ಸೋಮವಾರ, ಏಪ್ರಿಲ್ 12, 2021
23 °C

ಆನೆ ದಾಳಿಯಿಂದ ಕೃಷಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ಬಸವದಡ್ಡು ಶಂಕರ ಭಟ್‍ ಅವರ ಕೃಷಿ ತೋಟಕ್ಕೆ ಗುರುವಾರ ರಾತ್ರಿ ಒಂಟಿ ಸಲಗವೊಂದು ದಾಳಿ ಮಾಡಿ, ಕೃಷಿಗೆ ಹಾನಿ ಮಾಡಿದೆ.

ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡ ಕಾರಣ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಲಾಗಿದೆ.

ಮುಂಡಾಜೆ ಕಾಪು ಕಡೆಯಿಂದ ಆನೆ ಬಂದಿರುವ ಸುಳಿವು ಪಡೆದ ನೆರಮನೆಯವರು, ಒಂಟಿ ಸಲಗ ತೋಟದ ಕಡೆ ನುಗ್ಗಿರುವ ಕುರಿತು ಮನೆಯವರಿಗೆ ಮಾಹಿತಿ ನೀಡಿದ್ದರು.

ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಸ್ಥಳೀಯರಾದ ಹರ್ಷನಾರಾಯಣ ಭಟ್, ನೀಲಯ್ಯ ಗೌಡ, ರಮೇಶ, ರಾಮಚಂದ್ರ ಮತ್ತಿತರರು 20 ಮೀ.ನಷ್ಟು ದೂರದ ತೋಟದಲ್ಲಿದ್ದ ಆನೆಯನ್ನು ದೊಂದಿ ಬೆಳಗಿಸಿ, ಪಟಾಕಿ ಸಿಡಿಸಿ ಕಾಡಿನತ್ತ ಅಟ್ಟಿದ್ದಾರೆ.

ಆನೆ ದಾಳಿಯಿಂದ 2 ತೆಂಗು, 25 ಬಾಳೆಗಿಡ, ಬಿದಿರು ಮೆಳೆ, ತರಕಾರಿ ಗಿಡ ಹಾಗೂ ಅನಾನಸು ಗಿಡಗಳಿಗೆ ಹಾನಿಯಾಗಿದೆ. ಉಪ ವಲಯ ಅರಣ್ಯ ಅಧಿಕಾರಿ ರವೀಂದ್ರ ಅಂಕಲಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.

ತಮ್ಮ ಕೃಷಿ ತೋಟದ ನೀರಿನ ಉದ್ದೇಶಕ್ಕಾಗಿ ಶಂಕರ್ ಭಟ್ ನಿರ್ಮಿಸಿರುವ ತೆರೆದ ಟ್ಯಾಂಕ್‍ನಿಂದ ಆನೆಯು ನೀರು ಕುಡಿದು, ಬಳಿಕ ತೋಟದತ್ತ ತೆರಳಿದ ಕುರುಹು ಪತ್ತೆಯಾಗಿದೆ.

ಮುಂಡಾಜೆ ಚಾರ್ಮಾಡಿ, ಮಲವಂತಿಗೆ, ಮಿತ್ತಬಾಗಿಲು ಕಡಿರು ದ್ಯಾವರ ಸೇರಿದಂತೆ ಅರಣ್ಯದಂಚಿ ನಲ್ಲಿರುವ ಗ್ರಾಮಗಳಲ್ಲಿ ಅನೇಕ ಬಾರಿ ಕಾಡಾನೆಗಳು ಕಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಮನೆ ಸಮೀಪದವರೆಗೂ ಬರುತ್ತಿರುವುದು ಈ ಭಾಗದಲ್ಲಿ ಭೀತಿ ಮೂಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.