ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್: ಖಂಡೆವು ಮೀನು ಹಿಡಿಯುವ ಜಾತ್ರೆ ಸಂಭ್ರಮ

Published 15 ಮೇ 2024, 4:51 IST
Last Updated 15 ಮೇ 2024, 4:51 IST
ಅಕ್ಷರ ಗಾತ್ರ

ಸುರತ್ಕಲ್: ಇತಿಹಾಸ ಪ್ರಸಿದ್ಧ ‘ಎರ್ಮಾಳು ಜಪ್ಪು– ಖಂಡೇವು ಅಡೆಪು’ ಎಂಬ ನಾಣ್ಣುಡಿಯಂತೆ ಖಂಡಿಗೆ ಜಾತ್ರೆ ಮಂಗಳವಾರ ಪ್ರಾರಂಭವಾಯಿತು.

ಒಂದು ತಿಂಗಳ ಹಿಂದೆ ಉಳ್ಳಾಯ ದೈವಸ್ಥಾನದ ಪ್ರಸಾದವನ್ನು ನದಿಗೆ ಹಾಕಿ ಪ್ರಸಾದ ಹಾಕಿದ ದಿನದಿಂದ ನದಿಯಲ್ಲಿ ಮೀನು ಹಿಡಿಯುವಂತಿಲ್ಲ. ಜಾತ್ರೆಯ ಪ್ರಥಮ ದಿನವೇ ನಂದಿನಿ ನದಿಯಲ್ಲಿ ಮೀನು ಹಿಡಿಯಬೇಕು ಎನ್ನುವ ಆಚರಣೆ ಹಿಂದಿನಿಂದಲೂ ರೂಢಿಯಲ್ಲಿದೆ.

ಹಿಂದೆ ಸಾವಿರಾರು ಜನ ಬಂದು ಮೀನು ಹಿಡಿಯುತ್ತಿದ್ದರು. ಪ್ರತಿ ಮನೆಯವರೂ ಮೀನು ಹಿಡಿದು ಮನೆಯಲ್ಲಿ ಸಾಂಬರು ಮಾಡಿ ಬಡಿಸುವ ಕ್ರಮ ಇತ್ತು. ಆದರೆ, ಇತ್ತೀಚಿನ ಮೂರು ನಾಲ್ಕು ವರ್ಷಗಳಿಂದ ಈ ಆಚರಣೆಗೆ ಧಕ್ಕೆಯಾಗುತ್ತಿದೆ. ಕಾರಣಿಕ ಕ್ಷೇತ್ರ ಉಳ್ಳಾಯ ದೈವಸ್ಥಾನದ ನಂದಿನಿ ನದಿಯಲ್ಲಿ ಕಸ, ಹೂಳು ತುಂಬಿ ಮೀನು ಹಿಡಿಯುವುದು ಕಷ್ಟವಾಗಿದೆ. ಈಗ ಮೀನು ಹಿಡಿಯುವವರ ಸಂಖ್ಯೆಯೂ ಕಡಿಮೆಯಾಗಿದ್ದು, ನದಿಯ ನೀರು ಖಾಸಗಿ ಆಸ್ಪತ್ರೆಯ ಕಶ್ಮಲ ನೀರಿನಿಂದ ಪೂರ್ತಿ ಕಲುಷಿತಗೊಂಡಿದೆ ಎನ್ನುತ್ತಾರೆ ಉಳ್ಳಾಯ ದೈವಸ್ಥಾನದ ಅಡಳಿತ ಸಮಿತಿ ಕೋಶಾಧಿಕಾರಿ ಸುಧಾಕರ ಶೆಟ್ಟಿ ಖಂಡಿಗೆ.

ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಂಪ್ರದಾಯಿಕವಾಗಿ ಮೀನು ಹಿಡಿಯುವ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಖಂಡಿಗೆ ನಂದಿನಿ ನದಿಯ ಹೂಳು ತುಂಬಿದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಕಳೆದ ವರ್ಷ ನಾನು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ನದಿಯ ಹೂಳೆತ್ತಲು ಸುಮಾರು ₹ 5 ಕೋಟಿಯ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ಬದಲಾವಣೆಯಾದ ಕಾರಣ ಅನುದಾನದ ಕೊರತೆ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುವುದಾಗಿ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ನಂದಿನಿ ನದಿ ಕಲುಷಿತಗೊಂಡಿರುವ ಕಾರಣ ನೂರಾರು ಕೃಷಿ ಕುಟುಂಬಗಳು ಬೀದಿ ಪಾಲಾಗಿವೆ. ಕುಡಿಯುವ ನೀರಿನ ಬಾವಿಯೂ ಕಲುಷಿತಗೊಂಡಿದ್ದು, ಈ ಬಗ್ಗೆ ಚೇಳೈರು ಗ್ರಾಮ ಪಂಚಾಯಿತಿಯಿಂದ ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಚೇಳೈರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ ದೂರಿದರು.

ತುಳುನಾಡಿನಲ್ಲೇ ಪ್ರಸಿದ್ದವಾದ ಖಂಡೇವಿನ ಮೀನು ಹಿಡಿಯುವ ಜಾತ್ರೆ ನಡೆಯುವ ನಂದಿನಿ ನದಿ ಕಲುಷಿತಗೊಂಡಿರುವ ಕಾರಣ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿರುವ ನಮ್ಮ ಪಾರಂಪರಿಕ ಆಚರಣೆಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಮನಸ್ಸಿಗೆ ನೋವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕು ಎಂದು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ತೋಕೂರುಗುತ್ತು ಉದಯಕುಮಾರ್ ಶೆಟ್ಟಿ ಹೇಳಿದರು.

ನಂದಿನಿ ನದಿಯ ಮಾಲಿನ್ಯದಿಂದ ಸುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಇದನ್ನು ತಡೆಯಲು ಮತ್ತು ನದಿಯಲ್ಲಿ ಹೂಳೆತ್ತಲು ಆಗ್ರಹಿಸಿ ನಂದಿನಿ ನದಿ ಉಳಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಜಾತ್ರೆ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು. ಮಾಲಿನ್ಯ ತಡೆಯದಿದ್ದರೆ, ಹೂಳೆತ್ತದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ದಿವಾಕರ ಸಾಮಾನಿ ಚೇಳೈರುಗುತ್ತು ಹೇಳಿದರು.

ಖಂಡೇವಿನ ಮೀನು ಹಿಡಿಯುವ ಜಾತ್ರೆಯಲ್ಲಿ‌ ಪಾಲ್ಗೊಂಡಿದ್ದ ಸ್ಥಳೀಯರು
ಖಂಡೇವಿನ ಮೀನು ಹಿಡಿಯುವ ಜಾತ್ರೆಯಲ್ಲಿ‌ ಪಾಲ್ಗೊಂಡಿದ್ದ ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT