ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಅಭಿವೃದ್ಧಿಗೆ ಶೀಘ್ರ ಅನುದಾನ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ

Last Updated 15 ಜುಲೈ 2021, 3:48 IST
ಅಕ್ಷರ ಗಾತ್ರ

ಸುರತ್ಕಲ್: ‘ಕೋವಿಡ್ ಕಾರಣಕ್ಕೆ ಒಂದು ವರ್ಷದಿಂದ ಎಪಿಎಂಸಿಗಳಿಗೆ ಅನುದಾನ ಒದಗಿಸಲು ಸಾಧ್ಯವಾಗಿಲ್ಲ. ಶೀಘ್ರ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯನ್ನು ವಿನಂತಿಸಲಾಗಿದೆ' ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಬೈಕಂಪಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ, ಉದ್ದೇಶಿತ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಸಹಕಾರ ಇಲಾಖೆ ಬಲವರ್ಧನೆಗೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದರು.

ರಾಜ್ಯದಲ್ಲಿ ಎಪಿಎಂಸಿಗಳಿಗೆ ಮೊದಲು ₹ 625 ಕೋಟಿ ಆದಾಯ ಬರುತ್ತಿತ್ತು. ಇದೀಗ ಸೆಸ್‌ ಕಡಿಮೆ ಮಾಡಿದ ನಂತರ ₹ 90 ರಿಂದ ₹ 105 ಕೋಟಿ ಆದಾಯ ಬರುತ್ತಿದೆ. ಇದು ಎಪಿಎಂಸಿಗಳ ನೌಕರರ ವೇತನ, ನಿರ್ವಹಣೆಗೆ ಸರಿಯಾಗುತ್ತಿದೆ. ಹೀಗಾಗಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮಂಗಳೂರು ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಮಾತನಾಡಿ, ಅವಸಾನದ ಅಂಚಿನಲ್ಲಿರುವ ಎಪಿಎಂಸಿಯ ಅಸ್ತಿತ್ವವನ್ನು ಉಳಿಸಲು ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕೆಲ ಎಪಿಎಂಸಿಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಮಂಗಳೂರು ಎಪಿಎಂಸಿಗೆ ಬೈಕಂಪಾಡಿಯಲ್ಲಿ 70 ಎಕರೆ ಜಾಗವಿದೆ. ಕೇಂದ್ರ ಸರ್ಕಾರ ರೂಪಿಸಿದ ಕಾಯ್ದೆಯಿಂದ ಬೆಳೆ ಬೆಳೆದ ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಿ ಲಾಭ ಪಡೆಯಬಹುದು. ಕ್ರಾಂತಿಕಾರಿ ಯೋಜನೆಗಳು ಬಂದಾಗ ತೊಡಕುಗಳಾಗುವುದು ಸಹಜ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ನಗರದಲ್ಲಿ ಎಪಿಎಂಸಿ ಜಾಗವಿದ್ದು, ಅದರ ಅತಿಕ್ರಮಣವನ್ನು ತೆರವುಗೊಳಿಸಿ ಅಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಿಸಬೇಕು ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷೆ ರಜನಿ ದಗ್ಗಣ್ಣ, ಕಾರ್ಯದರ್ಶಿ ಸಿ.ಎಚ್.ಮೋಹನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT