ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜಿರೆ: ಪ್ರತಿಷ್ಠಾ ಮಹೋತ್ಸವ ಸಂಭ್ರಮದಲ್ಲಿ ಧರ್ಮನಾಥಸ್ವಾಮಿ ಬಸದಿ

Published 29 ಏಪ್ರಿಲ್ 2024, 7:52 IST
Last Updated 29 ಏಪ್ರಿಲ್ 2024, 7:52 IST
ಅಕ್ಷರ ಗಾತ್ರ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಪ್ರಕೃತಿಯ ಮಡಿಲಲ್ಲಿರುವ ಸುವರ್ಣಾ ನದಿಯ ತಟದಲ್ಲಿ ಕಣ್ಮನ ಸೆಳೆಯುವ ಪುಟ್ಟ ಊರು ನಾರಾವಿ. ದಟ್ಟವಾದ ಕಾಡು ಹಾಗೂ ಜಡಿಮಳೆಯಿಂದಾಗಿ ರವಿ ಕಾಣದ ಊರು (ನಾ-ರವಿ) ನಾರಾವಿ ಎಂದು ಈ ಗ್ರಾಮ ಚಿರಪರಿಚಿತವಾಗಿತ್ತು. ಆದರೆ, ಈಗ ರಸ್ತೆ, ವಿದ್ಯುತ್, ಶಾಲೆ, ಕಾಲೇಜು, ಬ್ಯಾಂಕ್, ವಾಣಿಜ್ಯಸಂಕೀರ್ಣಗಳು ಸೇರಿದಂತೆ ಆಧುನಿಕ ಸವಲತ್ತುಗಳಿಂದ ನಾರಾವಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.

ಇಲ್ಲಿನ ಪ್ರಮುಖ ಆಕರ್ಷಣೆಯಾದ, ಸುಮಾರು 900 ವರ್ಷಗಳ ಇತಿಹಾಸ ಇರುವ ನಾರಾವಿ ಬಸದಿ ಜೀರ್ಣೋದ್ಧಾರಗೊಂಡಿದ್ದು, ಬಸದಿಯ ಚಾವಣಿಗೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ. ಭಗವಾನ್ ಧರ್ಮನಾಥಸ್ವಾಮಿ, ಭಗವಾನ್ ಚಂದ್ರನಾಥಸ್ವಾಮಿ, ಭಗವಾನ್ ಶಾಂತಿನಾಥಸ್ವಾಮಿ, ಭಗವಾನ್ ಅನಂತನಾಥಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿದೇವಿ ಸಾನ್ನಿಧ್ಯ ಇಲ್ಲಿದೆ. ಬಸದಿಯ ಮುಂಭಾಗ ಅನತಿ ದೂರದಲ್ಲಿ ಅನಂತಶಾಂತಿ ತೀರ್ಥಂಕರವನ ಕಣ್ಮನ ಸೆಳೆಯುತ್ತಿದೆ.

ಮೇ 3, 4 ಮತ್ತು 5ರಂದು ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಕಾರ್ಕಳ ಜೈನಮಠದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವ ಮತ್ತು ಮಾರ್ಗದರ್ಶನ, ಭಕ್ತರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆ ಪೂರ್ಣಗೊಂಡಿವೆ.

ಪ್ರತಿ ದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನದ ವರೆಗೆ ಬಸದಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳು, ಪೂಜೆ, ಆರಾಧನೆಗಳು ನಡೆಯುತ್ತವೆ.
ಮಧ್ಯಾಹ್ನ 2ರಿಂದ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6ಗಂಟೆಯಿಂದ ಧಾರ್ಮಿಕಸಭಾ ಕಾರ್ಯಕ್ರಮಗಳು ನಡೆಯಲಿವೆ.

ಮೇ 3ರಂದು ಸಂಜೆ 6ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರ ಜೈನಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಮೇ 4ರಂದು ಸಂಜೆ 6ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನಮಠದ ದೇವೇಂದ್ರಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆಯ ವಕೀಲರಾದ ಶ್ವೇತಾಜೈನ್ ಧಾರ್ಮಿಕ ಉಪನ್ಯಾಸ ನೀಡುವರು. ಕಾರ್ಕಳದ ವಕೀಲ ಎಂ.ಕೆ.ವಿಜಯಕುಮಾರ್, ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವ ಭಾಗವಹಿಸುವರು. ಮೇ 5ರಂದು ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.

ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡುವರು.

ಧರ್ಮನಾಥ ಸ್ವಾಮಿ
ಧರ್ಮನಾಥ ಸ್ವಾಮಿ

ಧರ್ಮಸ್ಥಳದ ಡಿ.ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್ ಭಾಗವಹಿಸಲಿದ್ದು, ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT