ಸೋಮವಾರ, ಆಗಸ್ಟ್ 15, 2022
22 °C
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆದ ಸರ್ಕಾರ

ಜನಾಭಿಪ್ರಾಯ ರೂಪುಗೊಳ್ಳಲಿ: ಲೊಬೊ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ಸರ್ಕಾರ ವಿಚಾರಣೆಯಿಂದ ಹಿಂದಕ್ಕೆ ಪಡೆದಿರುವ ಕುರಿತು ಶಕ್ತವಾದ ಜನಾಭಿಪ್ರಾಯ ರೂಪುಗೊಳ್ಳಬೇಕು’ ಎಂದು ಮಾಜಿ ಶಾಸಕ ಜೆ.ಆರ್‌ ಲೊಬೊ ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾನೂನು ಇಲಾಖೆ ಮತ್ತು ತಜ್ಞರ ಸ್ಪಷ್ಟ ವಿರೋಧದ ನಡುವೆಯೂ,ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚಿಸಿ ಬಿಜೆಪಿಯ ಶಾಸಕರು ಮತ್ತು ಸಂಸದರ ಮೇಲಿನ ಒಟ್ಟು 62 ಕ್ರಿಮಿನಲ್‌ ಪ್ರಕರಣಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದಿದೆ. ಆಡಳಿತ ಪಕ್ಷವು ಯಾವಾಗ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವುದಿಲ್ಲವೋ ಆಗ ಗೂಂಡಾ ರಾಜ್ಯ ನಿರ್ಮಾಣವಾಗುತ್ತದೆ. ಬೇಲಿಯೇ ಎದ್ದು ಹೊಲವನ್ನು ಮೇಯುವ ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದರು.

‘ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಸಚಿವ, ಸಂಸದರ ವಿರುದ್ಧ ದಾಖಲಾಗಿರುವ ಹಲವು ಗಂಭೀರ ಪ್ರಕರಣಗಳನ್ನು ‘ಸಾರ್ವಜನಿಕ ಹಿತಾಸಕ್ತಿ‘ಗಾಗಿ ಹೋರಾಟ ನಡೆಸಿದ್ದಾರೆ ಎಂಬ ಸಮಜಾಯಿಷಿಯೊಂದಿಗೆ ಸರ್ಕಾರ ವಾಪಸ್‌ ಪಡೆದಿದೆ. ಆದರೆ, ನ್ಯಾಯಾಲಯ ಇದನ್ನು ಒಪ್ಪುವುದಿಲ್ಲ ಎಂಬ ನಂಬಿಕೆ ಇದೆ. ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು’ ಎಂದು ಲೊಬೊ ಆಗ್ರಹಿಸಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿಕಾರದಲ್ಲಿದ್ದಾಗಲೂ, ಕ್ರಿಮಿನಲ್‌ ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದಿರುವ ಉದಾಹರಣೆಗಳಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಲೊಬೊ,‘ಆ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಯಾರೂ ಇರಲಿಲ್ಲ. ಈಗ ವಾಪಸ್‌ ಪಡೆದಿರುವುದೆಲ್ಲವೂ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು. ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿರಲಿ, ಜನಪ್ರತಿನಿಧಿಗಳಿಗೆ ಒಂದು ಕಾನೂನು ಜನಸಾಮಾನ್ಯರಿಗೆ ಮತ್ತೊಂದು ಕಾನೂನು ಎಂಬ ಪರಿಸ್ಥಿತಿ ನಿರ್ಮಾಣವಾಗಬಾರದು’ ಎಂದರು.

‘ಸಚಿವ ಸಂಪುಟ ಉಪಸಮಿತಿ ರಚಿಸಿ ಸಚಿವರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ’ ಎಂದು ನ್ಯಾಯವಾದಿ ಬಿ. ಇಬ್ರಾಹಿಂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರನಾಥ ಶೆಟ್ಟಿ, ಸುರೇಶ್ ಬಲ್ಲಾಳ್,ಟಿ.ಕೆ. ಸುಧೀರ್‌, ಎ.ಸಿ. ವಿನಯ್‌ರಾಜ್‌, ಅಬ್ದುಲ್ ಸಲೀಂ, ರಮಾನಂದ ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.