ಶುಕ್ರವಾರ, ಮಾರ್ಚ್ 24, 2023
22 °C
ವಿಡಿಯೊ ಸಂವಾದದಲ್ಲಿ ವರ್ತಕರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚನೆ

ಜಿಲ್ಲಾಡಳಿತದ ಆದೇಶ ಕಡ್ಡಾಯವಾಗಿ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 ನಿಯಂತ್ರಿಸಲು ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ವರ್ತಕರು ಪಾಲಿಸಬೇಕು. ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್‌ಕುಮಾರ್‌, ಜಿಲ್ಲೆಯ ಎಲ್ಲ ತಾಲ್ಲೂಕು ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಸರ್ಕಾರದ ಮುಂದಿನ ಆದೇಶದವರೆಗೂ ವರ್ತಕರು ಈ ಆದೇಶ ಪಾಲಿಸಬೇಕು. ಅದನ್ನು ಮೀರಿ ಅಂಗಡಿಗಳನ್ನು ತೆರೆದು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಥವರಿಗೆ ದಂಡ ವಿಧಿಸುವುದರೊಂದಿಗೆ, ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲ ಕ್ರಮಗಳ ಕುರಿತು ಮುಂದಿನ ವಾರದಲ್ಲಿ ವರ್ತಕರ ಪ್ರತಿನಿಧಿಗಳೊಂದಿಗೆ
ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೀತ, ಕೆಮ್ಮು ಮತ್ತು ಜ್ವರ ಎಂದು ಬರುವ ಜನರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟಲ್ಲಿ ಅಂಥವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು. ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದರೊಂದಿಗೆ, ಒಂದೇ ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚು ಸೋಂಕಿತರು ಕಂಡು ಬಂದಲ್ಲಿ ಅಂತಹ ಸ್ಥಳಗಳನ್ನು ಮೈಕ್ರೋ ಕಂಟೈನ್‌ಮೆಂಟ್ ವಲಯವಾಗಿ ಮಾಡಬೇಕು ಎಂದು ಹೇಳಿದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ಸೋಂಕಿತರ ಆರೋಗ್ಯದ ಮೇಲೆ ಸಂಬಂಧಿಸಿದ ವೈದ್ಯಾಧಿಕಾರಿಗಳು ನಿಗಾ ಇಡಬೇಕು. ಸೋಂಕಿತರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಅಂಥವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಕೂಡಲೇ ದಾಖಲಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

‘18 ವರ್ಷ ಮೇಲಿನವರಿಗೆ ಲಸಿಕೆ ಕಡ್ಡಾಯ’

ಜಿಲ್ಲೆಯ 18 ವರ್ಷ ಮೇಲಿನ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಆಯಾ ದಿನಗಳಂದು ಜಿಲ್ಲೆಗೆ ಬರುವ ಲಸಿಕೆಯನ್ನು ಅದೇ ದಿನವೇ ನೀಡಬೇಕು. ನಿತ್ಯ 15 ಸಾವಿರಕ್ಕೂ ಹೆಚ್ಚಿನ ಕೋವಿಡ್ ತಪಾಸಣೆ
ಮಾಡಬೇಕು, ಹೋಂ ಕ್ವಾರಂಟೈನ್‌ನಲ್ಲಿ ಇರುವ ಪ್ರತಿಯೊಬ್ಬರ ಮೇಲೆ ಆಯಾ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಗಾ ವಹಿಸಬೇಕು. ಅವರು ಹೊರಗೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಗಡಿ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು. ಕೋವಿಡ್ ಲಸಿಕೆ ನೀಡಬೇಕು. ಆಯಾ ಆರೋಗ್ಯಾಧಿಕಾರಿಗಳು ಕೋವಿಡ್ ನಿಯಂತ್ರಿಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.