ಮಂಗಳವಾರ, ಜೂನ್ 15, 2021
21 °C
ಆರೋಗ್ಯ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿದ ಜಿಲ್ಲಾಡಳಿತ

ಪ್ಲಾಸ್ಮಾ ಸಂಗ್ರಹ, ಬ್ಯಾಂಕ್‌ ಆರಂಭಕ್ಕೆ ಒತ್ತಡ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌–19 ನಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ಕಾಯಿಲೆಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೋವಿಡ್–19 ಸೋಂಕು ದೃಢವಾಗುತ್ತಿದ್ದು, ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ. ಇಂಥವರ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಅಗತ್ಯವಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿಯೇ ಪ್ಲಾಸ್ಮಾ ಸಂಗ್ರಹ ಹಾಗೂ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಬೇಕು ಎನ್ನುವ ಒತ್ತಾಯ ಬಲವಾಗುತ್ತಿದೆ.

ಇದೀಗ ಜಿಲ್ಲಾಡಳಿತವೂ ಜಿಲ್ಲೆಯಲ್ಲಿ ಪ್ಲಾಸ್ಮಾ ಬ್ಯಾಂಕ್‌ ಹಾಗೂ ಪ್ಲಾಸ್ಮಾ ಸಂಗ್ರಹ ವ್ಯವಸ್ಥೆಯ ಸಾಧ್ಯತೆಗಳ ಬಗ್ಗೆ ಗಮನ ಹರಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹಾಗೂ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಅವರಿಗೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲೆಯಲ್ಲಿ ಪ್ಲಾಸ್ಮಾ ಥೆರಪಿಗೆ ಅಗತ್ಯ ಸೌಕರ್ಯಗಳು ಲಭ್ಯವಾಗಿವೆಯೇ ಎಂಬುದರ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ.

‘ಈಗಾಗಲೇ ಈ ಸೌಲಭ್ಯ ಹೊಂದಿರುವ ಅಥವಾ ಹೊಸದಾಗಿ ಈ ಸೌಲಭ್ಯ ಆರಂಭಿಸಲು ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಆಸಕ್ತಿ ಹೊಂದಿದ್ದಲ್ಲಿ, ರಾಜ್ಯ ಸರ್ಕಾರದ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಬ್ಯಾಂಕ್‌, ಪ್ಲಾಸ್ಮಾ ಸಂಗ್ರಹಕ್ಕೆ ಅಗತ್ಯ ಸೌಕರ್ಯ ಇದೆಯೋ, ಇಲ್ಲವೋ ಎಂಬುದು ತಿಳಿದಿಲ್ಲ’ ಎಂದು ಡಾ.ರಾಜೇಂದ್ರ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಪ್ಲಾಸ್ಮಾ ದಾನಿಗಳಿಗೆ ಕೊರತೆ ಇಲ್ಲ. ಪ್ಲಾಸ್ಮಾ ದಾನಕ್ಕೆ ಜಿಲ್ಲೆಯಲ್ಲಿ ಸೌಲಭ್ಯ ಇಲ್ಲದೇ ಇರುವುದು ತೊಂದರೆಯಾಗಿದೆ. ಮಂಗಳೂರಿನಲ್ಲಿಯೇ ಪ್ಲಾಸ್ಮಾ ಸಂಗ್ರಹಕ್ಕೆ ಅನುಮತಿ ನೀಡಿದರೆ, ಜನರಿಗೆ ಅನುಕೂಲವಾಗಲಿದೆ’ ಎಂದು ವೆಲ್‌ನೆಸ್ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ ಖಾಸಿಂ ಅಹ್ಮದ್ ತಿಳಿಸಿದ್ದಾರೆ. ‘ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹದ ಬಗ್ಗೆ ಜಾಗೃತಿ ಇಲ್ಲ. ಒಂದೆಡೆ ಜಾಗೃತಿಯ ಕೊರತೆ, ಇನ್ನೊಂದೆಡೆ ಸಂಗ್ರಹಕ್ಕೆ ಅನುಮತಿ ಇಲ್ಲದ್ದರಿಂದ ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ಇದೆ. ರಾಜ್ಯ ಸರ್ಕಾರವು ಪ್ಲಾಸ್ಮಾ ಸಂಗ್ರಹಕ್ಕೆ ಬೆಂಗಳೂರಿನ ಕೆಲವೇ ಆಸ್ಪತ್ರೆಗಳಿಗೆ ಅನುಮತಿ ನೀಡಿದೆ‘ ಎಂದು ಹೇಳಿದ್ದಾರೆ.

‘ಪ್ಲಾಸ್ಮಾ ಬ್ಯಾಂಕ್‌ ಆರಂಭಿಸಲು ಅಗತ್ಯವಾಗಿರುವ ಸೌಕರ್ಯಗಳ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕು. ಅಲ್ಲದೇ ಕೋವಿಡ್–19 ನಿಂದ ಗುಣಮುಖರಾದವರ ಮಾಹಿತಿಯನ್ನು ಸಂಗ್ರಹಿಸಿ ಇಡಬೇಕು. ಜತೆಗೆ ಅವರಿಗೆ ಪ್ಲಾಸ್ಮಾ ದಾನದ ಕುರಿತು ಅರಿವು ಮೂಡಿಸಬೇಕು’ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

**
ಪ್ಲಾಸ್ಮಾ ಅಗತ್ಯವಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಗ್ರಹ ಕೇಂದ್ರ ತೆರೆದರೆ ಬಹಳಷ್ಟು ಪ್ರಯೋಜನವಾಗಲಿದೆ.
-ಖಾಸಿಂ ಅಹ್ಮದ್, ವೆಲ್‌ನೆಸ್ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ

**
ಆರೋಗ್ಯ ಇಲಾಖೆಯಿಂದ ವರದಿ ತರಿಸಿಕೊಂಡ ನಂತರ ಪ್ಲಾಸ್ಮಾ ಥೆರಪಿ ಕುರಿತು ಐಸಿಎಂಆರ್‌ನ ಅನುಮೋದನೆ ಪ್ರಕ್ರಿಯೆ ಆರಂಭಿಸಲಾಗುವುದು.
-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು