ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ 10 ತಿಂಗಳಿಂದ ಸಿಕ್ಕಿಲ್ಲ ಸೀಮೆಎಣ್ಣೆ: ಯು.ಟಿ.ಖಾದರ್‌

ಪೂರೈಕೆಗೆ 10 ದಿನಗಳ ಗಡುವು * ಪ್ರತಿಭಟನೆ ಎಚ್ಚರಿಕೆ
Last Updated 5 ಡಿಸೆಂಬರ್ 2022, 14:38 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳುಗಳಿಂದ ಸೀಮೆಎಣ್ಣೆ ಪೂರೈಕೆ ಆಗದ ಕಾರಣ ಸಣ್ಣ ದೋಣಿಗಳು ಹಾಗೂ ಗಿಲ್‌ನೆಟ್‌ ದೋಣಿಗಳು ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನೀಗಿಸಲು 10 ದಿನಗಳ ಒಳಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸಣ್ಣ ದೋಣಿಗಳ ಮೀನುಗಾರರಿಗೆ ವರ್ಷಕ್ಕೆ 3 ಸಾವಿರ ಲೀಟರ್‌ ಸೀಮೆಎಣ್ಣೆಯನ್ನು ಉಚಿತವಾಗಿ ವಿತರಿಸಲು ಕ್ರಮಕೈಗೊಂಡಿತ್ತು. ಈ ಸವಲತ್ತಿನಿಂದ ಮೀನುಗಾರರು ವಂಚಿತರನ್ನಾಗಿ ಮಾಡಲಾಗಿದೆ’ ಎಂದರು.

‘ಬಿಜೆಪಿ ಆಡಳಿತದ ಅವಧಿಯಲ್ಲಿ ಮೀನುಗಾರರ ಒಂದೇ ಒಂದು ಮನೆಯೂ ನಿರ್ಮಾಣವಾಗಿಲ್ಲ. ಮನೆ ನಿರ್ಮಾಣಕ್ಕೆ ಇತ್ತೀಚೆಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಉಳ್ಳಾಲ ಕ್ಷೇತ್ರಕ್ಕೆ ಕೇವಲ 10 ಮನೆ, ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ಕ್ಷೇತ್ರಗಳಿಗೆ ತಲಾ 25 ಮನೆಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಮೀನುಗಾರರ ಸಂಖ್ಯೆ ಕಡಿಮೆ ಇರುವ ಬೆಳಗಾವಿಗೆ 250 ಮನೆಗಳನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಮೀನುಗಾರರು ಸವಲತ್ತಿನಿಂದ ವಂಚಿತರಾಗಿದ್ದರೂ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ.ವೈ.ಭರತ್ ಶೆಟ್ಟ ಸೊಲ್ಲೆತ್ತಿಲ್ಲ’ ಎಂದು ಆರೋಪಿಸಿದರು.

ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್‌ ಬೆಂಗ್ರೆ, ‘ನಾಡದೋಣಿ ದುರಸ್ತಿಗೆ ₹ 2 ಲಕ್ಷ ಸಬ್ಸಿಡಿಯನ್ನೂ ನೀಡಲಾಗುತ್ತಿತ್ತು. ಅದನ್ನೂ ಸ್ಥಗಿತಗೊಳಿಸಲಾಗಿದೆ. ನಮಗೆ ದುಡಿಯುವುದಕ್ಕೆ ಅವಕಾಶ ಇರುವುದು ವರ್ಷದಲ್ಲಿ ಮೂರು– ನಾಲ್ಕು ತಿಂಗಳು ಮಾತ್ರ. ಈ ಋತುವಿನಲ್ಲೇ ಸೀಮೆಎಣ್ಣೆ ಪೂರೈಸದಿದ್ದರೆ ಮೀನುಗಾರರು ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಮಂಗಳೂರಿನಲ್ಲಿ 8 ಸಾವಿರಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಿವೆ. ಈ ಹಿಂದೆ 100 ಅಶ್ವಶಕ್ತಿಯ ಎಂಜಿನ್‌ನ ದೋಣಿಗಳಿಗೆ ತಿಂಗಳಿಗೆ ಸಬ್ಸಿಡಿ ದರದಲ್ಲಿ 1.5 ಸಾವಿರ ಲೀಟರ್‌ ಡೀಸೆಲ್‌ ನೀಡುತ್ತಿದ್ದರು. ಈಗ ದೋಣಿಗಳ ಎಂಜಿನ್‌ ಸಾಮರ್ಥ್ಯ 350 ಅಶ್ವಶಕ್ತಿಗೆ ಹೆಚ್ಚಳವಾಗಿದೆ. ಆದರೆ ಅದಕ್ಕನುಗುಣವಾಗಿ ಸಬ್ಸಿಡಿ ಹೆಚ್ಚು ಮಾಡಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಹಳೆಬಂದರು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕೂ ಕತ್ತರಿ ಹಾಕಲಾಗಿದೆ’ ಎಂದು ದೂರಿದರು.

‘ಮೀನುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ವರಮಾನ ಹೆಚ್ಚುತ್ತಿದೆ. ಒಂದು ದೋಣಿಯಿಂದ 30ಕ್ಕೂ ಅಧಿಕ ಜನರಿಗೆ ಉದ್ಯೋಗ ಲಭಿಸುತ್ತದೆ. ಆದರೂ ಮೀನುಗಾರರ ಸಮಸ್ಯೆ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ಉಳ್ಳಾಲ್, ಪಕ್ಷದ ಮುಖಂಡರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಸುಬೋಧ್‌ ಆಳ್ವ, ನಾಡದೋಣಿ ಮೀನುಗಾರರ ಸಂಘದ ಮುಖಂಡ ಹಸನ್‌ ಆಲಿ, ಸತೀಶ್‌ ಸಾಲ್ಯಾನ್‌, ಸತೀಶ್‌ ಕೋಟ್ಯಾನ್‌, ಗಿಲ್‌ನೆಟ್‌ ಮೀನುಗಾರರ ಮುಖಂಡ ಹನೀಫ್‌ ಕೋಟೆಪುರ, ಪಾವೂರು ಮೋನಕ್ಕ ಹಾಗೂ ಇತರರು ಇದ್ದರು.

ಬಿಜೆಪಿಯವರಿಗೆ ಮೀನುಗಾರರ ಮತಗಳು ಮಾತ್ರ ಬೇಕು. ಮೀನುಗಾರರಿಗೆ ಸವಲತ್ತು ಕಲ್ಪಿಸುವ ಬಗ್ಗೆ ಆ ಪಕ್ಷದ ಮುಖಂಡರಿಗೆ ಕಿಂಚಿತ್‌ ಕಾಳಜಿಯೂ ಇಲ್ಲ.

–ಯು.ಟಿ.ಖಾದರ್‌, ವಿಧಾನಸಭೆಯಲ್ಲಿ ವಿರೋಧಪಕ್ಷದ ಉಪನಾಯಕ

ಉಡುಪಿಗೆ ಮುಖ್ಯಮಂತ್ರಿಯವರು ಈಚೆಗೆ ಭೇಟಿ ನೀಡಿದಾಗ ಪ್ರತಿಭಟಿಸಲು ಮೀನುಗಾರರು ಮುಂದಾಗಿದ್ದರು. ಟ್ಯಾಂಕರ್‌ನಲ್ಲಿ ಸೀಮೆಎಣ್ಣೆ ಕಳುಹಿಸುವ ನಾಟಕವಾಡಿ, ದಾರಿತಪ್ಪಿಸಿದರು

–ಚೇತನ್‌ ಬೆಂಗ್ರೆ, ಅಧ್ಯಕ್ಷರು ಟ್ರಾಲ್ ಬೋಟ್‌ ಮೀನುಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT