ಗುರುವಾರ , ಜುಲೈ 7, 2022
25 °C
ಡಿವೈಎಫ್‌ಐ ಮಂಗಳೂರು ನಗರ ಸಮ್ಮೇಳನ

ಪ್ರಜಾಪ್ರಭುತ್ವ ನಾಶಕ್ಕೆ ವ್ಯವಸ್ಥಿತ ಸಂಚು: ಮಹೇಂದ್ರಕುಮಾರ್‌ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೇಶದಲ್ಲಿ ಈಗ ಜನರ ಶೋಷಕರಿಗೇ ನಾಯಕರ ಪಟ್ಟ ದೊರೆಯುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶ ಮಾಡಲು ಸಂಘ ಪರಿವಾರ ವ್ಯವಸ್ಥಿತವಾದ ಸಂಚು ರೂಪಿಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಹೇಂದ್ರಕುಮಾರ್‌ ಹೇಳಿದರು.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭಾನುವಾರ ನಡೆದ ಡಿವೈಎಫ್‌ಐ ಮಂಗಳೂರು ನಗರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಹಿಡಿದ ಬಳಿಕ ದೇಶದ ಆರ್ಥಿಕ ಶಕ್ತಿ ಕುಸಿಯುತ್ತಲೇ ಇದೆ. ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳಲು ಪ್ರಯತ್ನ ನಡೆಯುತ್ತಿದೆ’ ಎಂದರು.

ಆರ್‌ಎಸ್‌ಎಸ್‌ ದೇಶದ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಧಾರ್ಮಿಕ ಉನ್ಮಾದ ಕೆರಳಿಸಿ ಅದರ ಬಲದಲ್ಲಿ ರಾಜಕೀಯ ಲಾಭ ಪಡೆಯುತ್ತಿದೆ. ದೇಶದ ಮುಂದಿರುವ ಸವಾಲುಗಳ ಕುರಿತು ಜನರು ಯೋಚಿಸದಂತೆ ಮಾಡುತ್ತಿದೆ. ಈಗ ವಿದ್ಯುನ್ಮಾನ ಮತಯಂತ್ರಕ್ಕಿಂತಲೂ (ಇವಿಎಂ) ಜನರೇ ಅಪಾಯಕಾರಿ ಆಗುತ್ತಿದ್ದಾರೆ. ಆ ರೀತಿ ಆರ್‌ಎಸ್‌ಎಸ್‌ ಕಾರ್ಯತಂತ್ರ ಹೆಣೆಯುತ್ತಿದೆ ಎಂದು ಹೇಳಿದರು.

ಹಿಂದೂ ವಿರೋಧಿ ಆರ್‌ಎಸ್‌ಎಸ್‌: ‘ಆರ್‌ಎಸ್‌ಎಸ್‌ ಹಿಂದೂಗಳ ನಿಜವಾದ ವಿರೋಧಿ. ಅದು ಯಾವತ್ತೂ ಹಿಂದೂ ಧರ್ಮೀಯರ ಪರವಾಗಿ ಇರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಸ್ವಾತಂತ್ರ್ಯಾನಂತರ ನೆಹರೂ ಅವರು ‘ಹಿಂದೂ ಬಿಲ್‌ ಕೋಡ್‌’ ತರಲು ಹೊರಟಾಗ ವಿರೋಧಿಸಿತ್ತು. ಆ ಕಾಯ್ದೆ ಜಾರಿಯಾಗದೇ ಇದ್ದರೆ ಹಿಂದೂ ಧರ್ಮದಲ್ಲಿನ ಬಹುಸಂಖ್ಯಾತರ ಸ್ಥಿತಿ ಭೀಕರವಾಗಿರುತ್ತಿತ್ತು’ ಎಂದರು.

ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಯಾವತ್ತೂ ದೇಶದ ಜನರ ಪರವಾಗಿ ಕೆಲಸ ಮಾಡುವವರಲ್ಲ. ಸುಲಭವಾಗಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಾರೆ. ಆದರೆ, ಮುಖ್ಯಮಂತ್ರಿಗಳಾಗಿದ್ದೂ ಸಾಮಾನ್ಯರಂತೆ ಬದುಕುವ ಎಡಪಕ್ಷಗಳ ನಾಯಕರು ಈ ದೇಶಕ್ಕೆ ಮಾದರಿ ಆಗಬೇಕಿದೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ‘ನೂರಾರು ವರ್ಷಗಳಿಂದ ಸೌಹಾರ್ದದ ತಾಣವಾಗಿದ್ದ ತುಳುನಾಡು ಕೋಮುವಾದದ ಪ್ರಯೋಗಶಾಲೆ ಆಗಿ ಬದಲಾಗಿದೆ. ಧರ್ಮ ಮತ್ತು ದೇಶದ ಹೆಸರಿನಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಯುವಜನರನ್ನು ದ್ವೇಷದ ಬಲೆಯಿಂದ ಹೊರತಂದು ಸಮಾಜವನ್ನು ಕಾಪಾಡಬೇಕಿದೆ’ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೀರ್ತಿ ಡಿವೈಎಫ್‌ಐ ಸಂಘಟನೆಗೆ ಸಲ್ಲುತ್ತದೆ. ಸ್ವಾತಂತ್ರ್ಯಕ್ಕಾಗಿ ಯಾವ ಹೋರಾಟವನ್ನೂ ಮಾಡದವರು ಈಗ ಉಳಿದವರಿಗೆ ದೇಶದ್ರೋಹಿಗಳ ಪಟ್ಟ ನೀಡುತ್ತಿದ್ದಾರೆ. ನಿರುದ್ಯೋಗ, ಆರ್ಥಿಕ ಕುಸಿತ ಮುಂತಾದ ಸಮಸ್ಯೆಗಳು ಯುವಜನರ ಅರಿವಿಗೆ ಬಾರದಂತೆ ಮಾಡಿ ದೇಶವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.‌ಕೆ.ಇಮ್ತಿಯಾಝ್‌, ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ನವೀನ್‌ ಬೊಲ್ಪುಗುಡ್ಡೆ, ಜೀವನ್ ರಾಜ್ ಕುತ್ತಾರ್, ಮನೋಜ್ ವಾಮಂಜೂರು, ಆಶಾ ಬೋಳೂರು, ಮಾಧುರಿ ಬೋಳಾರ್, ಶ್ರೀನಾಥ್ ಕಾಟಿಪಳ್ಳ, ಎ. ಬಿ.ನೌಶಾದ್, ಚರಣ್ ಶೆಟ್ಟಿ ಪಂಜಿಮೊಗರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು