ಸೋಮವಾರ, ಆಗಸ್ಟ್ 2, 2021
26 °C
ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ

ಆಮ್ಲಜನಕಯುಕ್ತ ಹಾಸಿಗೆ ಸಂಖ್ಯೆ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳ ಸಂಖ್ಯೆಯನ್ನು ಕೂಡಲೇ ಹೆಚ್ಚಿಸಬೇಕು ಎಂದು ಉಪ ಮುಖ್ಯಮಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಬೆಂಗಳೂರಿನ ವಿಕಾಸಸೌಧದದಿಂದ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಶುಕ್ರವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ವೆನ್ಲಾಕ್ ಹಾಗೂ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳನ್ನು ಕೂಡಲೇ ಹೆಚ್ವಿಸಬೇಕು. ದಿನೇದಿನೇ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇರುವ ಅಂಶವನ್ನು ಜಿಲ್ಲಾಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು. ‘ಸದ್ಯಕ್ಕೆ ಇಷ್ಟು ಪ್ರಮಾಣದ ಹಾಸಿಗೆಗಳು ಸಾಕಾಗುವುದಿಲ್ಲ. ಈ ಪ್ರಮಾಣವನ್ನು 450ಕ್ಕೆ ಹೆಚ್ಚಿಸಿ. ಕೂಡಲೇ ಈ ಕುರಿತ ಪ್ರಸ್ತಾವನೆಯನ್ನು ಆರೋಗ್ಯ ಆಯುಕ್ತರಿಗೆ ಕಳುಹಿಸಿ. ನಾನೂ ಅವರ ಜತೆ ಮಾತನಾಡಿ, ಆದಷ್ಟು ಬೇಗ ಮಂಜೂರಾತಿ ಕೊಡಿಸುತ್ತೇನೆ. ಇದರ ಜತೆಗೆ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಇಂತಹ ಬೆಡ್ಡಿನ ವ್ಯವಸ್ಥೆ ಆಗಲೇಬೇಕು‘ ಎಂದು ಡಾ.ಅಶ್ವತ್ಥನಾರಾಯಣ ಸೂಚಿಸಿದರು.

‘ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿವೆ. ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ಕಾಲೇಜು, ಸರ್ಕಾರಿ-ಖಾಸಗಿ ಆಸ್ಪತ್ರೆ ಸೇರಿ ಎಲ್ಲೆಡೆ ಕನಿಷ್ಠ 8 ಸಾವಿರಕ್ಕೂ ಹೆಚ್ಚು ಹಾಸಿಗೆಗಳಿವೆ. ಕೂಡಲೇ ಇವರಿಂದ ಅವುಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ತಕ್ಷಣವೇ ಆಯಾ ಆಡಳಿತ ಮಂಡಳಿ ಜತೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸರ್ಕಾರಿ, ಖಾಸಗಿ ಯಾವುದೇ ಆಸ್ಪತ್ರೆ ಇರಲಿ, ಸರ್ಕಾರದಿಂದ ಶಿಫಾರಸಾದ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಿಗೆ ಆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಯಾರೂ ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ನೇರವಾಗಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೇ ಕಳಿಸಬೇಕು. ವಿನಾಕಾರಣ ರೋಗಿಯನ್ನು ಸುತ್ತಾಡಿಸಬಾರದು. ಆಸ್ಪತ್ರೆಗೆ ಬರುವ ರೋಗಿಗೆ ಕೂಡಲೇ ಬೆಡ್ ಹಂಚಿಕೆಯಾಗಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂಬ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದರು.

25 ಸಾವಿರ ಆ್ಯಂಟಿಜನ್‌ ಕಿಟ್‌, 15 ಆಂಬುಲೆನ್ಸ್‌

ಮಂಗಳೂರು: ಉಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಲು 25 ಸಾವಿರ ರ‍್ಯಾಪಿಡ್‌ ಆ್ಯಂಟಿಜನ್‌ ಕಿಟ್‌ಗಳು ಹಾಗೂ 15 ಆಂಬುಲೆನ್ಸ್‌ಗಳನ್ನು ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರು ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ 59 ಆಂಬುಲೆನ್ಸ್‌ಗಳಿದ್ದು, ಮತ್ತಷ್ಟು ಖರೀದಿಸಿ, ಹೆಚ್ಚುವರಿಯಾಗಿ ಚಾಲಕರನ್ನು ನೇಮಿಸಿಕೊಳ್ಳಿ. ಊಟ, ಔಷಧಿ, ಪಿಪಿಎ ಕಿಟ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಹೋಂ ಕೇರ್ ಬಗ್ಗೆ ಮತ್ತಷ್ಟು ಅರಿವು ಮೂಡಿಸಿ ಎಂದು ಸೂಚಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ 430 ಜನರು ಹೋಮ್ ಕೇರ್‌ಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರು ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವ ಒಲವು ತೋರುತ್ತಿದ್ದಾರೆ ಎಂದು ಸಿಂಧೂ ಬಿ.ರೂಪೇಶ್‌ ಮಾಹಿತಿ ನೀಡಿದರು.

ಇದಕ್ಕೂ ಮೊದಲು ನಡೆದ ವಿಡಿಯೊ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್‌, ಹರೀಶ್ ಪೂಂಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ, ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು