ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿ: ಈ ಬಾರಿ ಡಿಜಿಟಲ್ ಮೌಲ್ಯಮಾಪನ?

ದೋಷ ರಹಿತ, ತ್ವರಿತ ಫಲಿತಾಂಶಕ್ಕೆ ಪ್ರಯತ್ನ: ನಾಳೆಯಿಂದ ಪರೀಕ್ಷೆ
Last Updated 15 ಸೆಪ್ಟೆಂಬರ್ 2020, 3:26 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪದವಿ ಪರೀಕ್ಷೆಗಳು ಸೆ.16ರಿಂದ ಆರಂಭಗೊಳ್ಳಲಿದೆ. ದೋಷ ರಹಿತ ಹಾಗೂ ತ್ವರಿತ ಫಲಿತಾಂಶಕ್ಕಾಗಿ ಇದೇ ಮೊದಲ ಬಾರಿಗೆ ‘ಡಿಜಿಟಲ್‌ ಮೌಲ್ಯಮಾಪನ’ಕ್ಕೆ ಸಿದ್ಧತೆ ನಡೆಸಲಾಗಿದ್ದು, ವಿಶ್ವವಿದ್ಯಾಲಯವು ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿದೆ.

ಈ ಬಾರಿ ಅಂತಿಮ ಸೆಮಿಸ್ಟರ್‌ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುಲು ಅವಕಾಶ ಕಲ್ಪಿಸಿದ್ದು, ಸುಮಾರು 25 ವಿಷಯಗಳ 48 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

‘ಡಿಜಿಟಲ್ ಮೌಲ್ಯಮಾಪನ ನಮಗೊಂದು ಸವಾಲು. ಕೋವಿಡ್‌ ಸಂಕಷ್ಟವನ್ನು ಸದಾವಕಾಶವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪರೀಕ್ಷೆ ನಡೆದ ದಿನವೇ ಉತ್ತರ ಪತ್ರಿಕೆಗಳು ಸ್ಕ್ಯಾನಿಂಗ್ ಆಗಿ, ಕೋಡಿಂಗ್ ಮಾಡಲಾಗುವುದು. ಮೌಲ್ಯಮಾಪಕರು ತಮ್ಮ ಕೋಡ್‌ ಬಳಸಿಕೊಂಡು, ಉತ್ತರ ಪತ್ರಿಕೆಗಳ ಡಿಕೋಡಿಂಗ್ ಮಾಡಿ ಮೌಲ್ಯಮಾಪನ ಮಾಡುತ್ತಾರೆ. ಇದು ಮೌಲ್ಯಮಾಪಕರ ಆರೋಗ್ಯ ಹಾಗೂ ಶೀಘ್ರ ಫಲಿತಾಂಶ ನೀಡಲೂ ಸಹಕಾರಿಯಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

‘ಈ ಹಿಂದೆ ಎಂಬಿಎ ಪರೀಕ್ಷೆಗೆ ಪ್ರಯೋಗಾರ್ಥವಾಗಿ ಡಿಜಿಟಲ್ ಮೌಲ್ಯಮಾಪನ ಮಾಡಿದ್ದೆವು. ಅದೇ ಯಶಸ್ಸಿನ ಮಾದರಿಯನ್ನು ಈಗ ಅನುಸರಿಸುತ್ತಿದ್ದೇವೆ. ಡಿಜಿಟಲ್ ಮೌಲ್ಯಮಾಪನದಲ್ಲಿ ಪ್ರತಿ ಪ್ರಶ್ನೆಯ ಅಂಕವನ್ನೂ (ಶೂನ್ಯ ಬಂದರೂ) ದಾಖಲಿಸಬೇಕು. ಅಲ್ಲದೇ ಕಂಪ್ಯೂಟರೈಸ್ಡ್‌ ಟ್ಯಾಬ್ಯುಲೇಷನ್‌ ನಡೆಯುವ ಕಾರಣ, ಫಲಿತಾಂಶ ಬೇಗ ಬರುತ್ತದೆ’ ಎಂದರು.

‘ಡಿಜಿಟಲ್ ಮೌಲ್ಯಮಾಪನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸರ್ಕಾರದ ಅನುಮತಿ ದೊರೆತರೆ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪೈಕಿ ಇದೊಂದು ದಾಖಲೆಯಾಗಲಿದೆ. ಏಕೆಂದರೆ, ಕೋವಿಡ್–19 ವಿಶೇಷ ಸಂದರ್ಭವನ್ನು ಪರಿಗಣಿಸಿ, ಹಿಂದಿನ ವರ್ಷದ ತರಗತಿಗಳ ಪರೀಕ್ಷೆಯನ್ನು ಬರೆಯಲೂ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ’ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್‌.ಧರ್ಮ ತಿಳಿಸಿದರು.

ಬಾಗಿಲಲ್ಲೇ ಪರೀಕ್ಷೆ:ಈ ಬಾರಿ ‘ಮನೆ ಬಾಗಿಲ ಬಳಿಯೇ ಪರೀಕ್ಷೆ’ ಎಂಬ ಧ್ಯೇಯದೊಂದಿಗೆ ಸಾಧ್ಯವಾದಷ್ಟು ವಿದ್ಯಾರ್ಥಿಗಳ ಮನೆ ಸಮೀಪದಲ್ಲೇ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು, ಕೊಠಡಿಯಲ್ಲಿ ಕುಳಿತುಕೊಳ್ಳುವ ಅಂತರವನ್ನೂ ಹೆಚ್ಚಿಸಿದ್ದೇವೆ. ಇದರಿಂದಾಗಿ 156ರ ಬದಲಾಗಿ 205 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಎಂದು ಪ್ರೊ.ಪಿ.ಎಲ್.ಧರ್ಮ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT