ಬುಧವಾರ, ಜೂನ್ 16, 2021
21 °C
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ದ.ಕ. ಕರಾವಳಿಯಲ್ಲಿ ಸೆ.1 ರಿಂದ ಮೀನುಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸೆಪ್ಟೆಂಬರ್‌ 1ರಿಂದ ಮೀನುಗಾರಿಕೆ ಆರಂಭವಾಗಲಿದೆ. ಕೋವಿಡ್‌ ಸೋಂಕಿನ ಕಾರಣದಿಂದ ಕೆಲವು ಷರತ್ತುಗಳೊಂದಿಗೆ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮೀನುಗಾರಿಕೆ ಆರಂಭಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಆಗಸ್ಟ್‌ 1ರಿಂದಲೇ ಮೀನುಗಾರಿಕೆ ಆರಂಭವಾಗಿತ್ತು. ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ಮೀನುಗಾರರು ಮತ್ತು ಮೀನುಗಾರಿಕಾ ಉದ್ಯಮದ ಹಿತದೃಷ್ಟಿಯಿಂದ ಸೆ.1ರಿಂದ ಮೀನುಗಾರಿಕೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ’ ಎಂದರು.

ಉಚಿತ ಕೋವಿಡ್‌ ಪರೀಕ್ಷೆ:

ಮೀನುಗಾರಿಕೆ ಕಾರ್ಮಿಕರಲ್ಲಿ ಶೇ 75ರಷ್ಟು ಜನರು ಹೊರ ರಾಜ್ಯದವರಿದ್ದಾರೆ. ಅವರೆಲ್ಲರೂ ಜಿಲ್ಲೆಗೆ ಮರಳುವ ಮುನ್ನ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಬರುವಾಗಲೇ ಕೋವಿಡ್‌ ತಪಾಸಣಾ ವರದಿಯನ್ನು (ನೆಗೆಟಿವ್‌) ತರುವ ಕಾರ್ಮಿಕರನ್ನು ನೇರವಾಗಿ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಉಳಿದವರಿಗೆ ಜಿಲ್ಲಾಡಳಿತದಿಂದ ಉಚಿತವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ‘ನೆಗೆಟಿವ್‌’ ವರದಿ ಬಂದವರನ್ನು ಕ್ವಾರಂಟೈನ್‌ಗೆ ಮತ್ತು ಸೋಂಕು ದೃಢಪಟ್ಟವರನ್ನು ಚಿಕಿತ್ಸೆಗೆ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಹೊರ ರಾಜ್ಯಗಳಿಂದ ಬರುವ ಎಲ್ಲರಿಗೂ ಮಾರ್ಗಸೂಚಿಯಂತೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ. ಕಾರ್ಮಿಕರ ಕ್ವಾರಂಟೈನ್‌ ಜವಾಬ್ದಾರಿಯನ್ನು ಅವರನ್ನು ಕರೆತರುವ ಮೀನುಗಾರಿಕೆ ದೋಣಿಗಳ ಮಾಲೀಕರು ನಿರ್ವಹಿಸಬೇಕು. ದೋಣಿಗಳಲ್ಲೇ ಅಂತರ ಕಾಯ್ದುಕೊಂಡು, ಕ್ವಾರಂಟೈನ್‌ನಲ್ಲಿ ಇರಲು ಅವಕಾಶ ನೀಡುವಂತೆ ದೋಣಿ ಮಾಲೀಕರು ಮನವಿ ಮಾಡಿದ್ದಾರೆ. ಅದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಕಾರ್ಮಿಕರ ಕ್ವಾರಂಟೈನ್‌ ಕುರಿತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಾರೆ. ನಿತ್ಯವೂ ಮೀನುಗಾರಿಕಾ ಮಾರುಕಟ್ಟೆಯನ್ನು ಸ್ಯಾನಿಟೈಸ್‌ ಮಾಡುವುದು ಕಡ್ಡಾಯ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಚಿಲ್ಲರೆ ವ್ಯಾಪಾರ ನಿಷೇಧ: ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ‘ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು’ ಎಂದರು.

ಮೀನುಗಾರಿಕಾ ದಕ್ಕೆಯಲ್ಲಿ ನಿತ್ಯ 6,000ದಿಂದ 7,000 ಜನರು ವ್ಯಾಪಾರ, ವಹಿವಾಟಿನಲ್ಲಿ ಭಾಗಿಯಾಗುತ್ತಾರೆ. ಅವರ ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವುದು ಮತ್ತು ಅಂತರ ಕಾಯ್ದುಕೊಳ್ಳುವ ಕೆಲಸಗಳನ್ನು ಮೀನುಗಾರರ ಸಂಘಗಳು ನಿರ್ವಹಿಸಲಿವೆ. ಈ ಕುರಿತು ಸಂಘದ ಸದಸ್ಯರಿಗೆ ಜಿಲ್ಲಾಡಳಿತದಿಂದ ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ, ಹಿರಿಯ ಸಹಾಯಕ ನಿರ್ದೇಶಕ ದಿನೇಶ್‌ ಕುಮಾರ್‌ ಕಳ್ಳೇರ ಹಾಗೂ ವಿವಿಧ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.