ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯ: 16ವರ್ಷ ಕಳೆದರೂ ಪೂರ್ಣಗೊಳ್ಳದ ಮಾಸ್ಟರ್ ಪ್ಲ್ಯಾನ್‌

Published 8 ಮಾರ್ಚ್ 2024, 7:28 IST
Last Updated 8 ಮಾರ್ಚ್ 2024, 7:28 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ಹಮ್ಮಿಕೊಂಡಿದ್ದ ಮಾಸ್ಟರ್‌ ಪ್ಲ್ಯಾನ್‌ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆ ಆರಂಭವಾಗಿ 16 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಅನನುಕೂಲವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಮೂಲಸವಲತ್ತು, ವಸತಿ, ನೀರು, ಬೆಳಕು, ಶೌಚಾಲಯ ವ್ಯವಸ್ಥೆ ಕೊರತೆ ಆಗಿದ್ದರಿಂದ 2008ರಲ್ಲಿ ಸರ್ಕಾರದಿಂದ ₹ 180ಕೋಟಿಯ ಮಾಸ್ಟರ್ ಪ್ಲಾನ್ ಯೋಜನೆ ರೂಪಿಸಿ, ತಲಾ ₹ 60 ಕೋಟಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ ಯೋಜನೆ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.

ಪ್ರಥಮ ಹಂತದಲ್ಲಿ ಸುಮಾರು ₹ 59 ಕೋಟಿ ವೆಚ್ಚದಲ್ಲಿ ಅನಂತ-ಅಭಯ ವಸತಿಗೃಹ ಕಟ್ಟಡ, ಸರ್ಪಸಂಸ್ಕಾರ ಯಾಗ ಶಾಲೆ, ಭೋಜನಶಾಲೆ, ಆದಿಶೇಷ ವಿವಿಐಪಿ ವಸತಿಗೃಹ ಕಟ್ಟಡ, ಅನಘ ವಸತಿಗೃಹ, ವಸುಧಾ -ವರದ ಸಿಬ್ಬಂದಿ ವಸತಿಗೃಹ, ಶೌಚಾಲಯ ಸಂಕೀರ್ಣ, ವಾಹನ ನಿಲುಗಡೆ ಕಾಮಗಾರಿ ಪೂರೈಸಲಾಗಿದೆ.

ಎರಡನೇ ಹಂತದಲ್ಲಿ ಸುಮಾರು ₹ 80ಕೋಟಿ ವೆಚ್ಚದಲ್ಲಿ ಕ್ಷೇತ್ರದ ರಸ್ತೆ ಕಾಂಕ್ರಿಟೀಕರಣ ಅಭಿವೃದ್ಧಿ ಕಾಮಗಾರಿ, ಸಮಗ್ರ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ರಥ ಶೆಡ್ ನಿರ್ಮಾಣ, ಆದಿ ಸುಬ್ರಹ್ಮಣ್ಯದಲ್ಲಿ ದರ್ಪಣ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗಳು ಅಪೂರ್ಣವಾಗಿವೆ. ಮೂರನೇ ಹಂತದ ಕಾಮಗಾರಿಗಳೇ ಪ್ರಾರಂಭವಾಗಿಲ್ಲ. ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಸೇವೆಗಳಿಗೆ ಸ್ಥಳಾವಕಾಶದ ಕಟ್ಟಡಗಳು ಇಲ್ಲದೆ ಭಕ್ತರು ಪ್ರಯಾಸ ಪಡುವಂತಾಗಿದೆ. ಕ್ಷೇತ್ರದಲ್ಲಿ ಭಕ್ತರಿಗಾಗಿ ವಸತಿ ಕೊಠಡಿಗಳ ಸಂಖ್ಯೆ ಸುಮಾರು 700 ಇವೆ. ಭಕ್ತರ ಸಂಖ್ಯೆ ಹೆಚ್ಚಾದಾಗ ದುಬಾರಿಯಾಗಿರುವ ಖಾಸಗಿ ವಸತಿ ಕೊಠಡಿಗಳನ್ನು ಪಡೆಯುವ ಅನಿವಾರ್ಯತೆ ಭಕ್ತರದ್ದಾಗಿದೆ.

ದೇವಳಕ್ಕೆ ಪ್ರಸ್ತುತ ಭಕ್ತರಿಂದ ವಾರ್ಷಿಕವಾಗಿ ಸುಮಾರು ₹ 140 ಕೋಟಿ ಆದಾಯ ಬರುತ್ತಿದೆ. ದೇವಳದಿಂದ ಅಂದಾಜು ₹ 500 ಕೋಟಿ ಮೊತ್ತದ ನಿರಖು ಠೇವಣಿಯೂ ಇದೆ. ಇಷ್ಟು ಸಂಪತ್ತು ಇದ್ದರೂ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದೆ, ಅವೈಜ್ಞಾನಿಕ ತೀರ್ಮಾನ, ಸ್ವಪ್ರತಿಷ್ಠೆ, ಭಿನ್ನಾಭಿಪ್ರಾಯದಿಂದ ಕೂಡಿದ ಆಡಳಿತದ ವೈಫಲ್ಯದಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬುದು ಭಕ್ತರ ಆರೋಪ.

ದೇವಳಕ್ಕೆ ಕ್ಷೇತ್ರದಲ್ಲಿ ಸುಮಾರು 102 ಎಕರೆ ಭೂಮಿ ಇದೆ. ಪುತ್ತೂರು, ಬೆಂಗಳೂರು, ಮೈಸೂರು, ಕೇರಳದ ಮಧೂರು, ಧರ್ಮಸ್ಥಳದಲ್ಲೂ ನಿವೇಶನಗಳಿದ್ದು ಸುಮಾರು ₹ 50 ಕೋಟಿ ಮೌಲ್ಯದ ಆಸ್ತಿ ಇದೆ. ₹ 300 ಕೋಟಿ ಮೌಲ್ಯದ, ದೇವಾಲಯಕ್ಕೆ ಸಂಬಧಿಸಿದ ವಸತಿ ಗೃಹ ಕಟ್ಟಡಗಳು, ₹ 50 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು, ₹ 80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳು, ₹ 26 ಕೋಟಿ ವೆಚ್ಚದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆ, ₹ 12 ಕೋಟಿ ಮೌಲ್ಯದ ಯಂತ್ರೋಪಕರಣಗಳು, ಪೀಠೋಪಕರಣಗಳು, ವಾಹನಗಳು, ರಥಗಳು, ಎರಡು ವಿದ್ಯಾಸಂಸ್ಥೆ ಸೇರಿ ಸುಮಾರು ₹ 1200ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ಇದೆ. ಪ್ರತಿದಿನ ಸುಮಾರು 20 ಸಾವಿರ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು, ಈ ಕ್ಷೇತ್ರದಲ್ಲೇ ಇದ್ದು ಸದಾ ಕಾಲ ದೈನಂದಿನ ಚಟುವಟಿಕೆ ನಿಭಾಯಿಸಲು ಪೂರ್ಣಾವಧಿಯ ಜವಾಬ್ದಾರಿಯುತ ಅಧಿಕಾರಿಗಳು ಇಲ್ಲ.

2008ರಿಂದ 2024ರವರೆಗಿನ ಅವಧಿಯಲ್ಲಿ ಮಾಸ್ಟರ್ ಪ್ಲಾನ್ ಯೋಜನೆ ಮೂಲ ಯೋಜನೆಗಳು ಹಲವು ಬಾರಿ ಬದಲಾವಣೆಯಾಗಿವೆ. ಆಗಿಂದಾಗ್ಗೆ ಬದಲಾಗುತ್ತಿರುವ ಅಧಿಕಾರಿ ವರ್ಗ, ದೇವಸ್ಥಾನದ ಆಡಳಿತ ವರ್ಗ, ಇಲಾಖೆ ಅಧಿಕಾರಿಗಳು, ಸರ್ಕಾರದ ತೀರ್ಮಾನ, ಹೊಸ ಯೋಜನೆ ಸೇರ್ಪಡೆಯಿಂದ ಬದಲಾವಣೆ ಆಗಿ ವಿಳಂಬವಾಗುತ್ತಿದೆ.

2008– 9ಲ್ಲೇ ಈ ಕ್ಷೇತ್ರಕ್ಕೆ ಪ್ರಾಧಿಕಾರ ರಚಿಸುವ ತೀರ್ಮಾನ ಆಗಿನ ಸರಕಾರ ಮಾಡಿತ್ತಾದರೂ ಈಡೇರಿಲ್ಲ. ಸರ್ಕಾರಗಳು ಈ ಬಗ್ಗೆ ಗಂಭೀರ ನಿರ್ಧಾರ ಕೈಗೊಳ್ಳದೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿ ಯೋಜನೆಗಳು ನನೆಗುದಿಗೆ ಬೀಳುತ್ತಿವೆ.

ಧರ್ಮಸ್ಥಳವನ್ನು ಸಂಪರ್ಕಿಸುವ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯನ್ವಯ ₹ 23.73 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಭಕ್ತರ ವಸತಿಗಾಗಿ ಇನ್ನೂ ಸುಮಾರು ಒಂದು ಸಾವಿರ ಕೊಠಡಿಗಳ ಅವಶ್ಯವಿದೆ. ಅಪೂರ್ಣಗೊಂಡಿರುವ ರಸ್ತೆ ಅಭಿವೃದ್ಧಿ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ದಾಸೋಹ ಭವನ, ಗರ್ಭಗುಡಿಯ ಸುತ್ತಲೂ ಸುತ್ತು ಪೌಳಿ ನಿರ್ಮಾಣ, ಆಶ್ಲೇಷ ಬಲಿ ಸೇವಾ ಕಟ್ಟಡ, ಚಂದ್ರಮೌಳೇಶ್ವರ ಗುಡಿ ಪುನರ್ ನಿರ್ಮಾಣ, ಸ್ನಾನಗೃಹ, ಶೌಚಾಲಯ, ಸೂಕ್ತ ಭದ್ರತಾ ವ್ಯವಸ್ಥೆ, ಆಡಳಿತಾತ್ಮಕ ಕಾರ್ಯಗಳ ಗಣಕೀಕರಣ, ಸುಸಜ್ಜಿತವಾಗಿ ಸ್ಥಾನಘಟ್ಟ ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ, ಗೋಶಾಲೆ, ಲಗೇಜು ಕೊಠಡಿ, ಸೇವಾ ‍ಪ್ರಸಾದ ಕೌಂಟರ್‌, ಮಾಹಿತಿ ಕೇಂದ್ರಗಳು ಅನುಷ್ಠಾನ ಬಾಕಿ ಉಳಿದಿದೆ. ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಒಲವು ತೋರಿಸಿ ಕುಕ್ಕೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಬೇಕು ಎಂದು ಭಕ್ತರೊಬ್ಬರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT