ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಬೇಡಿಕೆ ಈಡೇರಿಸಲು ರೈತ ಸಂಘಗಳ ಒಕ್ಕೂಟ ಆಗ್ರಹ

Published 2 ಮಾರ್ಚ್ 2024, 14:00 IST
Last Updated 2 ಮಾರ್ಚ್ 2024, 14:00 IST
ಅಕ್ಷರ ಗಾತ್ರ

ಪುತ್ತೂರು: ಅಡಿಕೆ ಹಾಗೂ ತೆಂಗಿನ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದ ರೀತಿಯಲ್ಲೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಎಲೆಚುಕ್ಕಿ ರೋಗ ಮತ್ತು ಹಳದಿ ರೋಗ ಬಾಧಿತ ರೈತರಿಗೆ ಪ್ರತಿ ಎಕರೆಗೆ ₹ 25ಸಾವಿರ ಸಹಾಯಧನ ನೀಡಬೇಕು ಎಂದು ಎಂದು ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದ ಸಂಯೋಜಕ ಸನ್ನಿ ಡಿಸೋಜ ಆಗ್ರಹಿಸಿದರು.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ಕುಸಿಯುತ್ತಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಆಮದು ಆಗುತ್ತಿರುವುದೇ ಅಡಿಕೆ ಧಾರಣೆ ಕುಸಿತಕ್ಕೆ ಕಾರಣವಾಗಿದ್ದು, ಜತೆಗೆ ಅಡಿಕೆ ಬೆಲೆ ಸಂಪೂರ್ಣ ಕುಸಿಯಲಿದೆ ಎಂಬ ಕೃತಕ ಆತಂಕ ಸೃಷ್ಟಿಸಲಾಗುತ್ತಿದೆ ಎಂದರು.

ಕರಾವಳಿ ಭಾಗದ ಅತ್ಯಂತ ಉತ್ತಮ ಗುಣಮಟ್ಟದ ಅಡಿಕೆಯ ಜತೆಗೆ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಮಿಶ್ರಣ ಮಾಡಿ ದಕ್ಷಿಣ ಕನ್ನಡದ ಹೆಸರು ಕೆಡಿಸುವ ಕಾರ್ಯವೂ ನಡೆಯುತ್ತಿದೆ. ಅಡಿಕೆ ಮಾರುಕಟ್ಟೆ ಹಾಳುಮಾಡುವ ಉದ್ದೇಶದಿಂದ ವಿಮಾನದಲ್ಲಿ ಅಡಿಕೆ ತರಿಸಿಕೊಂಡು ಕೃತಕ ಆತಂಕ ಸೃಷ್ಟಿಸಲಾಗುತ್ತಿದೆ ಎಂದ ಅವರು, ವಿಮಾನದಲ್ಲಿ ತರಿಸಿಕೊಳ್ಳುತ್ತಿರುವ ಈ ಅಡಿಕೆ ಯಾರದ್ದು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಅಡಿಕೆ ಉತ್ಪಾದನಾ ವೆಚ್ಚ ಪ್ರಸ್ತುತ 3 ಪಟ್ಟು ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಎಲೆಚುಕ್ಕಿ ರೋಗ-ಹಳದಿರೋಗದಿಂದ ರೈತರು ತತ್ತರಿಸುವಂತಾಗಿದೆ ಎಂದ ಅವರು, ನಮ್ಮ ದೇಶದ ಈರುಳ್ಳಿ ಬೆಳೆಯ ರಪ್ತು ನಿಷೇಧ ಮಾಡುವ ಕೇಂದ್ರ ಸರ್ಕಾರಕ್ಕೆ ಅಡಿಕೆ ಆಮದು ನಿಷೇಧ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಮೂರುಬಾರಿ ಆಯ್ಕೆಗೊಂಡ ಜಿಲ್ಲೆಯ ಸಂಸದರು ಈ ಬಗ್ಗೆ ಕೇಂದ್ರದಲ್ಲಿ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ₹ 29ಕ್ಕೆ ಅಕ್ಕಿ ಕೊಡುವ ಕೇಂದ್ರ ಸರ್ಕಾರ ಕಬ್ಬಿಣ, ಸಿಮೆಂಟ್ ಕೊಡಲಿ. ಅಡಿಕೆ ಆಮದು ನಿಷೇಧ ಮಾಡಲು ಸಾಧ್ಯವಾಗದಿದ್ದರೆ, ಡಬ್ಲ್ಯುಟಿಒ ಒಪ್ಪಂದದಿಂದ ಭಾರತ ಹೊರಬರಲಿ. ಇದರಿಂದ ದೇಶಕ್ಕೆ ಯಾವ ನಷ್ಟವೂ ಇಲ್ಲ. ದೇಶಕ್ಕೆ ಬೇಕಾದ ಆಹಾರವನ್ನು ರೈತರು ಬೆಳೆದುಕೊಡುತ್ತಾರೆ ಎಂದು ಅವರು ಹೇಳಿದರು.

ಈ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾರ್ಚ್‌ 7ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಅಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನಿಂದ ಟ್ರ್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿಗೆ ತೆರಳಿ, ಪ್ರತಿಭಟನೆ ನಡೆಸಲಾಗುವುದು ಎಂದರು.

ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುವ ರೈತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಧಾರ್ಮಿಕ ಸಂಘರ್ಷದಲ್ಲಿ ಮೃತಪಟ್ಟವರಿಗೆ ಸರ್ಕಾರ ನೀಡಿದ ₹ 25 ಲಕ್ಷ ಸಹಾಯಧನದ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ನೀಡಬೇಕು. ಬಂಟ್ವಾಳದ ಮೂಲಕ ಹಾದುಹೋಗುವ 400 ಕೆ.ವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದರು.

ರೈತ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಓಸ್ವಾಲ್ಡ್‌ ಫರ್ನಾಂಡಿಸ್‌, ಅಮರನಾಥ ಆಳ್ವ ಕರ್ನೂರು, ಖಲೀಲ್ ಇಬ್ರಾಹಿಂ ಪುಚ್ಚೆತ್ತಡ್ಕ, ಭಾಸ್ಕರ ರೈ ಕೊಪ್ಪಳ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT