ಬುಧವಾರ, ಮೇ 25, 2022
31 °C

ರೈತರ ಬೇಡಿಕೆ ಗೌಣ ಮಾಡಲು ಯತ್ನ: ಮಾಜಿ ಸಚಿವ ರಮಾನಾಥ ರೈ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೆಹಲಿಯಲ್ಲಿ ಚಳವಳಿನಿರತ ರೈತರ ಜತೆ ಕಾಟಾಚಾರದ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರವು, ಅವರ ಬೇಡಿಕೆಗಳನ್ನು ಗೌಣ ಮಾಡಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ರೈತರ ಪರ ಯೋಚಿಸದ ನಿಸ್ತೇಜ ಸರ್ಕಾರವಾಗಿದೆ. ರೈತರ ಪರವಾಗಿ ಧ್ಬನಿ ಎತ್ತುವವರ ವಿರುದ್ಧ ಪ್ರಕರಣ ದಾಖಲಿಸಿ ಅನ್ಯಾಯ ಮಾಡುತ್ತಿದೆ. ರೈತರನ್ನು ಮಾವೋವಾದಿಗಳು, ಉಗ್ರವಾದಿಗಳು, ಖಲಿಸ್ತಾನವಾದಿಗಳು ಎಂದು ಅವಮಾನಿಸಲಾಗುತ್ತಿದೆ’ ಎಂದರು.

‘ಖಲೀಸ್ತಾನವಾದಿಗಳನ್ನು ಮಟ್ಟಹಾಕಲು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಪ್ರಾಣಾರ್ಪಣೆ ಮಾಡಿದರು. ಬ್ಲೂ ಸ್ಟಾರ್ ಆಪರೇಷನ್ ಕೈಗೊಂಡು, ಅವರನ್ನು ನಾಶ ಮಾಡಿದರು. ಈಗ ಮತ್ತೆ ದೇಶದಲ್ಲಿ ಖಲೀಸ್ತಾನವಾದಿಗಳು ಇದ್ದಾರೆಂದಾದರೆ, ಅದು ಬಿಜೆಪಿ ವೈಫಲ್ಯವಾಗುತ್ತದೆ’ ಎಂದು ಆರೋಪಿಸಿದರು.

ಜನಸಂಘ ಮತ್ತು ಬಿಜೆಪಿ ಒಂದು ಕಾಲದಲ್ಲಿ ವ್ಯಾಪಾರಿಗಳ ಪರವಾಗಿತ್ತು. ಮೊದಲು ಕೆಲವು ವ್ಯಾಪಾರಿಗಳ ಪರ ಯೋಚಿಸುತ್ತಿದ್ದ ಬಿಜೆಪಿ, ಈಗ ಐದಾರು ಕಾರ್ಪೊರೇಟ್ ಸಂಸ್ಥೆಗಳ ಹಿತವನ್ನಷ್ಟೇ ಕಾಯುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಹತ್ತಿಕ್ಕಲು ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಯಿತು. ಇದರಿಂದ ರೈತರಿಗೆ ಮಾತ್ರವಲ್ಲ, ಜನಸಾಮಾನ್ಯರು, ಅಭ್ಯಾಸಕ್ಕೆ ಅಂತರ್ಜಾಲವನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಎಂದು ದೂರಿದರು.

ತನಿಖೆ ನಡೆಸುವುದು ರಾಮರಾಜ್ಯದ ಆಶಯ:

‘ಬೋಫೋರ್ಸ್ ಹಗರಣದ ಚರ್ಚೆಗೆ ಬಂದಾಗ ಯುಪಿಎ ಜಂಟಿ ಸದನ ಸಮಿತಿ ರಚಿಸಿತು. ಆದರೆ, ರಫೆಲ್ ಹಗರಣದ ತನಿಖೆಗೆ ಎನ್‌ಡಿಎ ಸರ್ಕಾರ ಸಮಿತಿ ರಚಿಸಿಲ್ಲ. ಸೀತೆಯ ಮೇಲೆ ಆರೋಪ ಬಂದಾಗ ರಾಮ ತನಿಖೆ ನಡೆಸಿದ್ದ. ಹಾಗೆಯೇ ಆರೋಪ ಬಂದಾಗ ತನಿಖೆ ನಡೆಸಿದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಆರೋಪದ ತನಿಖೆ ನಡೆಸಿದಾಗ ಮಾತ್ರ ಅದು ರಾಮರಾಜ್ಯವಾಗುತ್ತದೆ’ ಎಂದು ಕುಟುಕಿದರು.

ತುರ್ತು ಪರಿಸ್ಥಿತಿಯಲ್ಲಿ ಬಡವನಿಗೆ ತೊಂದರೆ ಆಗಿಲ್ಲ:

ತುರ್ತು ಪರಿಸ್ಥಿತಿಯಲ್ಲಿ ಈ ದೇಶದ ಯಾವ ಬಡವನಿಗೂ ತೊಂದರೆಯಾಗಿಲ್ಲ. ಬದಲಾಗಿ ಸಹಾಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು ಜೈಲಿಗೆ ಹೋಗಿಲ್ಲ. ಈಗ ಎಲ್ಲದಕ್ಕೂ ತುರ್ತು ಪರಿಸ್ಥಿತಿಯ ಉದಾಹರಣೆ ಕೊಡುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧ ಧೋರಣೆ ಅನುಸರಿಸುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.

ಬಿಜೆಪಿಗರು ಖಲಿಸ್ತಾನವಾದಿಗಳನ್ನು ತಂದಿದ್ದಾರೆಯೇ:

‘ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಖಲಿಸ್ತಾನವಾದಿಗಳ ಹೆಡೆಮುರಿ ಕಟ್ಟಿದ್ದರು. ಅವರ ದಿಟ್ಟ ಕ್ರಮದಿಂದ ಖಲಿಸ್ತಾನವಾದಿಗಳು ದೇಶಬಿಟ್ಟು ಹೋಗಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಖಲಿಸ್ತಾನವಾದಿಗಳ ಹೆಸರು ಪ್ರಸ್ತಾಪಿಸುವುದನ್ನು ನೋಡಿದರೆ, ಬಿಜೆಪಿಯವರೇ ಅವರನ್ನು ಮತ್ತೆ ದೇಶಕ್ಕೆ ತಂದಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದರು.

‘ದೆಹಲಿಯಲ್ಲಿ ರೈತರ ಚಳವಳಿ 72 ದಿನ ಪೂರೈಸಿದೆ. ಸರ್ಕಾರ ಕಾಟಾಚಾರಕ್ಕೆ 12 ಬಾರಿ ಮಾತುಕತೆ ನಡೆಸಿದೆಯೇ ವಿನಾ ಯಾವುದೇ ಖಚಿತ ನಿರ್ಧಾರಕ್ಕೆ ಬರದೇ, ರೈತರ ಬೇಡಿಕೆ ಗೌಣ ಮಾಡಲು ಹೊರಟಿದೆ. ಕೇಂದ್ರ ಸರ್ಕಾರ ನಿಸ್ತೇಜವಾಗಿದೆ. ಅದು ಸಜೀವ ಸರ್ಕಾರವೇ ಆಗಿದ್ದರೆ, ವಿಪಕ್ಷಗಳ ಮಾತಿಗೆ ಮನ್ನಣೆ ನೀಡಿ, ಮಾತುಕತೆ ನಡೆಸಬೇಕಾಗಿತ್ತು. ವಿಪಕ್ಷವನ್ನು ಇಷ್ಟು ನಿರ್ಲಕ್ಷಿಸಿದ ಸರ್ಕಾರವನ್ನು ಹಿಂದೆಂದೂ ಕಂಡಿಲ್ಲ’ ಎಂದರು.

ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್‌ ರವೂಫ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌‌, ಮಾಜಿ ಮೇಯರ್‌ಗಳಾದ ಶಶಿಧರ್‌ ಹೆಗ್ಡೆ, ಭಾಸ್ಕರ್‌‌ ಮೊಯ್ಲಿ, ಯುವ ಕಾಂಗ್ರೆಸ್‌‌ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್‌‌ ಬಂಟ್ವಾಳ, ಕಾರ್ಪೊರೇಟರ್‌‌ ನವೀನ್‌ ಡಿಸೋಜ, ಮಾಜಿ ಕಾರ್ಪೊರೇಟರ್‌‌‌‌ ಅಪ್ಪಿ, ಶಾಹುಲ್‌‌‌ ಹಮೀದ್‌, ಟಿ.ಕೆ.ಸುಧೀರ್‌‌‌‌‌‌, ಪೃಥ್ವಿರಾಜ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು