ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಸೃಜನಶೀಲತೆಯ ‘ಗೆರೆ’: ರೈ

ಡಾ.ನಾ.ದಾಮೋದರ ಶೆಟ್ಟಿ ಅವರ ‘ಗೆರೆ’ ಕಾದಂಬರಿ ಬಿಡುಗಡೆ
Last Updated 9 ಫೆಬ್ರುವರಿ 2020, 12:01 IST
ಅಕ್ಷರ ಗಾತ್ರ

ಮಂಗಳೂರು: ‘ಗೆರೆ’ ಬದುಕಿನ ವಿವಿಧ ಮಜಲುಗಳಲ್ಲಿ ನಾವು ನಮಗೆ ಹಾಕಿಕೊಳ್ಳಬೇಕಾದ ಮಿತಿ ಹಾಗೂ ವಿಸ್ತರಣೆಯನ್ನು ಸೂಕ್ಷ್ಮವಾಗಿ ತಿಳಿಸುವ ಲವಲವಿಕೆಯ ಕಾದಂಬರಿ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಡಾ.ನಾ.ದಾಮೋದರ ಶೆಟ್ಟಿ ಅವರ 'ಗೆರೆ' ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

'ಗೆರೆ’ ಒಂದು ಕೌಟುಂಬಿಕ ಭಾವನೆಗಳನ್ನು ಹಿಡಿದಿಟ್ಟುಕೊಂಡ, ಲವಲವಿಕೆಯ ಕಾದಂಬರಿ. ಆಧುನಿಕ ಬದುಕಿನ ಅನೇಕ ಆಸೆಗಳ ಒಂದು ಸಂಕೀರ್ಣ ಸ್ಥಿತಿ ಇಲ್ಲಿ ಬಿಂಬಿತವಾಗಿದೆ. ಆಸೆಗಳಿಗೆ ‘ಗೆರೆ’ ಹಾಕಿಕೊಳ್ಳಬೇಕು ಎನ್ನುವ ಬಹಳ ಅಪೂರ್ವವಾದ ಒಳನೋಟವನ್ನು ಕಾದಂಬರಿ ಕೊಡುತ್ತದೆ' ಎಂದು ವಿವರಿಸಿದರು.

'ಕುಟುಂಬಕ್ಕೆ, ಸಮುದಾಯಕ್ಕೆ ನಾವು ಹಾಕಿಕೊಳ್ಳಬೇಕಾದ ಮಿತಿಗಳು, ಗೆರೆಗಳು, ವಿಸ್ತರಣೆಗಳು ಹೇಗೆ ಎನ್ನುವುದನ್ನೂ ಕಾದಂಬರಿಯು ವಿಸ್ತರಿಸಿ ತಿಳಿಸುತ್ತದೆ' ಎಂದು ಅವರು ಹೇಳಿದರು.

ಡಾ.ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ, ‘ಗೆರೆ ಹಾಕುವ ಮತ್ತು ದಾಟುವ ಮಧ್ಯೆ ಬದುಕು ನಿಂತಿದೆ. ಭಾಷೆಯಲ್ಲಿ ಮಂಗಳೂರಿನ ಸೊಗಡಿದ್ದರೂ, ಇಲ್ಲಿನ ಪಾತ್ರಗಳನ್ನು ಒಂದು ಸಮುದಾಯ, ಭೌಗೋಳಿಕ ವ್ಯಾಪ್ತಿಗೊಳಪಟ್ಟದ್ದು ಎಂದು ವಿಶ್ಲೇಷಿಸುವುದು ಕಷ್ಟ’ ಎಂದು ಅವರು ವಿಶ್ಲೇಷಿಸಿದರು.

‘ಹಣದ ಹಿಂದೆ ಹೋದರೆ, ಬದುಕು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶವಿದೆ. ಹೀಗಾಗಿ, ‘ಗೆರೆ’ ತನ್ನದೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸ್ವತಃ ರಂಗಕರ್ಮಿಯಾಗಿರುವ ನಾ.ದಾ. ಅವರು, ಇಲ್ಲಿ ನಾಟಕೀಯ ಸನ್ನಿವೇಶವನ್ನು ಮಾರ್ಮಿಕವಾಗಿ ಪ್ರಸ್ತುತ ಪಡಿಸಿದ್ದಾರೆ. ಪ್ರಗತಿಶೀಲ ಕಾದಂಬರಿಯ ವಸ್ತುವನ್ನು ದಾಖಲಿಸಿದ್ದಾರೆ’ ಎಂದರು.

ಕೃತಿಕಾರ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ‘ನಾವು ಬದುಕಿನಲ್ಲಿ ಮೂರ್‍ನಾಲ್ಕು ರೀತಿಯಲ್ಲಿ ಗೆರೆ ಹಾಕುತ್ತೇವೆ. ಈ ಪ್ರಕ್ರಿಯೆ ಎಲ್ಲರ ಬದುಕಿನಲ್ಲಿ ನಡೆದು ಹೋಗುತ್ತದೆ. ಕಾದಂಬರಿಗಾಗಿ ಭಾಷಾ ಕಸುವಿನ ಕೆಲಸವನ್ನೂ ಮಾಡಿದ್ದೇನೆ’ ಎಂದರು.

ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಆಲ್ವಿನ್ ಡೇಸಾ ಮಾತನಾಡಿ, ‘ಸಂಶೋಧನೆ, ವಿಮರ್ಶೆ, ವಿಶ್ಲೇಷಣೆ, ಅಭಿಪ್ರಾಯಗಳನ್ನು ಗಾಳಿಮಾತಿನ ಆಧಾರದಲ್ಲಿ ನೀಡಬೇಡಿ. ಯಾವುದೇ ಕೃತಿ ಅಥವಾ ವಿಚಾರವನ್ನು ಅರಿತು ಅಭಿವ್ಯಕ್ತಿಸಬೇಕು. ಇಂತಹ ಗೆರೆಗಳನ್ನು ಬದುಕಿನಲ್ಲಿ ಹಾಕಿಕೊಂಡರೆ, ಸಮಾಜ ಸುಧಾರಿಸುತ್ತದೆ’ ಎಂದರು.

ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ, ವಕೀಲ–ರಂಗಕರ್ಮಿ ಶಶಿರಾಜ್ ಕಾವೂರು, ರಂಗಸಂಗಾತಿಯ ಮೈಮ್ ರಾಮದಾಸ್, ಡಾ. ವಿಶ್ವನಾಥ ಬದಿಕಾನ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT