಸುವುದು ನನ್ನ ಆಶಯವಾಗಿದೆ’ ಎಂದರು.

ಸಲಹಾ ಸಮಿತಿ: ತುಳುವಿನ ಕೆಲಸಗಳ ಅಗಾಧತೆಗೆ ಹೋಲಿಸಿದರೆ, ನಾನು ಬಹಳಷ್ಟು ಚಿಕ್ಕವನು. ಹೀಗಾಗಿ, ಅಕಾಡೆಮಿಯ ಮೊದಲ ಅಧ್ಯಕ್ಷ ಪ್ರೊ.ಬಿ.ಎ.ವಿವೇಕ ರೈ ಅವರಿಂದ ಎ.ಸಿ. ಭಂಡಾರಿ ತನಕದ ಅವಧಿಯ ಎಲ್ಲ ಅಧ್ಯಕ್ಷರು, ಸದಸ್ಯರು, ರಿಜಿಸ್ಟ್ರಾರ್, ತುಳುವಿನ ಕೆಲಸ ಮಾಡುವವರನ್ನು ಒಟ್ಟುಗೂಡಿಸಿಕೊಂಡು ಒಂದು ಸಲಹಾ ಸಮಿತಿಯನ್ನು ರಚಿಸುತ್ತೇನೆ. ಆ ಸಮಿತಿಯ ಮಾರ್ಗದರ್ಶನದಲ್ಲಿ ಅಕಾಡೆಮಿ ಕೆಲಸ–ಕಾರ್ಯಗಳನ್ನು ಮಾಡಲಿದೆ. ಆಗ, ಉತ್ತಮವಾಗಿ ಕೆಲಸ ಮಾಡಲು ಸಾಧ್ಯ’ ಎಂದಿದ್ದಾರೆ ಕತ್ತಲ್‌ಸಾರ್.

ಪ್ರತಿಕ್ರಿಯಿಸಿ (+)