ಮಂಗಳವಾರ, ಸೆಪ್ಟೆಂಬರ್ 21, 2021
28 °C
ಮಂಗಳೂರು ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ

ಕೊಪ್ಪಳ ಜಿಲ್ಲೆಯಲ್ಲಿ ಕೃಷ್ಣ ಮೃಗದ ಚರ್ಮ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ಅರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹುಣಸಿಹಾಳದಲ್ಲಿ ಕೃಷ್ಣ ಮೃಗದ ಚರ್ಮದ ದಂಧೆಯನ್ನು ಬೇಧಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ 20 ಕೃಷ್ಣ ಮೃಗದ ಚರ್ಮ, ಕೊಂಬು ಇರುವ 2 ಕೃಷ್ಣ ಮೃಗದ ಟ್ರೋಫಿ (ತಲೆಯ ಭಾಗ), ಒಂದು ಜೀವಂತ ಹೆಣ್ಣು ಮರಿ ಹಾಗೂ ಕೃತ್ಯಕ್ಕೆ ಬಳಸಿದ ಮೂರು ಬೈಕ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೃಷ್ಣ ಮೃಗದ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಹುಣಸಿಹಾಳ ಗ್ರಾಮದ ಮರಡಿ ಗ್ರಾಮದಲ್ಲಿ ಕೃಷ್ಣ ಮೃಗದ ಚರ್ಮ, ಕೊಂಬು ಮಾರಾಟ ಮಾಡುತ್ತಿರುವ ಬಗ್ಗೆ ಭಾನುವಾರ (ಇದೇ 6) ರಂದು ಮಾಹಿತಿ ದೊರೆತಿತ್ತು. ಅರಣ್ಯ ಘಟಕದ ಸಿಐಡಿ ಎಡಿಜಿಪಿ ಹಾಗೂ ಅರಣ್ಯ ಘಟಕದ ಮಡಿಕೇರಿಯ ಸಿಐಡಿ ಎಸ್ಪಿಯವರ ಮೌಖಿಕ ಆದೇಶದಂತೆ ಅರಣ್ಯ ಸಂಚಾರಿ ದಳದ ಸಬ್ ಇನ್‌ಸ್ಪೆಕ್ಟರ್‌ ಪುರುಷೋತ್ತಮ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಗೆ ತೆರಳಿತ್ತು.

ಸೋಮವಾರ ಸ್ಥಳಕ್ಕೆ ತೆರಳಿದ ತಂಡ, ಮೋಟಾರ್‌ ಸೈಕಲ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಹುಣಸಿಹಾಳ ತಾಂಡಾದ ತುಗ್ಗೆಪ್ಪ ಮಾಳಿ, ಶರಣಪ್ಪ ಚೌಹಾಣ, ಮಲ್ಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿಯನ್ನು ಬಂಧಿಸಿದೆ.

ಆರೋಪಿಗಳು ಹಾಗೂ ವಶಪಡಿಸಿಕೊಂಡ ಸ್ವತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಕೊಪ್ಪಳ ವಲಯ ಅರಣ್ಯಾಧಿಕಾರಿಗೆ ಹಸ್ತಾಂತರಿಸಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ಪುರುಷೋತ್ತಮ, ಹೆಡ್ ಕಾನ್‌ಸ್ಟೆಬಲ್‌ಗಳಾದ ಜಗನ್ನಾಥ ಶೆಟ್ಟಿ, ಪ್ರವೀಣ್‌, ಶಿವಾನಂದ, ಉದಯ ನಾಯ್ಕ್‌, ಮಹೇಶ್‌ ಹಾಗೂ ಸಿಬ್ಬಂದಿ ಜಗದೀಶ್ ಸಾಲ್ಯಾನ್‌ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.