ಭಾನುವಾರ, ಆಗಸ್ಟ್ 14, 2022
28 °C

ಟ್ವಿಟರ್: ತುಳುವರ ಹ್ಯಾಷ್‌ ಟ್ಯಾಗ್‌ ಅಭಿಯಾನಕ್ಕೆ ಭರಪೂರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿಗೆ ರಾಜ್ಯ ಭಾಷೆ ಮಾನ್ಯತೆ ಸಿಗಬೇಕು ಎಂದು ಆಗ್ರಹಿಸಿ, ಭಾನುವಾರ ನಡೆದ ಟ್ವಿಟರ್ ಅಭಿಯಾನಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ರಾತ್ರಿ 9.30ರ ವೇಳೆಗೆ ಟ್ವೀಟ್ ಮಾಡಿದವರ ಸಂಖ್ಯೆ 3 ಲಕ್ಷ ದಾಟಿತ್ತು.

ಜೈ ತುಳುನಾಡ್‌ ಸೇರಿದಂತೆ ಹಲವು ಸಂಘಟನೆಗಳು ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನಕ್ಕೆ ಆಗ್ರಹಿಸಿ, ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರ ಭಾಷೆ ತುಳುವನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಭಿಯಾನ ನಡೆಸಿದವು.

ಭಾನುವಾರ ಇಡೀ ದಿನ ಟ್ವೀಟ್ ಅಭಿಯಾನ ನಡೆಯಿತು. ‘#TuluofficialinKA_KL’ ಹ್ಯಾಷ್‌ಟ್ಯಾಗ್‌   ಅಡಿಯಲ್ಲಿ ಟ್ವೀಟ್ ಮಾಡಿದ ತುಳುನಾಡಿನ ಜನರು, ಕರಾವಳಿ ಶಾಸಕರು, ಸಂಸದರನ್ನು ಟ್ಯಾಗ್ ಮಾಡಿ ಒತ್ತಾಯಿಸಿದರು.

ಬೆಳಗಿನಿಂದ ಆರಂಭವಾದ ಅಭಿಯಾನವು ಮಧ್ಯಾಹ್ನದ ವೇಳೆ ವರ್ಡ್ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆಯುವ ಮೂಲಕ ಗಮನ ಸೆಳೆಯಿತು. ದೇಶ–ವಿದೇಶಗಳಲ್ಲಿರುವ ತುಳುವರು ಸಹ ಟ್ವೀಟ್ ಮಾಡಿದರು. ತುಳು ಚಿತ್ರರಂಗ ನಟ–ನಟಿಯರು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು ಸಹ ಟ್ವೀಟ್ ಮಾಡಿದರು.

‘ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು, ತುಳುವಿಗೆ ಸಂವಿಧಾನದ 8ನೇ ಪರಿಚ್ಛೇದದ ಅನ್ವಯ ವಿಶೇಷ ಸ್ಥಾನಮಾನ ಸಿಗಬೇಕು. ತುಳುವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ತುಳು ಒಂದು ಭಾಷೆ ಅಷ್ಟೇ ಅಲ್ಲ, ಅದು ಸಂಸ್ಕೃತಿ-ಪರಂಪರೆ. ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್‌ ಮೂಲಕ ಅಭಿಯಾನವನ್ನು ಬೆಂಬಲಿಸಿದ್ದಾರೆ.

ನಮ್ಮ ಆಡಳಿತದ ಅವಧಿಯಲ್ಲೇ ಆಗುತ್ತದೆ: ‘ಹೆತ್ತಮ್ಮನಂಥ ಮಾತೃಭಾಷೆ ತುಳುವಿಗೆ ರಾಜ್ಯ ಭಾಷೆಯ ಮಾನ್ಯತೆ ಸಿಗಬೇಕು ಎನ್ನುವ ಹೋರಾಟಕ್ಕೆ ನನ್ನ ಬೆಂಬಲ ಇದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ಅಡಚಣೆಯಾಗಿರುವ ತಾಂತ್ರಿಕ ದೋಷಗಳನ್ನು ನಿವಾರಿಸಿ  ನಮ್ಮ ಸರ್ಕಾರದ ಆಡಳಿತದ ಅವಧಿಯಲ್ಲೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ, ಸಾಂವಿಧಾನಿಕ  ಮಾನ್ಯತೆ ಕೊಡಿಸುತ್ತೇವೆ’ ಎಂದು ನಳಿನ್‌ಕುಮಾರ್ ಕಟೀಲ್ ತುಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: 

‘ಸರ್ಕಾರದ ಜೊತೆ ಮಾತುಕತೆ’
‘ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು, ರಾಜ್ಯಭಾಷೆ ಸ್ಥಾನಮಾನ ಇತ್ಯಾದಿಗಳ ಬಗ್ಗೆ  ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ’ ಎಂದು ಸಂಸದ, ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್‌ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯೂ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು