ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮುದ್ರದ ಎದುರೇ ನೀರಿಗೆ ಬರ!

ಸಚಿವರ ಮುಂದೆ ಮಹಿಳೆಯರ ಮನವಿ
Last Updated 24 ಫೆಬ್ರುವರಿ 2021, 4:16 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಹಳೆ ಬಂದರಿನ ಮೀನುಗಾರಿಕಾ ದಕ್ಕೆಯಲ್ಲಿ ಮೀನು ಕತ್ತರಿಸುವ ಉದ್ಯೋಗ ನಡೆಸುವ ಮಹಿಳೆಯರು ನೀರಿಗಾಗಿ ಪರದಾಡುವಂತಾಗಿದೆ. ಜಲರಾಶಿಯ ಎದುರೇ ಇದ್ದರೂ, ಅವರಿಗೆ ಮೀನು ಸ್ವಚ್ಛಗೊಳಿಸಲು ನೀರಿಗೆ ತತ್ವಾರ ಬಂದಿದೆ.

ಮೀನು ಕತ್ತರಿಸಲು ಇಲ್ಲಿ ಮಹಿಳೆಯರು ಹಾಗೂ ಪುರುಷರು ಶೆಡ್‌ ಅಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಶೆಡ್ ಸಂಪೂರ್ಣ ಶಿಥಿಲವಾಗಿದ್ದು, ಕಂಬಗಳು ಮುರಿದಿವೆ. ಶೀಟ್‌ ಮುರಿದು ಬೀಳುವ ಸ್ಥಿತಿಯಲ್ಲಿದೆ.

‘ನಾವು ಜೀವನೋಪಾಯಕ್ಕಾಗಿ ಹಲವಾರು ವರ್ಷಗಳಿಂದ ಮೀನು ಕತ್ತರಿಸುವ ಕೆಲಸ ಮಾಡುತ್ತಿದ್ದೇವೆ. ಸ್ಟೇಟ್ ಬ್ಯಾಂಕ್ ಮಾರ್ಕೆಟ್‌ನಲ್ಲಿ ನಮಗೆ ಸ್ಥಳ ಸಿಗುವುದಿಲ್ಲ. ಇಲ್ಲಿ ಇರುವ ಶೆಡ್‌ನಲ್ಲಿ ಕುಳಿತು ಕೆಲಸ ಮಾಡಲು ಭಯವಾಗುತ್ತದೆ. 50ಕ್ಕೂ ಹೆಚ್ಚು ಮಹಿಳೆಯರು, 25ರಷ್ಟು ಪುರುಷರು ನಿತ್ಯ ಇಲ್ಲಿ ಮೀನು ಕತ್ತರಿಸುವ ಕೆಲಸ ಮಾಡುತ್ತಾರೆ. ಶೆಡ್‌ನ ಶೀಟ್ ಹಳೆಯದಾಗಿದ್ದು, ಒಮ್ಮೆ ಮುರಿದು ಬಿದ್ದಿತ್ತು. ಕಬ್ಬಿಣದ ಕಂಬಗಳು ತುಕ್ಕು ಹಿಡಿದು, ಮುರಿದಿವೆ. ಮರದ ತುಂಡು ಇಟ್ಟು ತಾತ್ಕಾಲಿಕ ದುರಸ್ತಿಯನ್ನು ಮಾಡಿಕೊಂಡಿದ್ದೇವೆ’ ಎಂದು ಮೀನುಗಾರ ಮಹಿಳೆಯರಾದ ಗಿರಿಜಾ, ಬೇಬಿ ಅಸಹಾಯಕತೆ ವ್ಯಕ್ತಪಡಿಸಿದರು.

‘ಮೀನು ಸ್ವಚ್ಛಗೊಳಿಸಲು, ನೀರಿನ ವ್ಯವಸ್ಥೆ ಇಲ್ಲ. ಸಮುದ್ರದಿಂದ ಬಕೆಟ್‌ನಲ್ಲಿ ನೀರು ತರಬೇಕು. ಕಾರ್ಖಾನೆಯ ತ್ಯಾಜ್ಯ ಸೇರುವ ಈ ನೀರಿನಲ್ಲಿ ಹುಳುಗಳು ಇರುತ್ತವೆ. ನೀರಿನ ಸಮೀಪ ಇದ್ದರೂ, ನಮಗೆ ಅಗತ್ಯ ಬಳಕೆಗೆ ನೀರಿಲ್ಲ’ ಎಂದು ತನುಜಾ, ಶಶಿಕಲಾ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಬಂದರಿಗೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರನ್ನು ಭೇಟಿ ಮಾಡಿದ ಮಹಿಳೆಯರು, ಶೆಡ್ ಪುನರ್ ನಿರ್ಮಾಣ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಮುಂದಿಟ್ಟರು. ಮೀನುಗಾರಿಕೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಸಚಿವ ಅಂಗಾರ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT