ಗುರುವಾರ , ಅಕ್ಟೋಬರ್ 1, 2020
28 °C
ಡಿವೈಎಫ್ಐಯಿಂದ ಜಿಲ್ಲಾಧಿಕಾರಿ,ಡಿಎಚ್‌ಒಗೆ ಮನವಿ

ದುಬಾರಿ ಶುಲ್ಕ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 ರೋಗಿಗಳ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೋಮವಾರ ಮನವಿ ನೀಡಲಾಯಿತು.

‘ಕೋವಿಡ್–19 ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಪ್ರಕಟಿಸಿದೆ. ಅದರ ಅನ್ವಯ ಶುಲ್ಕ ವಿಧಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದು ಮುಂದುವರಿದಿದೆ’ ಎಂದು ಮನವಿಯಲ್ಲಿ ದೂರಲಾಗಿದೆ.

‘ಸರ್ಕಾರ ಪ್ರಕಟಿಸಿದ್ದ ದರವೇ ತೀವ್ರ ದುಬಾರಿ ಆಗಿದೆ’ ಎಂದು ಡಿವೈಎಫ್‌ಐ ಸೇರಿದಂತೆ ಹಲವು ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ, ಮಂಗಳೂರಿನಲ್ಲಿ ಆ ದರಕ್ಕಿಂತಲೂ ಅಧಿಕ ದರ ವಿಧಿಸಲಾಗುತ್ತಿದೆ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪಿಸಿದರು.

‘ನಗರದ ಖಾಸಗಿ ಆಸ್ಪತ್ರೆಯೊಂದು 11 ದಿನಗಳ ಕಾಲ ದಾಖಲಾಗಿದ್ದ ನ್ಯೂಮೋನಿಯಾ ಹೊಂದಿದ್ದ ಕೋವಿಡ್–19 ರೋಗಿಯೊಬ್ಬರಿಗೆ ₹3 ಲಕ್ಷಕ್ಕೂ ಅಧಿಕ ಶುಲ್ಕ ವಿಧಿಸಿದೆ. ಅಲ್ಲದೇ, ಕೋವಿಫಾರ್ ಚುಚ್ಚುಮದ್ದನ್ನು ನೀಡಿದ್ದು, ಅದಕ್ಕೂ ದುಪ್ಪಟ್ಟು ದರ ವಿಧಿಸಲಾಗಿದೆ’ ಎಂದು ದಾಖಲೆಗಳನ್ನು ನೀಡಿದರು. 

ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸರ್ಕಾರ ವಿಧಿಸಿರುವ ಮೊತ್ತವು ಕಡಿಮೆಯಾಗಿದೆ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅಲ್ಲದೇ, ‘ಹಾಸಿಗೆ ಖಾಲಿ ಇಲ್ಲ‌’ ಎಂಬ ನೆಪವೊಡ್ಡಿ  ರೋಗಿಗಳನ್ನು ವಾಪಸ್ ಕಳುಹಿಸುತ್ತಿದೆ. ಇದು ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ಡಿವೈಎಫ್‌ವೈಯ ಸಂತೋಷ್ ಬಜಾಲ್, ಅಶ್ರಫ್ ಕೆ.ಸಿ.ರೋಡ್, ನಿತಿನ್ ಕುತ್ತಾರ್, ಸುನಿಲ್ ತೇವುಲ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು