ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮೀನಿಗೂ ಬೆಂಬಲ ಬೆಲೆಗೆ ಆಗ್ರಹ

Published 6 ಜನವರಿ 2024, 5:32 IST
Last Updated 6 ಜನವರಿ 2024, 5:32 IST
ಅಕ್ಷರ ಗಾತ್ರ

ಮಂಗಳೂರು: ಕೋಟ್ಯಂತರ ಮೊತ್ತದ ವಹಿವಾಟು ನಡೆಯುವ ಮೀನಿಗೂ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬ ಕೂಗು ಕರಾವಳಿಯ ಮೂರು ಜಿಲ್ಲೆಗಳಿಂದ ಕೇಳಿಬಂದಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಸಂಘಗಳ ಕ್ರಿಯಾ ಸಮಿತಿ ಈ ಕುರಿತು ಮೀನುಗಾರಿಕೆ ಇಲಾಖೆಗೆ ಮನವಿ ಸಲ್ಲಿಸಿದ್ದು ಪೂರಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

‘ಎಲ್ಲ ವಲಯಗಳೂ ಈಗ ಆಧುನಿಕವಾಗಿವೆ. ಅದಕ್ಕೆ ತಕ್ಕಂತೆ ಬದಲಾವಣೆಗಳೂ ಆಗಿವೆ. ಆದರೆ ಮೀನುಗಾರಿಕೆಯಲ್ಲಿ ತಂತ್ರಜ್ಞಾನ ಬದಲಾದರೂ ಮೀನುಗಾರರ ಪರಿಸ್ಥಿತಿ ಬದಲಾಗಲಿಲ್ಲ. ಬೋಟ್ ಮಾಲೀಕರು ಅನೇಕ ಕಾರಣಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ’ ಎಂದು ಮಂಗಳೂರು ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರರ ಒಟ್ಟು 68 ಸಂಘ–ಸಂಸ್ಥೆಗಳಿವೆ. ಅವುಗಳ ಪ್ರಮುಖರನ್ನು ಸೇರಿಸಿಕೊಂಡು ಕ್ರಿಯಾ ಸಮಿತಿ ರೂಪಿಸಲಾಗಿದ್ದು ಇಲಾಖೆಯ ನಿರ್ದೇಶಕರ ಜೊತೆ ಗುರುವಾರ ಮಾತುಕತೆ ನಡೆದಿದೆ. ನಮ್ಮನ್ನೂ ರೈತರ ಪಾಲಿಗೆ ಸೇರಿಸಿ, ನಷ್ಟವಾದಾಗ ಕೈ ಹಿಡಿಯುವಂತೆ ಕೋರಲಾಗಿದೆ. ಸಮರ್ಪಕ ಯೋಜನೆಗಳನ್ನು ಜಾರಿಗೆ ತರುವ ಭರವಸೆ ಲಭಿಸಿದೆ’ ಎಂದು ಚೇತನ್ ವಿವರಿಸಿದರು.

‘ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ, ವ್ಯವಹಾರದಲ್ಲಿ ನಡೆಯುತ್ತಿರುವ ಸ್ಪರ್ಧೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುವುದಿಲ್ಲ. ಟ್ರಾಲ್‌ ಬೋಟ್‌ಗಳ ಮಾಲೀಕರಿಗೂ ಪರ್ಸಿನ್ ಬೋಟ್‌ಗಳ ಮಾಲೀಕರಿಗೂ ವಿಭಿನ್ನ ಸಮಸ್ಯೆಗಳು ಇವೆ. ತಮಿಳುನಾಡು ಮತ್ತು ಕೇರಳ ಭಾಗಕ್ಕೆ ಹೋದರೆ ದೋಣಿ ಒಡೆದು ಹಾಕುವುದು ಸೇರಿದಂತೆ ನಾನಾ ರೀತಿಯ ತೊಂದರೆ ಕೊಡುತ್ತಾರೆ ಎಂಬುದನ್ನು ನಿರ್ದೇಶಕರ ಗಮನಕ್ಕೆ ತರಲಾಗಿದೆ. ಮೀನುಗಾರಿಕೆಗೆ ನಡೆಯುವ ಪ್ರದೇಶಗಳನ್ನು ವಿವಿಧ ವಲಯಗಳನ್ನಾಗಿ ಮಾಡುವುದಕ್ಕಿಂತ ಪೂರ್ವ ಮತ್ತು ಪಶ್ಚಿಮ ಎಂಬ ಎರಡೇ ವಲಯಗಳನ್ನು ಮಾಡುವಂತೆಯೂ ಕೋರಲಾಗಿದೆ. ಸದ್ಯ ಯಾವುದೂ ಅಂತಿಮ ಆಗಲಿಲ್ಲ. ಆದ್ದರಿಂದ ಸರ್ಕಾರದ ನಡೆಗಾಗಿ ಕಾದುನೋಡಬೇಕಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT