ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ₹300 ಕೋಟಿ, 100 ಕಡೆ ಚಾರ್ಜಿಂಗ್‌ ಕೇಂದ್ರ

ದಕ್ಷಿಣ ಕನ್ನಡ ಜಿಲ್ಲೆ ಸ್ವಾತಂತ್ರ್ಯ ಅಮೃತ ಮಹೋತ್ಸವ * ಜಿಲ್ಲೆಯ ಅಭಿವೃದ್ಧಿಗೆ ಮೂರು ಚಿಂತನೆ :ಸಚಿವ ಸುನಿಲ್‌ ಕುಮಾರ್‌
Last Updated 15 ಆಗಸ್ಟ್ 2022, 9:41 IST
ಅಕ್ಷರ ಗಾತ್ರ

ಮಂಗಳೂರು: ಕನಸಿನ ಮಂಗಳೂರು, ಆಕರ್ಷಣೀಯ ಮಂಗಳೂರು ಹಾಗೂ ಅಭಿವೃದ್ಧಿ ಪಥದಲ್ಲಿ ಮಂಗಳೂರು ಎಂಬ ಮೂರು ಚಿಂತನೆಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

‘ಮಂಗಳೂರು ಬೆಳೆಯುತ್ತಿದ್ದು, ಅದಕ್ಕನುಗುಣವಾಗಿ ಸೌಕರ್ಯಗಳನ್ನೂ ಹೆಚ್ಚಿಸಬೇಕಿದೆ. ಅವಿಭಜಿತ ದಕ್ಷಿಣ ಜಿಲ್ಲೆಯಲ್ಲಿ ಸದ್ಯ 750 ಮೆಗಾ ವಾಟ್‌ ವಿದ್ಯುತ್‌ ಬೇಡಿಕೆ ಇದೆ. ಇದು ಎಂಟು ವರ್ಷಗಳಲ್ಲಿ 250 ಮೆಗಾ ವಾಟ್‌ಗಳಷ್ಟು ಹೆಚ್ಚುವರಿ ಬೇಡಿಕೆ ಸೃಷ್ಟಿಯಾಗಲಿದೆ. ಸಾರ್ವಜನಿಕರಿಗೆ ಅಡಚಣೆರಹಿತವಾಗಿ ವಿದ್ಯುತ್‌ ಪೂರೈಸಲು ಮಂಗಳೂರಿನಲ್ಲಿ ₹ 300 ಕೋಟಿ ವೆಚ್ಚದಲ್ಲಿ 400 ಕಿಲೊ ವಾಟ್‌ ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲಾಗುತ್ತದೆ. ವಿದ್ಯುತ್‌ ವಾಹನಗಳ ಬಳಕೆ ಉತ್ತೇಜಿಸಲು ಜಿಲ್ಲೆಯಲ್ಲಿ 100 ಕಡೆ ಹಾಗೂ ಉಡುಪಿ ಜಿಲ್ಲೆಯಲ್ಲಿ 50 ಕಡೆ ವಿದ್ಯುತ್‌ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 17 ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ‘ ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಸೋಮವಾರ ಮಾತನಾಡಿದರು.

‘ಲಕ್ಷಾಂತರ ಜನರ ಬಲಿದಾನ, ಕ್ರಾಂತಿಕಾರಿಗಳ ಹತ್ತಾರು ಸ್ವರೂಪದ ಸುದೀರ್ಘ ಹೋರಾಟದಿಂದಾಗಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಇವತ್ತು ಹೆಮ್ಮೆಯಿಂದ ಸ್ಮರಿಸಬೇಕು. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಟ ಹಾಗೂ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡ ಆರಂಭದಲ್ಲೇ ಅಮರ ಸುಳ್ಯ ಹೆಸರಿನಲ್ಲಿ ರೈತರು ನಡೆಸಿದ ಹೋರಾಟಗಳು ದೇಶದ ಸ್ವಾತಂತ್ರ್ಯದ ಹೋರಾಟದ ಮೈಲುಗಲ್ಲುಗಳು. ಮಂಗಳೂರು ಜಿಲ್ಲೆಯನ್ನು ಸ್ವತಂತ್ರಗೊಳಿಸಲು ಬಾವುಟ ಗುಡ್ಡೆಯಲ್ಲಿ 1837ರಲ್ಲೇ ವಿಜಯ ಪತಾಕೆ ಹಾರಿಸಿದ ಅಮರ ಸುಳ್ಯ ಹೋರಾಟ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ. ಪುಟ್ಟಬಸವ, ಹುಲಿಕಡಿದ ನಂಜಯ್ಯ, ಕೆದಂಬಾಡಿ ರಮೇಗೌಡ, ಗುಡ್ಡೆಮನೆ ಅಪ್ಪಯ್ಯರಂತಹ ಹೊರಾಟಗಾರರ ಬಲಿದಾನವನ್ನು ಸದಾ ಸ್ಮರಿಸಬೇಕು’ ಎಂದರು.

ಪೊಲೀಸ್‌ ಇಲಾಖೆ, ಅಗ್ನಿಶಾಮಕ ಇಲಾಖೆ, ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಎನ್‌ಸಿಸಿ, ಸ್ಕೌಟ್‌ ಘಟಕಗಳು ಪಥಸಂಚಲನದಲ್ಲಿ ಭಾಗವಹಿಸಿದವು. ಪಥ ಸಂಚಲನದಲ್ಲಿ ಬೆಂದೂರುವೆಲ್‌ನ ಸೇಂಟ್‌ ಥೆರೆಸಾ ಶಾಲೆಯ ವಿದ್ಯಾರ್ಥಿನಿಯರ ತಂಡ ಮೊದಲ ಬಹುಮಾನ ಹಾಗೂ ಮೂಲ್ಕಿ ವ್ಯಾಸ ಮಹರ್ಷಿ ಶಾಲೆಯ ಗೈಡ್ಸ್‌ ತಂಡ ದ್ವಿತೀಯ ಬಹುಮಾನ ಪಡೆಯಿತು.

ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ ಕಿಣಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಅತ್ಯುತ್ತಮ ಸೇವೆ ಸಲ್ಲಿಸಿದ ವೆನ್ಲಾಕ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಪುರಭವನದಲ್ಲಿ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಮದನ್ ಮೋಹನ್ ಮತ್ತಿತರರು ಭಾಗವಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಭಾಷಣದ ಪ್ರಮುಖ ಅಂಶ‌ಗಳು

* ಸ್ವಚ್ಛ ಭಾರತ ಅಭಿಯಾನದಡಿ ₹ 2.50 ಕೋಟಿ ಮೊತ್ತದದಲ್ಲಿ ತಂಕ ಎಡಪದವಿನಲ್ಲಿ ಎಂಆರ್‌ಎಫ್ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಬೆಳ್ತಂಗಡಿ ತಾಲ್ಲೂಕಿನ ಉಜಿರೆ, ಪುತ್ತೂರಿನ ಕೆದಂಬಾಡಿ, ಬಂಟ್ವಾಳದ ನರಿಕೊಂಬುವಿನಲ್ಲೂ. ಅಂದಾಜು ₹ 9.13 ಕೋಟಿ ಮೊತ್ತದಲ್ಲಿ 3 ಹೆಚ್ಚುವರಿ ಎಂಆರ್‌ಎಫ್ ಘಟಕಗಳ ನಿರ್ಮಾಣ.

* ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲುವಿನಲ್ಲಿ, ಬೆಳ್ತಂಗಡಿ ಉಜಿರೆಯಲ್ಲಿ ₹ 1.57 ಕೋಟಿ ಅಂದಾಜು ವೆಚ್ಚದಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ

* ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ 66,428.93 ಹೆಕ್ಟೇರ್‌ ಡೀಮ್ಡ್ ಅರಣ್ಯವನ್ನು ಪರಿಶೀಲಿಸಿ ಇದರ ವ್ಯಾಪ್ತಿಯಿಂದ 34,850.48 ಹೆಕ್ಟೇರ್‌ ಕೈಬಿಡಲು ಕ್ರಮ

* ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿ. 15 ಕೆರೆಗಳ ಅಭಿವೃದ್ಧಿ ಪೂರ್ಣ.

* ಅಮೃತ ಉದ್ಯಾನ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ

* ಜಲಜೀವನ್ ಅಭಿಯಾನದಡಿ ₹ 518 ಕೋಟಿ ಮೊತ್ತದ 700 ಕಾಮಗಾರಿಗಳ ಅನುಷ್ಠಾನ

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ 7 ಯೋಜನೆಗಳಿಗೆ ₹ 487.83 ಕೋಟಿ ವೆಚ್ಚ. ಎರಡು ಯೋಜನೆಗಳು ಪ್ರಗತಿಯಲ್ಲಿ

* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ₹ 25 ಕೋಟಿ ಮೊತ್ತದಲ್ಲಿ ನಾರಾಯಣಗುರು ವಸತಿ ಶಾಲೆ ಸ್ಥಾಪನೆ.

* ಸೇನೆ ಮತ್ತು ಪೊಲೀಸ್ ಸೇವೆಗೆ ಸೇರುವವರಿಗೆ ತರಬೇತಿ ನೀಡಲು ಮಂಗಳೂರಿನಲ್ಲಿ ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಪ್ರಾರಂಭಿಸಲು ಚಿಂತನೆ

* ರಾಜ್ಯ ಸರ್ಕಾರದಿಂದ ಜಿಲ್ಲೆಗೆ 8000 ಹೊಸ ಮನೆ ಮಂಜೂರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3,621 ಫಲಾನುಭವಿಗಳಿಗೆ ಸೂರು

* ಯಕ್ಷಗಾನ ಸಮ್ಮೇಳನ ಆಯೋಜಿಸ ₹ 2 ಕೋಟಿ ಅನುದಾನವನ್ನು ಮೀಸಲು
* ಪ್ರವಾಸಿಗರನ್ನು ಸೆಳೆಯಲು ಕಿನಾರೆಗಳ ಅಭಿವೃದ್ಧಿ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ. ಪ್ರವಾಸಿ ತಾಣಗಳಮೂಲಸೌಕರ್ಯ ಅಭಿವೃದ್ಧಿಗೆ ₹ 23.6 ಕೋಟಿ ವೆಚ್ಚದ ಕಾಮಗಾರಿ

* ಕೇಂದ್ರ ಸರ್ಕಾರದ ನೆರವಿನಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ‘ಬ್ಲೂ ಫ್ಲ್ಯಾಗ್’ ಬೀಚ್ ಅಭಿವೃದ್ಧಿ ಪಡಿಸಲು ಕ್ರಮ

* ಕಂಬಳ ಕ್ರೀಡೆ ಉತ್ತೇಜನ ನೀಡಲು ವಿಶೇಷ ಅನುದಾನ ಬಿಡುಗಡೆ

* ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ 54 ಗ್ರಾಮ ಪಂಚಾಯಿತಿಗಳನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲು ಕ್ರಮ. ಮೊದಲ ಹಂತದಲ್ಲಿ 27 ಗ್ರಾಮ ಪಂಚಾಯಿತಿಗಳಿಗೆ ತಲಾ ₹ 25 ಲಕ್ಷ ಅನುದಾನ ಬಿಡುಗಡೆ.

* ಅಮೃತ ಅಂಗನವಾಡಿ ಯೋಜನೆಯಡಿ 25 ಅಂಗನವಾಡಿಗಳಿಗೆ ತಲಾ ₹ 25 ಲಕ್ಷ ಬಿಡುಗಡೆ

* ಅಮೃತ ಆರೋಗ್ಯ ಯೋಜನೆಯಡಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ₹ 5 ಕೋಟಿ ಅನುದಾನ ಬಿಡುಗಡೆ

* ಅಮೃತ ಶಾಲೆ ಯೋಜನೆಯಡಿ 27 ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹ 27 ಲಕ್ಷ ಅನುದಾನ ಬಿಡುಗಡೆ

* ಅಮೃತ ಸ್ವಸಹಾಯ ಯೋಜನೆಯಡಿ 185 ಸ್ವಸಹಾಯ ಗುಂಪುಗಳಿಗೆ ₹ 1.85 ಕೋಟಿ ಅನುದಾನ ಬಿಡುಗಡೆ

* ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 18 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ ಗುರಿ. ₹ 90.94 ಕೋಟಿ ಆರ್ಥಿಕ ಗುರಿ ನಿಗದಿ. ಈವರೆಗೆ ₹ 31.50 ಕೋಟಿ ಅನುದಾನ ಬಿಡುಗಡೆ

* ಗ್ರಾಮೀಣ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿಗೆ ₹ 5.77 ಕೋಟಿ ಹಂಚಿಕೆ

* ವಿಶೇಷ ಅನುದಾನದಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 148 ಕೋಟಿ ಅನುದಾನ ಮೀಸಲು

* 100 ವರ್ಷ ಪೂರೈಸಿರುವ 8 ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ₹ 1.32 ಲಕ್ಷ ಅನುದಾನ ಬಿಡುಗಡೆ

* 45 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಇ-ಗ್ರಂಥಾಲಯ ನಿರ್ಮಿಸಲು ₹ 1.25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿರುತ್ತದೆ.
* ರೈತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 25,000 ಮಂದಿಗೆ ಸವಲತ್ತು ವಿತರಣೆ. ರೈತ ಮಕ್ಕಳ ಖಾತೆಗೆ ನೇರವಾಗಿ ₹ 795 ಕೋಟಿ ವಿದ್ಯಾರ್ಥಿ ವೇತನ ಪಾವತಿ.

* ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1.54 ಲಕ್ಷ ರೈತರರಿಗೆ ಒಟ್ಟು ₹ 345 ಕೋಟಿ ಅನುದಾನ ಬಿಡುಗಡೆ

* ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯಡಿ 33 ಘಟಕಗಳಗೆ ₹ 3,257 ಕೋಟಿ ಸಾಲ ಮಂಜೂರು
* ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 9 ಲಕ್ಷ ಜನರಿಗೆ ಕಾರ್ಡ್‍ಗಳನ್ನು ವಿತರಣೆ. ಈ ವರ್ಷ 45,000 ಜನರಿಗೆ ಈ ಯೋಜನೆಯಿಂದ ಪ್ರಯೋಜನ.

* ಬೆಳಕು ಯೋಜನೆಯಡಿ 4,012 ಮನೆಗಳಿಗೆ ವಿದ್ಯುತ್ ಸಂಪರ್ಕ, ವಿಫಲಗೊಂಡ 1,384 ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾವಣೆ. ಜಿಲ್ಲೆಯಲ್ಲಿ 33 ಕೆ.ವಿ ಜಿಐಎಸ್ ಸಾಮರ್ಥ್ಯದ ಎರಡು ಉಪಕೇಂದ್ರವನ್ನು ಸ್ಥಾಪನೆಗೆ ಕ್ರಮ.

* ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಬಿ.ಸಿ.ರೋಡ್‍–ಪುಂಜಾಲಕಟ್ಟೆವರೆಗೆ ₹159.70 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ನಿರ್ಮಾಣ. ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಸ್ತೆ ವಿಸ್ತರಣೆಗೆ ₹ 718.52 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್‌ಗೆ ಅನುಮೋದನೆ

* ರಾಷ್ಟ್ರೀಯ ಹೆದ್ದಾರಿ 66 ಮತ್ತು 73ರಲ್ಲಿ ಬಿ.ಸಿ.ರೋಡ್‌ವರೆಗಿನ ಹೆದ್ದಾರಿ ವಿಸ್ತರಣೆಗೆ ₹ 360 ಕೋಟಿ ಅನುದಾನ ಬಿಡುಗಡೆಗೆ ಕ್ರಮ

* ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ₹ 130 ಕೋಟಿ ಅನುದಾನ ಮಂಜೂರು.

* ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3,621 ಫಲಾನುಭವಿಗಳನ್ನು ಆಯ್ಕೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿ35 ಮನೆಗಳು ಪೂರ್ಣ

* ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ₹ 1000 ಕೋಟಿ ಅನುದಾನದಲ್ಲಿ ₹ 523 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಪೂರ್ಣ.

* ನಗರ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೆ 94ಸಿಸಿ ಅಡಿ 24,737 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

* ಗ್ರಾಮೀಣ ಪ್ರದೇಶದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಒಟ್ಟು 48,015 ಫಲಾನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT