ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಲೋಬಲ್ ಮಾರ್ಕೆಟ್‌: 22 ಮಳಿಗೆಗಳು ಬೆಂಕಿಗಾಹುತಿ

ಕಲ್ಲಾಪು: ಅರೆಗಳಿಗೆಯಲ್ಲಿ ಬೆಂದು ಕರಕಲಾದ ಹಣ್ಣುಹಂಪಲು, * 10 ಕೋಟಿಗೂ ಹೆಚ್ಚು ನಷ್ಟ?
Published 11 ಜೂನ್ 2024, 5:31 IST
Last Updated 11 ಜೂನ್ 2024, 5:31 IST
ಅಕ್ಷರ ಗಾತ್ರ

ಉಳ್ಳಾಲ: ಬೆಂದು ಕೆಂಬಣ್ಣದ ಓಕುಳಿಯಂತಾದ ಡ್ರ್ಯಾಗನ್‌ ಹಣ್ಣುಗಳ ರಾಶಿ, ಕ್ವಿಂಟಲ್‌ಗಟ್ಟಲೆ ಬೆಳ್ಳುಳ್ಳಿ ಬೆಂದು ಸೃಷ್ಟಿಯಾದ ಕಮಟು ವಾಸನೆ, ಸುಟ್ಟುಹೋದ ಬಲಿತ ಮಾವಿನ ಹಣ್ಣುಗಳ ರಾಶಿಯಿಂದ ಒಸರುತ್ತಿದ್ದ ರಸ...

ಕಲ್ಲಾಪುವಿನ ಗ್ಲೋಬಲ್‌ ಮಾರ್ಕೆಟ್‌ನಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದ  ಬಳಿಕ ಕಂಡು ಬಂದ ದೃಶ್ಯಗಳಿವು. ಪುಟ್ಟ ಬುಲ್‌ಡೋಜರ್‌ ಯಂತ್ರಗಳು ಬೆಂದು ಕರಕಲಾದ ಹಣ್ಣು ತರಕಾರಿಗಳನ್ನು ಹೊರಗೆಳೆದು ತರುತ್ತಿದ್ದ ದೃಶ್ಯ ಕಂಡು ಮಳಿಗೆಗಳ ಮಾಲೀಕರ ಕಣ್ಣಾಲಿಗಳು ತೇವಗೊಂಡವು.

ಇಲ್ಲಿ ಒಟ್ಟು 22 ಮಳಿಗೆ  ಬೆಂಕಿಯಿಂದ ಸುಟ್ಟುಹೋಗಿವೆ. ಅವುಗಳಲ್ಲಿದ್ದ ಹಣ್ಣು ಹಂಪಲುಗಳು ಸುಟ್ಟು ಕರಕಲಾಗಿವೆ.

‘ನಿನ್ನೆ ತಾನೆ ಮೂರು ಲೋಡ್‌ ಮಾವಿನ ಹಣ್ಣುಗಳನ್ನು ತರಿಸಿದ್ದೆ ಸಾರ್‌. ಚೆನ್ನಾಗಿ ಬಲಿತ ಮಲ್ಲಿಗೆ, ಬಾಗನ್‌ಪಲ್ಲಿ ಮಾವಿನ ಹಣ್ಣುಗಳವು. ಎಲ್ಲವೂ ಸುಟ್ಟು ಹೋಗಿವೆ. ಸ್ವಲ್ಪವೂ ಉಳಿದಿಲ್ಲ. ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎನ್ನುವಾಗ ಬಿ.ಎಸ್.ಆರ್  ಮಳಿಗೆಯ ಮಾಲೀಕ ಸಲಾಂ ಮಾತುಗಳು ನಡುಗುತ್ತಿದ್ದವು.

‘ಮಾವಿನ ಹಣ್ಣಿನ ಪೂರೈಕೆ ಕಡಿಮೆ ಇದೆ. ಹಾಗಾಗಿ ಹಣ್ಣುಗಳಿಗೆ ಒಳ್ಳೆಯ ದರವಿತ್ತು. ಇಂತಹ ಉತ್ತಮ ಹಣ್ಣುಗಳೇ ಸಿಗುತ್ತಿರಲಿಲ್ಲ. ಮೂರು ಲೋಡ್‌ ಮಾವಿನ ಹಣ್ಣುಗಳು, ಅವುಗಳನ್ನು ಸಂಗ್ರಹಿಸಿಡುವ ಟ್ರೇಗಳು ನಷ್ಟವಾಗಿದ್ದರಿಂದ ಏನಿಲ್ಲವೆಂದರೂ ₹20 ಲಕ್ಷ ನಷ್ಟ ಉಂಟಾಗಿದೆ’ ಎಂದು ಅವರು ತಿಳಿಸಿದರು.

ಅಶ್ರಫ್‌ ಅವರ ಮಳಿಗೆಯಲ್ಲಿದ್ದ ಬೆಳ್ಳುಳ್ಳಿಯಲ್ಲಿ ಅರ್ಧಕ್ಕೂ ಹೆಚ್ಚು ಸುಟ್ಟು ಕರಕಲಾಗಿದೆ. ಅಳಿದುಳಿದ ಬೆಳ್ಳುಳ್ಳಿ ಅಗ್ನಿಶಾಮಕ ದಳದ ಸಿಬ್ಬಂದು ಬೆಂಕಿ ಹಾರಿಸಲು ನೀರು ಹಾಯಿಸಿದಾಗ ಒದ್ದೆಯಾಗಿದೆ. ‘ಒದ್ದೆಯಾದ ಬೆಳ್ಳುಳ್ಳಿಯನ್ನು ಯಾರು ಕೊಂಡುಕೊಳ್ಳುತ್ತಾರೆ’ ಎಂದು ಅಶ್ರಫ್‌ ಅಲವತ್ತುಕೊಂಡರು.

ಎಸ್ ಎನ್ ಫ್ರುಟ್ಸ್‌ ಮಾಲೀಕರು ಭಾನುವಾರ ಸಂಜೆಯಷ್ಟೇ ₹ 40 ಲಕ್ಷದ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಫ್ರೀಝರ್‌ಗಳ ಸಮೇತ ಎಲ್ಲವೂ ಸುಟ್ಟುಹೋಗಿವೆ.  

‘ಸಿಡಿಲು ಬಡಿದು ಮಾರುಕಟ್ಟೆಯಲ್ಲಿ ಬೆಂಕಿ ಸಂಭವಿಸಿರುವ ಸಾಧ್ಯತೆ ಇದೆ. ನಸುಕಿನಲ್ಲಿ 3 ಗಂಟೆ ಸುಮಾರಿಗೆ ಬೀಗ ಹಾಕಿದ್ದ ಅಂಗಡಿಗಳ ಒಳಗಿನಿಂದ ಬೆಂಕಿ ಕಾಣಿಸಿಕೊಂಡಿದ್ದು ಒಮ್ಮಿಂದೊಮ್ಮೆಲೇ 20ಕ್ಕೂ ಹೆಚ್ಚು ಮಳಿಗೆಗಳಿಗೆ ವ್ಯಾಪಿಸಿದೆ. ಮಾರುಕಟ್ಟೆ ವಹಿವಾಟು ಮಳೆಗಾಲದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಆರಂಭವಾಗುತ್ತದೆ. ಮಾರುಕಟ್ಟೆಗೆ ಬಂದ ಕಾರ್ಮಿಕರು ಬೆಂಕಿಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸಿ  ಬೆಂಕಿ ನಂದಿಸಿದ್ದಾರೆ‘ ಎಂದರು.

ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ತರಕಾರಿ ಮಳಿಗೆಗಳು ಇರುವ ಕಡೆಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ. ಸುಮಾರು 60 ಮಳಿಗೆಗಳು ಸುರಕ್ಷಿತವಾಗಿವೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಉಳ್ಳಾಲ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್‌, ಕಾಂಗ್ರೆಸ್‌ ಮುಖಂಡ ಆರ್‌.ಪದ್ಮರಾಜ್‌ ಭೇಟಿ ನೀಡಿ ಪರಿಶೀಲಿಸಿದರು. 

ಗ್ಲೋಬಲ್ ಮಾರ್ಕೆಟ್‌ನ ಮಳಿಗೆಗಳಲ್ಲಿದ್ದ ಹಣ್ಣು ಹಂಪಲುಗಳು  ಸುಟ್ಟು ಕರಕಲಾಗಿವೆ - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಗ್ಲೋಬಲ್ ಮಾರ್ಕೆಟ್‌ನ ಮಳಿಗೆಗಳಲ್ಲಿದ್ದ ಹಣ್ಣು ಹಂಪಲುಗಳು  ಸುಟ್ಟು ಕರಕಲಾಗಿವೆ - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

3  ವರ್ಷ ಹಿಂದೆ ಆರಂಭವಾಗಿದ್ದ ಮಾರ್ಕೆಟ್‌

ಕಲ್ಲಾಪು ಗ್ಲೋಬಲ್‌ ಮಾರ್ಕೆಟ್‌ಗೆ  ಜುಲೈ 24ರಂದು ಮೂರು ವರ್ಷ ತುಂಬಲಿದೆ.  ಕೋವಿಡ್‌ ಸಂದರ್ಭದಲ್ಲಿ ಹಣ್ಣು ಹಂಪಲು ಹಾಗೂ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಆರಂಭವಾದ ಈ ಮಾರುಕಟ್ಟೆ ಬಲುಬೇಗ ಜನಪ್ರಿಯವಾಗಿತ್ತು. ಮಂಗಳೂರು ನಗರದ ಬಹುತೇಕ ಹಣ್ಣು– ತರಕಾರಿ ವರ್ತಕರು ಸಗಟು ವ್ಯಾಪಾರಕ್ಕೆ ಈ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಇಲ್ಲಿ ಒಟ್ಟು 170 ಮಳಿಗೆಗಳಿವೆ

‘₹10 ಕೋಟಿಗೂ ಹೆಚ್ಚು ನಷ್ಟ’

‘ಬೆಂಕಿ ಅವಘಡದಿಂದ 6 ದೊಡ್ಡ ಹಾಗೂ 16 ಸಣ್ಣ ಮಳಿಗೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ವ್ಯಾಪಾರಿಗಳಿಗೆ ಏನಿಲ್ಲವೆಂದರೂ ₹ 10 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ’ ಎನ್ನುತ್ತಾರೆ ಗ್ಲೋಬಲ್ ಮಾರ್ಕೆಟ್‌ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಮ್ಮದ್‌ ಫೈರೋಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಮಾರುಕಟ್ಟೆಯಲ್ಲಿರುವ ಎಸ್.ಎನ್ ಫ್ರೂಟ್ಸ್ ಮಳಿಗೆಯ ನವೀದ್ ಅವರಿಗೆ ₹ 1 ಕೋಟಿ ಕೆಎಫ್‌ಕೆ ಫ್ರುಟ್ಸ್‌ ಮಳಿಗೆಯ ಸುಹೈಲ್ ಅವರಿಗೆ ₹ 40 ಲಕ್ಷ ಕೆ.ಕೆ.ಫ್ರುಟ್ಸ್‌ನ ಲತೀಫ್ ವರಿಗೆ ‌₹ 70 ಲಕ್ಷ ಇಂಡಿಯನ್‌ ಮಳಿಗೆಯವರಿಗೆ ₹ 60 ಲಕ್ಷ ಬಿ.ಎಸ್.ಆರ್  ಮಳಿಗೆಯ ಸಲಾಂ ಅವರಿಗೆ ₹ 20 ಲಕ್ಷ ಪಿಕೆಎಸ್ ಮಳಿಗೆಯ ಝುಲ್ಫಿಕರ್ ಅವರಿಗೆ ₹  20 ಲಕ್ಷ ಕೆಜಿಎನ್ ಫ್ರುಟ್ಸ್ನ ನಾಸೀರ್ ಅವರಿಗೆ ₹ 20 ಲಕ್ಷ ನಷ್ಟ ಉಂಟಾಗಿರಬುದು ಎಂದು ಅಂದಾಜಿಸಲಾಗಿದೆ. ಈ ದೊಡ್ಡ ಮಳಿಗೆಗಳ ಅಕ್ಕ ಪಕ್ಕದಲ್ಲಿದ್ದ ಗಣೇಶ್ ಇಮ್ತಿಯಾಜ್‌ ಅಮೀರ್ ಸೇರಿದಂತೆ ಒಟ್ಟು 16 ಪುಟ್ಟ ಮಳಿಗೆಗಳೂ ‌‌‌ ಸುಟ್ಟುಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT