ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರವೇ ಬಿಜೆಪಿ ಸಂಸ್ಕಾರ: ಡಿಕೆಶಿ ಟೀಕೆ

ಅವ್ಯವಹಾರದ ನ್ಯಾಯಾಂಗ ತನಿಖೆಗೆ ಡಿ.ಕೆ.ಶಿವಕುಮಾರ್ ಆಗ್ರಹ
Last Updated 31 ಜುಲೈ 2020, 17:04 IST
ಅಕ್ಷರ ಗಾತ್ರ

ಮಂಗಳೂರು:'ಕೊರೊನಾ ಹೆಸರಿನಲ್ಲಿ ನಡೆಸಿದ ಭ್ರಷ್ಟಾಚಾರವೇ ಬಿಜೆಪಿ ಸಂಸ್ಕಾರ ಎನ್ನುವಂತಾಗಿದೆ. ಸಾರ್ವಜನಿಕ ಲೆಕ್ಕ ಸಮಿತಿ ಸಭೆ ನಡೆಸಲು ಸರ್ಕಾರ ಮುಂದಾಗಿಲ್ಲ. ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಜಿಲ್ಲೆಗಳಿಗೂ 30 ಜನರ ತಂಡ ಭೇಟಿ ನೀಡಲಿದೆ. ಕೊರೊನಾ ಸಂತ್ರಸ್ತರಿಗೆ ಧೈರ್ಯ ತುಂಬುವ, ಸಹಾಯ ಮಾಡುವ ಮತ್ತು ಭ್ರಷ್ಟಾಚಾರ ಬಯಲಿಗೆ ಎಳೆಯುವ ಕೆಲಸವನ್ನು ಈ ತಂಡ ಮಾಡಲಿದೆ’ ಎಂದರು.

ರಾಜ್ಯ ಸರ್ಕಾರ ಕೋವಿಡ್ -19 ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೂಲಕ ₹4 ಸಾವಿರ ಕೋಟಿಯನ್ನು ಸುರಕ್ಷಾ ಸಾಮಗ್ರಿ, ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ಕಾರ್ಮಿಕ ಇಲಾಖೆಯ ಮೂಲಕ ವೆಚ್ಚ ಮಾಡಿರುವುದಾಗಿ ದಾಖಲೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಸಾಮಗ್ರಿ ಖರೀದಿ ಹಾಗೂ ಇತರ ರಾಜ್ಯಗಳು ಖರೀದಿಸಿದ ಕೋವಿಡ್ ಸಾಮಗ್ರಿಗಳ ಬೆಲೆಗೆ ಹೋಲಿಸಿದರೆ, ರಾಜ್ಯದಲ್ಲಿ ₹2 ಸಾವಿರ ಕೋಟಿಗೂ ಅಧಿಕ ಹಣ ಲೂಟಿಯಾಗಿದೆ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದ್ದು, ಸರ್ಕಾರಕ್ಕೆ ಬೇಕಾದ ಕೆಲಸ ಮಾತ್ರ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಬಿಲ್‌ಗಳನ್ನು ನೀಡುತ್ತಾರೆ. ₹ 4 ಲಕ್ಷ ಮೌಲ್ಯದ ವೆಂಟಿಲೇಟರ್ ಕಿಟ್‌ ಅನ್ನು ₹ 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು ₹1,050 ದರದಲ್ಲಿ ಥರ್ಮಲ್ ಸ್ಕ್ಯಾನರ್‌ ಖರೀದಿ ಮಾಡಿದ್ದೇನೆ. ₹100 ದರದಲ್ಲಿ ಸ್ಯಾನಿಟೈಸರ್‌ನ್ನು ಖರೀದಿ ಮಾಡಿದ್ದೇನೆ. ಆದರೆ ಸರ್ಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದೆ’ ಎಂದು ಟೀಕಿಸಿದರು.

‘ಕೊರೊನಾ ತಡೆಗೆ ಸರ್ಕಾರಕ್ಕೆ ಸಹಕಾರ ನೀಡುತ್ತ ಬಂದಿದ್ದೇವೆಯೇ ಹೊರತು, ಕೊರೊನಾ ಹೆಸರಿನಲ್ಲಿ ನಡೆಸುತ್ತಿರುವ ಭ್ರಷ್ಟಾಚಾರಕ್ಕಲ್ಲ. ನಮ್ಮ ಆರೋಪಗಳಲ್ಲಿ ತಪ್ಪಿದ್ದರೆ, ನಾವು ಗಲ್ಲು ಶಿಕ್ಷೆ ಅನುಭವಿಸಲು ಸಿದ್ಧ’ ಎಂದು ಸವಾಲು ಹಾಕಿದರು.

ಸರ್ಕಾರ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ಬಿಜೆಪಿಯ ಭ್ರಷ್ಟಾಚಾರ ಕೊರೊನಾಗಿಂತ ಭೀಕರ. ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಮೊಹಿಯುದ್ದೀನ್‌ ಬಾವ, ಐವನ್ ಡಿಸೋಜ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಕವಿತಾ ಸನಿಲ್‌ ಇದ್ದರು.

ನಿಯಮ ಉಲ್ಲಂಘಿಸಿದ ಮಿಥುನ್‌?

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ ಅವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಜುಲೈ 17ರಂದು ಕೋವಿಡ್–19 ದೃಢಪಟ್ಟಿರುವುದಾಗಿ ಸ್ವತಃ ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಆ ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರಕ್ಕೆ ಬಂದಾಗ ಅವರೊಂದಿಗೆ ಮಿಥುನ್ ರೈ ಓಡಾಡಿದ್ದಾರೆ.

ಸರ್ಕಾರದ ನಿಯಮದಂತೆ ಪಾಸಿಟಿವ್ ಆದ ವ್ಯಕ್ತಿ ಕನಿಷ್ಠ 17 ದಿನ ಐಸೋಲೇಷನ್‌ನಲ್ಲಿ ಇರುವುದು ಕಡ್ಡಾಯ. 17ರಂದು ಪಾಸಿಟಿವ್ ಆಗಿದ್ದ ಮಿಥುನ್ ರೈ, ಕೇವಲ 14ನೇ ದಿನವೇ ಕೆಪಿಸಿಸಿ ಅಧ್ಯಕ್ಷರ ಜತೆ ಓಡಾಡಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮಿಥುನ್‌ ರೈ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT